Psalms - Chapter 92
Holy Bible

1 : ಹೇ ಪ್ರಭೂ, ನಿನ್ನ ಗುಣಗಾನ ಮಂಗಳಕರ / ಪರಾತ್ಪರನೆ, ನಿನ್ನ ನಾಮಭಜನೆ ಹಿತಕರ //
2 : ಪ್ರಾತಃಕಾಲದಲೆ ನಿನ್ನ ಪ್ರೀತಿಯನು | ರಾತ್ರಿಕಾಲದಲೆ ನಿನ್ನ ಸತ್ಯತೆಯನು ||
3 : ವರ್ಣಿಸುವುದುಚಿತ ವೀಣಾ ಸ್ವರಮಂಡಲದಿಂದ / ಕೊಳಲ ದನಿಯಿಂದ, ಕಿನ್ನರಿಯ ನಾದಸ್ವರದಿಂದ //
4 : ನಿನ್ನ ಕಾರ್ಯಗಳಿಂದ ಪ್ರಭು, ನನ್ನನು ಆನಂದಗೊಳಿಸಿರುವೆ / ನಿನ್ನಾ ಕಾರ್ಯಗಳ ನೋಡಿ, ನಾನು ಉಲ್ಲಾಸದಿಂದ ಹಾಡುವೆ //
5 : ಪ್ರಭು, ನಿನ್ನ ಕೃತ್ಯಗಳೆನಿತೋ ಅಮೂಲ್ಯ / ನಿನ್ನಾಲೋಚನೆಗಳು ಎನಿತೋ ಅಶೋಧ್ಯ //
6 : ಇದನರಿಯನು ಪಶುಪ್ರಾಯನು / ಇದ ತಿಳಿಯನು ಬುದ್ಧಿಹೀನನು //
7 : ದುರುಳರು ಚಿಗುರಬಹುದು ಹುಲ್ಲಿನಂತೆ / ಕೆಡುಕರು ಅರಳಬಹುದು ಹೂವಿನಂತೆ / ಅವರ ಅಳಿವಂತೂ ಕಟ್ಟಿಟ್ಟ ಬುತ್ತಿಯಂತೆ //
8 : ನೀನಾದರೊ ಪ್ರಭು, ಸರ್ವದಾ ಇರುವೆ / ಮಹೋನ್ನತದೊಳು ವಿರಾಜಿಸುತ್ತಿರುವೆ //
9 : ಕಾಡುಕೋಣದ ಕೊಂಬಿನ ಬಲವನು ನನಗಿತ್ತಿರುವೆ / ಚೈತನ್ಯದ ತೈಲದಿಂದ ನನ್ನನು ಅಭ್ಯಂಜಿಸಿರುವೆ //
10 : ನಿನ್ನ ಶತ್ರುಗಳ ವಿನಾಶ ನಿಶ್ಚಿತ / ಕೆಡುಕರೆಲ್ಲ ಚದರಿ ಪೋಪುದು ಖಚಿತ //
11 : ನಾ ಕಣ್ಣಾರೆ ಕಂಡಿರುವೆ ಶತ್ರುಗಳಿಗಾದ ದುರ್ಗತಿಯನು / ಕಿವಿಯಾರೆ ಕೇಳಿರುವೆ ನನ್ನ ವಿರೋಧಿಗಳಿಗಾದ ವಿಪತ್ತನು //
12 : ಬೆಳೆಯುವರು ಸಜ್ಜನರು ಖರ್ಜೂರದ ವೃಕ್ಷದಂತೆ / ವೃದ್ಧಿಯಾಗುವರು ಲೆಬನೋನಿನ ದೇವದಾರಿನಂತೆ //
13 : ಅವರಿರುವರು ಪ್ರಭುವಿನಾಲಯದಲೆ ನೆಟ್ಟ ಸಸಿಗಳಂತೆ / ನಮ್ಮ ದೇವಾಂಗಳದಿ ಹುಲುಸಾಗಿ ಬೆಳೆವ ಮರಗಳಂತೆ /
14 : ಫಲಿಸುವರು ಮುಪ್ಪಿನಲೂ, ಶೋಭಿಸುವರು ಪಚ್ಚೆಪಸಿರಂತೆ //
15 : ಈ ಪರಿ ಪಡೆವುದು ಸಾಕ್ಷ್ಯ ಪ್ರಭುವಿನಾ ಸತ್ಯಸಂಧತೆ / ಆತನೇ ನನಗೆ ಪೊರೆಬಂಡೆ, ಆತನಲ್ಲಿಲ್ಲ ವಕ್ರತೆ //

Holydivine