Psalms - Chapter 64
Holy Bible

1 : ಕಿವಿಗೊಡು ದೇವಾ, ನನ್ನಾತ್ಮದ ಮೊರೆಗೆ / ಕಾಪಾಡು, ಶತ್ರುಗಳ ಭಯವಿದೆ ನನಗೆ //
2 : ತಪ್ಪಿಸೆನ್ನ ಕೆಡುಕರ ಕುತಂತ್ರದಿಂದ / ಕಾದಿರಿಸೆನ್ನ ದುರುಳರ ದೊಂಬಿಯಿಂದ //
3 : ನಾಲಗೆಯೆಂಬ ಅಲಗನವರು ಮಸೆದಿಹರು / ನಂಜುಮಾತೆಂಬ ಅಂಬನು ಹೂಡಿಹರು //
4 : ಗುಟ್ಟಾದೆಡೆಯಿಂದ ಗುರಿಯಿಟ್ಟಿಹರು ನಿರಪರಾಧಿಗಳನೆ / ಅಂಜದೇ ಅಳುಕದೆ ಎಸೆವರು ಬಾಣಗಳನು ತಟ್ಟನೆ //
5 : ಕೆಟ್ಟದನು ಮಾಡಲು ಮನದಟ್ಟುಮಾಡಿಕೊಂಡಿಹರು | “ಗುಟ್ಟಾಗಿಡೋಣ ಉರುಲು, ಕಾಂಬರಾರು?” ಎನ್ನುತಿಹರು?||
6 : ಅವರು ಹೂಡಿರುವುದು ಕುತಂತ್ರವನು / ಕೊಚ್ಚಿಕೊಳ್ವುದು ಚತುರೋಪಾಯವನು / ಅಶೋಧ್ಯ ಮಾನವನ ಹೃನ್ಮನಗಳು!//
7 : ಆದರೆ ಎಸೆವನು ಬಾಣವನು ದೇವನೆ / ಪಡೆವರು ಅಪಘಾತವನು ಫಕ್ಕನೆ //
8 : ನಾಲಿಗೆ ನಿಮಿತ್ತ ಅವರು ಅವನತಿಗೀಡಾಗುವರು / ನೋಡುವವರೆಲ್ಲರು ತಲೆಯಾಡಿಸಿ ಅಣಕಿಸುವರು //
9 : ಜನರೆಲ್ಲರಾಗ ತಲ್ಲಣಗೊಳ್ಳುವರು / ದೇವಕಾರ್ಯವಿದು ಎಂದು ಧ್ಯಾನಿಪರು / ಆತನ ಸತ್ಕಾರ್ಯಗಳನು ಸಾರುವರು //
10 : ಹರ್ಷಿಸಲಿ ಸಜ್ಜನರು ಪ್ರಭುವಿನಲಿ / ಆಶ್ರಯ ಪಡೆಯಲೀಗಲೆ ಆತನಲಿ / ನೇರ ಹೃದಯಿಗಳೆಲ್ಲರು ಹಿಗ್ಗಲಿ //

Holydivine