Psalms - Chapter 42
Holy Bible

1 : ಬಾಯಾರಿದ ಜಿಂಕೆ ಹಾತೊರೆಯು ವಂತೆ ತೊರೆಯಾಗಿ / ದಣಿದೆನ್ನ ಮನ ದೇವಾ, ಹಂಬಲಿಸುತಿದೆ ನಿನಗಾಗಿ
2 : ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ / ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ? //
3 : “ಎಲ್ಲಿ? ನಿನ್ನ ದೇವನೆಲ್ಲಿ?” ಎಂದು ಜನ ಜರೆಯುತಿರಲು / ಕಂಬನಿಯೆ ನನಗನ್ನಪಾನವಾಗಿಹುದು ಹಗಲಿರುಳು //
4 : ಜನಸಮೂಹದೊಡನೆ ನಾ ಜಯಜಯಕಾರ ಮಾಡುತ / ಸ್ತುತಿಗೀತೆಗಳ ಹಾಡುತ, ತೀರ್ಥಯಾತ್ರೆ ಗೈಯುತ / ದೇಗುಲಕೆ ತೆರಳಿದಾ ಸವಿನೆನಪು ಮನಕರಗಿಪುದು ನಿರುತ //
5 : ಎನ್ನ ಮನವೆ, ಚಿಂತಿಸುವೆಯೇಕೆ? ವ್ಯಥೆಪಡುವುದೇಕೆ? ದೇವನಲ್ಲಿಡು ನಂಬಿಕೆ / ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ, ಪರಮಾತ್ಮ ಆತನೆನಗೆ //
6 : ನನಗಾಗುತ್ತದೆ ನಿನ್ನ ಸ್ಮರಣೆ ಮನ ಕುಗ್ಗಿದಾಗ / ಜೋರ್ದನ್, ಹೆರ್ಮನ್ ನಾಡಿಂದ, ವಿೂಸಾರ್ ಗುಡ್ಡೆಯಿಂದ //
7 : ನಿನ್ನ ಜಲಪಾತಗಳ ಘನನಿನಾದ, ಮಡುವು ಮಡುವನು ಕರೆದಂತಿದೆ / ನಿನ್ನಲೆಗಳು, ಎಲ್ಲ ತರಂಗಗಳು ತಲೆಯ ಮೇಲೆ ಹಾದು ಹೋದಂತಿವೆ //
8 : ಹಗಲಲಿ ಪ್ರೀತಿಯನುಗ್ರಹಿಸಲಿ ದೇವನೆನಗೆ / ಇರುಳಲಿ ಎನ್ನಯ ಬಾಯಲ್ಲಿರಲಿ ಆತನ ಗೀತೆ / ಪ್ರಾರ್ಥನೆ ಸಲ್ಲಲಿ ಎನ್ನ ಜೀವಾದಾರ ದೇವಗೆ //
9 : ಶರಣ ದೇವನಿಗೆ “ದೇವಾ, ನನ್ನನೇಕೆ ಮರೆತೆ?/ ನಾನಲೆಯಬೇಕೆ ಶತ್ರುಬಾಧೆಪೀಡಿತನಾಗಿ ಭಿಕಾರಿಯಂತೆ?” //
10 : “ನಿನ್ನ ದೇವನೆಲ್ಲಿ?” ಎಂದು ವಿರೋಧಿಗಳು ಸತತ ಹಂಗಿಸುವಾಗ / ನನ್ನೆಲುಬುಗಳು ಮುರಿದಂತಾಗುತ್ತದೆ ಆ ಜರೆಯ ಕೇಳಿದಾಗ //
11 : ಎನ್ನ ಮನವೆ, ಚಿಂತಿಸುವೆಯೇಕೆ? ವ್ಯಥೆಪಡುವುದೇಕೆ? ದೇವನಲ್ಲಿಡು ನಂಬಿಕೆ / ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ, ಪರಮಾತ್ಮ ಆತನೆನಗೆ//

Holydivine