Psalms - Chapter 135
Holy Bible

1 : ಅಲ್ಲೆಲೂಯ / ಭಜಿಸಿರಿ, ಪ್ರಭುವಿನ ಶ್ರೀನಾಮವನು / ಭಜಿಸಿರಿ ಪ್ರಭುವಿನ ದಾಸರೆ, ಆತನನು
2 : ಕೀರ್ತಿಸಿರಿ ಪ್ರಭುವನು ಆತನ ಮಂದಿರದಲ್ಲಿರುವವರೇ / ನಮ್ಮ ದೇವಾಲಯದ ಪ್ರಾಕಾರದಲ್ಲಿಹ ಸೇವಕರೇ
3 : ಪ್ರಭು ಒಳ್ಳೆಯವನು, ಆತನಿಗೆ ಸ್ತುತಿಸ್ತೋತ್ರ / ಆತನ ನಾಮವನು ಸ್ತುತಿಸಿರಿ, ಅದು ಮನೋಹರ
4 : ಆಯ್ದುಕೊಂಡನಾತ ಯಕೋಬ್ಯ ವಂಶವನು / ಸ್ವಕೀಯ ಜನರನ್ನಾಗಿ ಇಸ್ರಯೇಲರನು
5 : ಗೊತ್ತೆನಗೆ ನಮ್ಮ ಪ್ರಭು ಘನವಂತನೆಂದು / ಸಕಲ ದೇವರುಗಳಿಗಿಂತಲು ಉನ್ನತನೆಂದು
6 : ಮಾಡುವನು ಪ್ರಭು ತನಗಿಷ್ಟ ಬಂದುದನು / ಭೂಮ್ಯಾಕಾಶ, ಸಮುದ್ರ ಸಾಗರದೊಳು
7 : ಏಳಮಾಡುವನು ದಿಗಂತದೊಳು ಮೋಡವನು / ಹೊಳೆಯಮಾಡುವನು ಮಳೆಗೋಸ್ಕರ ಮಿಂಚನು / ಬೀಸಮಾಡುವನು ಉಗ್ರಾಣದಿಂದ ಗಾಳಿಯನು
8 : ಕೊಂದನು ಚೊಚ್ಚಲುಗಳನು ಈಜಿಪ್ಟಿನೊಳು / ಮನುಷ್ಯರೊಳು, ಪಶುಪ್ರಾಣಿಗಳೊಳು
9 : ಓ ಈಜಿಪ್ಟೆ, ನಿನ್ನೊಳು ಮಾಡಿದನು ಅದ್ಭುತ ಪವಾಡಗಳನು / ಫರೋಹನ ಮೇಣ್ ಅವನ ಸೇವಕರ ವಿರುದ್ಧ ಗೈದನವುಗಳನು
10 : ಕೆಡವಿಬಿಟ್ಟನಾತ ದೊಡ್ಡ ರಾಷ್ಟ್ರಗಳನು / ಕೊಂದುಹಾಕಿದನಾತ ಬಲಿಷ್ಠರಾಜರನು
11 : ನಿರ್ಮೂಲ ಮಾಡಿದನಾತ ಅಮೋರ್ಯರ ಸೀಹೋನ್ ರಾಜನನು / ಬಾಷಾನಿನ ಅರಸ ಓಗನನು, ಕಾನಾನಿನ ರಾಜ್ಯಗಳೆಲ್ಲವನು
12 : ಕೊಟ್ಟನು ಅವರ ನಾಡನು ಇಸ್ರಯೇಲರಿಗೆ / ಅದು ಸ್ವಂತ ಸೊತ್ತಾಯಿತು ಆತನಾ ಪ್ರಜೆಗೆ
13 : ನಿನ್ನ ನಾಮ ಪ್ರಭು ಶಾಶ್ವತ / ನಿನ್ನ ಸ್ಮರಣೆಯೂ ಅನವರತ
14 : ದೊರಕಿಸುವನು ಪ್ರಭು ನ್ಯಾಯವನು ತನ್ನ ಪ್ರಜೆಗೆ / ತೋರುವನು ಅನುಕಂಪವನು ತನ್ನ ಭಕ್ತಾದಿಗಳಿಗೆ
15 : ರಾಷ್ಟ್ರಗಳ ವಿಗ್ರಹಗಳು ಬರೀ ಬೆಳ್ಳಿಬಂಗಾರ / ಅವುಗಳೆಲ್ಲ ಮಾನವನ ಕೈಕೆಲಸಗಳು ಮಾತ್ರ
16 : ಬಾಯಿದ್ದರೂ ಅವು ಮಾತನಾಡುವುದಿಲ್ಲ / ಕಣ್ಣುಗಳಿದ್ದರೂ ಅವು ನೋಡುವುದಿಲ್ಲ
17 : ಕಿವಿಯಿದ್ದರೂ ಅವು ಕೇಳುವುದಿಲ್ಲ / ಅವುಗಳ ಬಾಯಲ್ಲಿ ಉಸಿರೇ ಇಲ್ಲ
18 : ಅವುಗಳಂತಾಗುವರು ಅವುಗಳನ್ನು ಮಾಡುವವರು / ಅವುಗಳಂತಾಗುವರು ಅವುಗಳನ್ನು ನಂಬುವವರು
19 : ಇಸ್ರಯೇಲಿನ ಗೋತ್ರವೇ, ಭಜಿಸು ಪ್ರಭುವನು / ಆರೋನನ ವಂಶವೇ, ಭಜಿಸು ಆ ವಿಭುವನು
20 : ಲೇವಿಯರ ಮನೆತನವೇ, ಭಜಿಸು ಪ್ರಭುವನು / ಪ್ರಭುವಿನ ಭಕ್ತರೇ, ಭಜಿಸಿ ಆ ವಿಭುವನು
21 : ಜೆರುಸಲೇಮಿನಲ್ಲಿ ವಾಸಿಸುವ ಪ್ರಭು ಘನಹೊಂದಲಿ / ಆತನ ಕೀರ್ತಿ ಸಿಯೋನಿನಿಂದ ಹಬ್ಬಿಹರಡಲಿ / ಅಲ್ಲೆಲೂಯ

Holydivine