Psalms - Chapter 68
Holy Bible

1 : ಎಚ್ಚರಗೊಳ್ಳಲಿ, ದೇವನೆಚ್ಚರಗೊಳ್ಳಲಿ / ಆತನ ಶತ್ರುಗಳೆಲ್ಲರು ಚದರಿಹೋಗಲಿ / ಆತನ ವಿರೋಧಿಗಳು ಪಲಾಯನ ಗೈಯಲಿ //
2 : ಅವರನು ಊದಿಬಿಡು ದೇವಾ, ತೇಲಿಹೋಗಲಿ ಹೊಗೆಯಂತೆ / ಕರಗಿಹೋಗಲಿ ನಿನ್ನೆದುರಿಗೆ ಅಗ್ನಿಮುಟ್ಟಿದ ಮೇಣದಂತೆ //
3 : ಸಜ್ಜನರಾದರೊ ಸಂತೋಷಿಸಲಿ / ದೇವರ ಮುಂದೆ ಆನಂದಿಸಲಿ / ಅತುಳ ಹರ್ಷಾನಂದಗೊಳ್ಳಲಿ //
4 : ಗಾಯನ ಮಾಡಿರಿ ದೇವನಿಗೆ, ಕೊಂಡಾಡಿರಿ ಆತನ ನಾಮವನು / ಮೇಘಾರೂಢನಾಗಿ ಬರುವವಗೆ ಸಿದ್ಧಮಾಡಿರಿ ರಾಜಮಾರ್ಗವನು / “ಪ್ರಭು” ಆತನ ನಾಮಧೇಯ, ಹರ್ಷದಿ ಸೇರಿರಿ ಆತನ ಸನ್ನಿಧಿಯನು //
5 : ದಿವ್ಯಧಾಮದಲ್ಲಿಹ ಆ ದೇವ / ತಬ್ಬಲಿಗೆ ತಂದೆ, ವಿಧವೆಗಾಶ್ರಯ //
6 : ನೀಡುವನು ಮಡದಿ ಮಕ್ಕಳನು ಒಂಟಿಗನಿಗೆ / ಬಿಡುಗಡೆಯ ಭಾಗ್ಯವನು ನೊಂದ ಬಂಧಿಗಳಿಗೆ / ದ್ರೋಹಿಗಳಿಗಾದರೋ ಮರಳುಗಾಡೇ ಮಾಳಿಗೆ //
7 : ದೇವಾ, ಪ್ರಜೆಗೆ ಮುಂದಾಳಾಗಿ ನೀ ಹೊರಟಾಗ / ಅರಣ್ಯ ಮಾರ್ಗವಾಗಿ ನೀ ಪ್ರಯಾಣಮಾಡಿದಾಗ /
8 : ನಡುಗಿತು ಪೊಡವಿ, ಕಂಪಿಸಿತು ಸೀನಾಯಿ, ದೇವ ಪ್ರತ್ಯಕ್ಷನಾದನೆಂದು / ಮಳೆಗರೆಯಿತು ಮೋಡಗಿರಿ, ಇಸ್ರಯೇಲ್ ದೇವ ಪ್ರತ್ಯಕ್ಷನಾದನೆಂದು //
9 : ದೇವಾ, ಹೇರಳವಾಗಿ ನೀ ಸುರಿಮಳೆಗರೆದೆ / ಬತ್ತಿದ ನಿನ್ನ ಸೊತ್ತನ್ನು ಸಮೃದ್ಧಿಗೊಳಿಸಿದೆ //
10 : ವಸತಿಯಾಯಿತದು ನಿನ್ನ ಜನಮಂದೆಗೆ / ಆಸ್ಥೆಯಿಂದೊದಗಿಸಿದೆ ದೀನ ದಲಿತರಿಗೆ //
11 : ಹೊರಡಿಸಿದನು ಪ್ರಭು ಶುಭವಾರ್ತೆಯೊಂದನು / ಹರಡಿತು ಜನಸ್ತೋಮ ಆ ಸಂದೇಶವನು //
12 : ಓಡಿದರು, ದಂಡೊಡನೆ ಓಡಿದರು ದೊರೆಗಳು / ದೋಚಿಕೊಂಡರು ಕೊಳ್ಳೆಯನು ಗೃಹಿಣಿಯರು //
13 : ಪಾರಿವಾಳ ರೆಕ್ಕೆಗಳಂಥ ಕನಕದಾಕೃತಿಗಳಿದೋ/ ಗರಿಗಳಂತೆ ಥಳಥಳಿಸುವ ಬಂಗಾರ ರೇಖೆಗಳಿದೋ / ನೀವಾದರೋ ಕುರಿದೊಡ್ಡಿಗಳಲ್ಲಿ ಬೆಚ್ಚನಿದ್ದಿರೋ?//
14 : ಸರ್ವಶಕ್ತನು ಅರಸರನತ್ತ ಸದೆಬಡಿದಂತೆ / ಇತ್ತ ಬೀಳುತ್ತಿತ್ತು ಸಾಲ್ಮೋನ್ ಗಿರಿಮೇಲೆ ಹಿಮಗಡ್ಡೆ //
15 : ಬಾಷಾನಿನ ಪರ್ವತವೇ, ನೀ ಮಹೋನ್ನತ / ಹಲವು ಶಿಖರಗಳಿಗಿಂತ ನೀ ಅಲಂಕೃತ //
16 : ಆದರೂ ದೇವನಾರಿಸಿದ ಗಿರಿಯನು / ಆತ ಬಯಸಿದ ಆ ಚಿರ ನಿವಾಸವನು / ನೀ ಓರೆಗಣ್ಣಿಂದ ಕಾಣುವೆಯೇನು? / ಎಲೈ ಶಿಖರೋನ್ನತ ಪರ್ವತವೇ, ಪೇಳು//
17 : ತನ್ನ ಸಹಸ್ರಾರು, ಲಕ್ಷಾಂತರ ರಥಗಳ ಸಮೇತ / ಸೀನಾಯಿಂದ ದೇಗುಲಕೆ ಪ್ರಭುವಿನ ಸಮಾಗಮನ //
18 : ಹೇ ದೇವಾ, ಹೇ ಪ್ರಭು, ನೀನೇರಿದೆ ಉನ್ನತ ಶಿಖರಕೆ / ಕರೆದೊಯ್ದೆ ಖೈದಿಗಳನೇಕರನು ನಿನ್ನ ನಿವಾಸಕೆ / ಸರಳರಿಂದಲೂ ದುರುಳರಿಂದಲೂ ಪಡೆದೆ ಕಪ್ಪಕಾಣಿಕೆ / ದೇವರಾದ ಪ್ರಭುವೇ, ಅಲ್ಲೇ ನೀ ವಾಸಿಸುವೆ /
19 : ಸ್ತುತಿಯಾಗಲಿ ನಮ್ಮನುದ್ಧರಿಸುವಾ ದೇವನಿಗೆ / ನಮ್ಮನನುದಿನ ಬಿಡದೆ ಸಹಿಸಿಕೊಳ್ಳುವಾ ಪ್ರಭುವಿಗೆ //
20 : ನಮ್ಮ ದೇವರು ಜೀವೋದ್ಧಾರಕ ದೇವರು ಹೌದು / ಸಾವಿಂದ ತಪ್ಪಿಸುವ ಶಕ್ತಿ, ಸ್ವಾಮಿ ದೇವರದು //
21 : ಸಂಹರಿಸುವನಾತನು ಶತ್ರುಗಳಾ ಶಿರಸ್ಸನು / ನಸುಕುವನು ದುರ್ಮಾರ್ಗಿಗಳ ಕೇಶ ಕಿರೀಟವನು //
22 : ಪ್ರಭುವಿನ ನುಡಿ: “ನಿನ್ನ ಶತ್ರುಗಳ ನೆತ್ತರಲಿ ನೀ ಕಾಲ್ತೊಳೆವಂತೆ / ನಿನ್ನ ನಾಯಿಗಳಿಗದನೆಕ್ಕಲು ಸಾಕಷ್ಟು ಸಿಗುವಂತೆ /
23 : ಬಾಷಾನಿನಿಂದವರನು ನಾ ಮರಳಿ ಬರಮಾಡುವೆ / ಸಮುದ್ರ ತಳದಿಂದವರನು ನಾ ಮತ್ತೆ ಮೇಲೆತ್ತುವೆ” //
24 : ಕಂಗೊಳಿಸುತಿದೆ ದೇವ, ನಿನ್ನ ಭವ್ಯ ಮೆರವಣಿಗೆ / ನನ್ನರಸ ದೇವನು ನಡೆವ ತನ್ನಾ ಗರ್ಭಗುಡಿಗೆ /
25 : ಮುಂಗಡೆಯಲಿದೋ ಹಾಡುಗಾರರು / ಹಿಂಗಡೆಯಲಿದೋ ವಾದ್ಯಗಾರರು / ನಡುವೆ ದಮ್ಮಡಿ ಬಡಿವ ಮಹಿಳೆಯರು //
26 : “ಇಸ್ರಯೇಲಿನ ವಂಶಜರೇ, ಸ್ತುತಿಸಿರಿ ಪ್ರಭುವನು” ಎನ್ನುತಿಹರು / “ಸಭೆ ಸಮ್ಮುಖದಲಿ ಕೊಂಡಾಡಿರಿ ದೇವರನು” ಎಂದು ಹಾಡುತಿಹರು /
27 : ಮುನ್ನಡೆಯುತ್ತಿಹರಿದೋ ಕಿರಿಯ ಕುಲದ ಬೆನ್ಯವಿೂನರು / ಗುಂಪಾಗಿ ಬರುತಿಹರು ಯೆಹೂದ್ಯ ಕುಲದ ಗುರುಹಿರಿಯರು / ಹಿಂಬಾಲಿಸುತಿಹರು ಜೆಬುಲೋನ್, ನಫ್ತಾಲಿ ಗೋತ್ರದವರು //
28 : ನಿನ್ನ ಶಕ್ತಿ ಸಾಮಥ್ರ್ಯವನು ಹೇ ದೇವಾ, ಪ್ರದರ್ಶಿಸು / ನಮ್ಮ ಪರ ಪ್ರಯೋಗಿಸಿದ ಬಲವನು ಮರಳಿ ತೋರ್ಪಡಿಸು //
29 : ಜೆರುಸಲೇಮಿನ ನಿನ್ನ ಮಹಾದೇವಾಲಯದ ಪ್ರಯುಕ್ತ / ಅರಸರು ನಿನಗೆ ಕಾಣಿಕೆಯನು ತಂದೊಪ್ಪಿಸುವುದು ಅತಿಸೂಕ್ತ //
30 : ದಂಡಿಸು ಜಂಡು ಕಾಡುಮೃಗದಂಥಾ ನಾಡನು / ಗದರಿಸು ಹೋರಿ ದನಕರುಗಳಂಥಾ ನಾಡುಗಳನು // ಚದರಿಸು ಕಲಹಕಾಳಗ ಪ್ರಿಯ ಜನಾಂಗಗಳನು / ಅಡ್ಡಬೀಳಿಸು ನಿನಗೆ ಬೆಳ್ಳಿಗಟ್ಟಿ ತಂದವರನು //
31 : ರಾಯಭಾರಿಗಳಾಗಿ ಬರುವರು ಈಜಿಪ್ಟಿನ ಜನರು // ದೇವರಿಗೆ ಕೈ ಮುಗಿವರು ಇಥಿಯೋಪಿಯದವರು //
32 : ಭೂರಾಜ್ಯಗಳೇ, ಸ್ತುತಿಸಿರಿ ದೇವರನು / ಸಂಕೀರ್ತಿಸಿರಿ ನೀವೆಲ್ಲರು ಪ್ರಭುವನು //
33 : ಆದಿಮೊದಲು ಮೇಘಾರೂಢನಾಗಿರುವನು / ಕೊಂಡಾಡಿರಿ, ಗುಡುಗಿನಂತೆ ಗರ್ಜಿಸುವಾತನನು //
34 : ಸಾರಿರಿ ದೇವರಾ ಶಕ್ತಿಸಾಮಥ್ರ್ಯವನು / ಇಸ್ರಯೇಲಿಗೆ ತೋರಿದಾ ಪ್ರಭಾವವನು / ಗಗನವನು ಆವರಿಸಿರುವಾ ಪ್ರತಿಭೆಯನು //
35 : ಪರಮ ಪವಿತ್ರಾಲಯದಲ್ಲಿಹ ದೇವ ಭಯಭಕುತಿಗೆ ಪಾತ್ರ / ಪ್ರಜೆಗೆ ಪರಾಕ್ರಮವೀವ ಇಸ್ರಯೇಲ ದೇವನಿಗೆ ಸ್ತೋತ್ರ //

Holydivine