Psalms - Chapter 29
Holy Bible

1 : ಸುರಪುತ್ರರೇ, ಪ್ರಭುವಿನ ಸ್ತುತಿ ಮಾಡಿರಿ / ಒಲುಮೆ, ಮಹಿಮೆ, ಅವನದೇ ಎಂದು ಸಾರಿರಿ //
2 : ಸ್ತುತಿಸಿರಿ ಆತನ ಶ್ರೀನಾಮ ಮಹಿಮೆಯನು | ಪೂಜಿಸಿರಿ ಪವಿತ್ರಾಂಬರರಾಗಿ ಆತನನು ||
3 : ಪ್ರಭು ಆಸೀನನು ಆಗಸದ ಜಲರಾಶಿಗಳ ಮೇಲೆ | ಪ್ರತಿಭಾಸ್ವರೂಪನಾದ ದೇವನಿದೋ, ಗುಡುಗುತ್ತಲೇ | ಆತನಾಡಂಬರ ಧ್ವನಿ ಮೇಘಮಂಡಲದ ಮೇಲೆ ||
4 : ಪ್ರಭುವಿನ ಧ್ವನಿ ಶಕ್ತಿಯುತ | ಆತನ ಶಬ್ದ ವೈಭವಯುತ ||
5 : ಆತನ ಗರ್ಜನೆಗೆ ಮುರಿದುಬೀಳುವುವು ದೇವದಾರು ಮರಗಳು | ಹೌದ್ಹೌದು, ಸೀಳಿ ಹೋಳಾಗುವುವು ಲೆಬನೋನಿನ ಮಹಾ ವೃಕ್ಷಗಳು ||
6 : ಜಿಗಿಯುವುದು ಲೆಬನೋನ್ ಪರ್ವತ ಎಳೆಗರುವಿನಂತೆ | ನೆಗೆಯುವುದು ಗಿರಿ ಸಿಯೋನ್ ಕಾಡೆಮ್ಮೆಯ ಕರುವಂತೆ ||
7 : ಆತನ ಮಹಾ ಗರ್ಜನೆಗೆ ಥಳಥಳಿಸುವುವು ಕೋಲ್ಮಿಂಚುಗಳು /
8 : ಕಂಪಿಸುವುದು ಕಾದೇಶ ಅರಣ್ಯ, ಕದಲುವುವು ಕಾಡುಮೇಡುಗಳು ||
9 : ಈಯುವುವು ಜಿಂಕೆಗಳು, ನಗ್ನವಾಗುವುವು ವೃಕ್ಷಗಳು / ಜಯಜಯ ಘೋಷಮಾಡುವರೆಲ್ಲರು ಆತನಾಲಯದೊಳು //
10 : ಜಲಪ್ರಳಯದೊಳು ಪ್ರಭು ಆಸೀನ ನಾಗಿಹನು / ಯುಗಯುಗಾಂತರಕು ಅರಸನಾಗಿ ಆಳುವನು //
11 : ಅನುಗ್ರಹಿಸಲಿ ಪ್ರಭು ತನ್ನ ಜನರಿಗೆ ಶಕ್ತಿಯನು / ದಯಪಾಲಿಸಲಿ ತನ್ನ ಪ್ರಜೆಗೆ ಸುಕ್ಷೇಮವನು //

Holydivine