Psalms - Chapter 108
Holy Bible

1 : ಸ್ಥಿರವಿದೆ ದೇವಾ, ಸುಸ್ಥಿರವಿದೆ ನನ್ನ ಮನ / ಹಾಡುತ ಪಾಡುತ ರಚಿಸುವೆನಿದೋ ಕವನ //
2 : ಚೇತನಗೊಳ್ಳು, ಮನವೇ ಚೇತನಗೊಳ್ಳು / ಎಚ್ಚರಗೊಳ್ಳಲಿ ವೀಣೆ ತಂಬೂರಿಗಳು / ನಾನೆಬ್ಬಿಸುವೆನು ಬೆಳಗಿನ ಜಾವವನು //
3 : ನಿನ್ನ ಸ್ತುತಿಸುವೆನು ಪ್ರಭು, ಜನಾಂಗಗಳ ಮುಂದೆ / ಸಂಕೀರ್ತಿಸುವೆನು ನಿನ್ನನು ರಾಷ್ಟ್ರಗಳ ಮಧ್ಯೆ //
4 : ವಿೂರಿದೆ ನಿನ್ನಚಲಪ್ರೀತಿ ಗಗನ ಮಂಡಲವನು / ಮುಚ್ಚಿದೆ ನಿನ್ನ ಸತ್ಯಸಂಧತೆ ಮೇಘರಾಶಿಯನು //
5 : ಮೇಲಣ ಲೋಕದಲಿ ಮೆರೆಯಲಿ ದೇವಾ, ನಿನ್ನ ಶೋಭೆ / ಭೂಮಂಡಲದೊಳು ಹಬ್ಬಿ ಹರಡಲಿ ನಿನ್ನಾ ಪ್ರತಿಭೆ //
6 : ನಿನಗೆ ಪ್ರಿಯರಾದ ನಮ್ಮ ಮೊರೆಯನಾಲಿಸು / ನಿನ್ನ ಭುಜಬಲದಿಂದ ನಮ್ಮನು ಜಯಗೊಳಿಸು //
7 : ಗರ್ಭಗುಡಿಯಿಂದಲೆ ದೇವನಿಂತೆಂದನು: / “ಜಯಶೀಲ ನಾನು, ಹಂಚುವೆನು ಶೆಖೆಮನು / ಅಳೆದುಕೊಡುವೆನು ಸುಖೋತೆಂಬ ಬಯಲನು //
8 : ಗಿಲ್ಯಾದ ಸೀಮೆ, ಮನಸ್ಸೆ ನಾಡು ನನ್ನವೆ / ಎಫ್ರಯಿಮ್ ಗೋತ್ರವು ಶಿರಸ್ತ್ರಾಣ ನನಗೆ / ಜೂದಕುಲ ರಾಜದಂಡವಾಗಿದೆ ನನ್ನ ಕೈಗೆ //
9 : ಮೋಹಾಬ್ ಪ್ರಾಂತ್ಯವು ನನ್ನ ಸ್ನಾನಪಾತ್ರೆಯು / ಎದೋಮ್ ಪ್ರಾಂತ್ಯವು ನನ್ನ ಕೆರಗಳಿಗೆ, ಎಡೆಯು / ನನ್ನ ಗೆಲ್ವೆನೆಂದಿತೆ ಫಿಲಿಷ್ಟಿಯ ಪ್ರಾಂತ್ಯವು?”//
10 : ಕೋಟೆ ನಗರಕೆ ನನ್ನನು ಕರೆದೊಯ್ಯುವವರಾರು? / ಎದೋಮ್ ಪ್ರಾಂತ್ಯಕೆ ನನ್ನ ಕೊಂಡೊಯ್ಯುವವರಾರು? //
11 : ದೇವಾ, ನೀ ನಮ್ಮನು ಕೈಬಿಟ್ಟಿರುವುದು ಸರಿಯೋ? / ನಮ್ಮ ಸೈನ್ಯ ಸಮೇತ ನೀ ಬರದೆ ಹೋದೆಯೋ? //
12 : ಶತ್ರುವಿರುದ್ಧ ಸಹಾಯಮಾಡಯ್ಯಾ / ಮಾನವನ ನೆರವು ನಮಗೆ ಬರಡಯ್ಯಾ //
13 : ನಮ್ಮ ಪರ ದೇವನಿರಲು ಹೆಣಗುವೆವು ಶೂರರಾಗಿ / ವೈರಿಗಳನು ತುಳಿದುಬಿಡುವನು ಆತ ಖರೆಯಾಗಿ //

Holydivine