Psalms - Chapter 52
Holy Bible

1 : ನೀಚಕಾರ್ಯವೆಸಗಿ ಹಿಗ್ಗುವ ಘನ ಮಾನವನೆ / ದೇವರ ಅನಂತ ಕೃಪೆಯನು ಪ್ರತಿಭಟಿಸುವವನೆ / ದೇವರ ದೃಷ್ಟಿಯಲಿ ನೀನು ಹೀನಾಯನೆ //
2 : ಕ್ಷೌರಗತ್ತಿಗೂ ಹರಿತ ನಿನ್ನ ನಾಲಿಗೆ, ವಂಚಕನೆ / ಕಲ್ಪಿಸುವೆಯಾ ದಿನವೆಲ್ಲಾ ನಾಶವಿನಾಶವನೆ?//
3 : ಒಳಿತಿಗಿಂತ ಕೆಡಕು ಮಾಡುವುದು ನಿನಗಿಷ್ಟ / ಸತ್ಯಕ್ಕಿಂತ ಸುಳ್ಳಾಡುವುದೇ ನಿನ್ನ ಚಟ /
4 : ಓ ನಾಲಿಗೆಯೇ, ನೀನು ಕಪಟ / ಹಾನಿಕರ ಮಾತೇ ನಿನಗಪ್ಪಟ //
5 : ನಸುಕುವನು ದೇವರು ನಿನ್ನನು ನಿರುತ / ದೂರಮಾಡುವನು ನಿನ್ನಾ ಗುಡಾರದಿಂದ / ಕಿತ್ತೆಸೆದುಬಿಡುವನು ಜೀವದ ನಾಡಿಂದ //
6 : ಸಜ್ಜನರು ಚಕಿತರಾಗುವರು ಕಂಡಿದನು / “ದೇವರನು ಆಶ್ರಯಿಸಿಕೊಳ್ಳದವನಿವನು /
7 : ಸಿರಿ ಸಂಪತ್ತಿನಲೆ ಭರವಸೆಯಿಟ್ಟವನು / ತುಚ್ಛಕಾರ್ಯಗಳಲೆ ಹೆಚ್ಚಳಪಟ್ಟವನು”/ ಎಂದು ಜರೆದು ಮಾಡುವರು ಪರಿಹಾಸ್ಯವನು
8 : ನಾನಾದರೋ ದೇಗುಲದಲಿ ಬೆಳೆದಿಹ ಎಣ್ಣೆ ಮರದಂತಿರುವೆನು / ದೇವರ ಸ್ಥಿರಪ್ರೀತಿಯನು ಯುಗಾಂತರಕು ನಂಬಿಕೊಂಡಿರುವೆನು //
9 : ನಿನ್ನುಪಕಾರವನು ಹೇ ದೇವಾ, ನಾ ಸದಾ ಸ್ಮರಿಸುವೆನು / ನಿನ್ನ ಶ್ರೇಷ್ಠ ನಾಮವನು ಭಕ್ತರ ಮುಂದೆ ಸ್ತುತಿಸುವೆನು //

Holydivine