Psalms - Chapter 62
Holy Bible

1 : ಎನ್ನ ಮನಕ್ಕೆ ಶಾಂತಿ ದೇವನಿಂದಲೆ / ನನ್ನ ಜೀವೋದ್ಧಾರ ಆತನಿಂದಲೆ //
2 : ಆತನೆನಗೆ ದುರ್ಗ, ರಕ್ಷಕ, ಶರಣು / ನಾನೆಂದಿಗೂ ಕದಲಿ ಬೀಳೆನು //
3 : ಎನಿತುಕಾಲ ದಾಳಿ ಮಾಡುವಿರಿ ಒಬ್ಬನ ಮೇಲೆ ನೀವೆಲ್ಲಾ?/ ಕೆಡವಲು ಯತ್ನಿಸುವಿರಾ ಬಾಗಿದಾ ಗೋಡೆಯ, ಕುಸಿದಾ ಪೌಳಿಯ?//
4 : ದಬ್ಬುವ ದುರಾಲೋಚನೆ ಅವರದು ಗಾದಿಯಿಂದ / ಅಬದ್ಧವಾಡುವುದೆಂದರೊ ಹಬ್ಬದಾನಂದ / ಹರಸುವರು ಅಧರದಿಂದ, ಶಪಿಸುವರು ಉದರದಿಂದ //
5 : ಎನ್ನ ಮನಕೆ ಶಾಂತಿ ದೇವನಿಂದಲೆ / ನನಗೆ ನಂಬಿಕೆ ನಿರೀಕ್ಷೆ ಆತನಿಂದಲೆ //
6 : ಆತನೆನಗೆ ದುರ್ಗ, ರಕ್ಷಕ, ಶರಣು / ನಾನೆಂದಿಗೂ ಕದಲಿ ಬೀಳೆನು //
7 : ಉದ್ಧಾರಕೆ, ಗೌರವಕೆ ಎನಗಾಧಾರ ದೇವನೆ / ಭದ್ರವಾದ ಬಂಡೆ, ನನಗಾಶ್ರಯ ಆತನೆ //
8 : ಜನರೇ, ಸದಾ ಭರವಸೆ ಇಡಿ ದೇವನಲಿ / ತೋಡಿಕೊಳ್ಳಿ ನಿಮ್ಮ ಅಳಲನು ಆತನಲಿ //
9 : ನರಮಾನವರೆಲ್ಲರು ಬರೇ ಉಸಿರು / ನರಾಧಿಪತಿಗಳು ತೀರಾ ಹುಸಿಯು / ತ್ರಾಸಿನಲಿ ತೂಗಲು ಅವರೆಲ್ಲರು / ಉಸಿರಿಗಿಂತಲೂ ಅತ್ಯಂತ ಹಗುರು //
10 : ಹಿಂಸಾಚಾರದ ಸಂಪಾದನೆಯನು ನೆಚ್ಚಬೇಡಿ / ಸೂರೆ ಮಾಡಿ ಸೇರಿಕೊಂಡುದನು ಕೊಚ್ಚಬೇಡಿ / ಹೆಚ್ಚಿದ ಆಸ್ತಿಪಾಸ್ತಿಗೆ ಮನಸ್ಸು ಹಚ್ಚಬೇಡಿ /
11 : ದೇವನೊಮ್ಮೆ ನುಡಿದೀಮಾತು ನನಗಿಮ್ಮಡಿ ಕೇಳಿಸಿತು / ಸರ್ವಾಧಿಕಾರವು ದೇವನಿಗೇ ಸೇರಿದ ಸೊತ್ತು //
12 : ನಿನ್ನ ಪ್ರೀತಿ ಹೇ ಪ್ರಭು, ಅಚಲ ಹಿಮಾಚಲ / ಸರ್ವರಿಗು ನೀಡುವೆ ಕೃತ್ಯಕೆ ತಕ್ಕ ಫಲ //

Holydivine