Psalms - Chapter 146
Holy Bible

1 : ಪ್ರಭುವಿಗೆ ಸ್ತುತಿಸ್ತೋತ್ರ ಅಲ್ಲೆಲೂಯ / ಮನವೇ, ವಂದಿಸು ಆತನನು ಅಲ್ಲೆಲೂಯ
2 : ಪ್ರಾಣವಿರುವವರೆಗೆ ಸ್ತುತಿಸುವೆನು ಪ್ರಭುವನು / ಬಾಳೆಲ್ಲ ಹಾಡಿ ಭಜಿಪೆನು ನನ್ನ ದೇವರನು
3 : ನಂಬಬೇಡ ಅಧಿಕಾರಿಯನು / ನೆಚ್ಚಬೇಡ ನರಮಾನವನನು / ಉದ್ಧರಿಸಲು ಅಸಮರ್ಥನವನು
4 : ಉಸಿರುಹೋದುದೇ ಮರುಳುತ್ತಾನವನು ಮಣ್ಣಿಗೆ / ಅಂದೇ ಅಳಿಯುತ್ತದೆ ಅವನೆಲ್ಲಾ ಯೋಜನೆ
5 : ಇಸ್ರಯೇಲ ಕುಲದೇವರು ಯಾರಿಗೆ ಉದ್ಧಾರಕನೋ, ಅವನೇ ಧನ್ಯನು / ಪ್ರಭುವನು ತನ್ನ ದೇವರೆಂದು ಯಾರು ನಂಬಿಹನೋ, ಅವನೇ ಧನ್ಯನು
6 : ಭೂಮ್ಯಾಕಾಶ, ಸಾಗರ, ಚರಾಚರಗಳನು ನಿರ್ಮಿಸಿದವ ಆತನೆ / ಕೊಟ್ಟ ವಾಗ್ದಾನಗಳನು ತಪ್ಪದೆ ನೆರವೇರಿಸುವವ ಆತನೆ
7 : ದೊರಕಿಸುವನು ನ್ಯಾಯ ದಲಿತರಿಗೆ / ಒದಗಿಸುವನು ಆಹಾರ ಹಸಿದವರಿಗೆ / ನೀಡುವನು ಬಿಡುಗಡೆ ಬಂಧಿತರಿಗೆ
8 : ಕಣ್ಣನ್ನೀಯುವನು ಪ್ರಭು ಕುರುಡರಿಗೆ / ಉದ್ಧಾರಕನಾ ಪ್ರಭು ಕುಗ್ಗಿದವರಿಗೆ / ಆತನ ಒಲವಿರುವುದು ಸಾಧು ಸಜ್ಜನರಿಗೆ
9 : ರಕ್ಷಿಸುವನು ಪ್ರಭು ಪರದೇಶಿಗಳನು / ಆದರಿಸುವನು ಅನಾಥರನು, ವಿಧವೆಯರನು / ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು
10 : ಪ್ರಭುವೇ ಅರಸನು ಸದಾಕಾಲಕು / ಸಿಯೋನ್, ನಿನ್ನ ದೇವನಾಳ್ವನು ತಲತಲಾಂತರಕು / ಅಲ್ಲೆಲೂಯ! //

Holydivine