Psalms - Chapter 109
Holy Bible

1 : ಹೇ ದೇವಾ, ನೀ ಸ್ತುತಿಗೆ ಯೋಗ್ಯ / ನೀನು ಸುಮ್ಮನಿರುವುದು ಸರಿಯಾ? //
2 : ತೆರೆದಿಹರು ಬಾಯಿ ದುರುಳರು, ವಂಚಕರು ನನಗೆದುರಾಗಿ / ಸುಳ್ಳು ನಾಲಿಗೆಗಳು ಆಡುತ್ತಿವೆ ನನಗೆ ವಿರುದ್ಧವಾಗಿ /
3 : ಹಾಕಿಹರು ದ್ವೇಷತುಂಬಿದ ಮಾತುಗಳ ಮುತ್ತಿಗೆ / ನನ್ನ ಎದುರಿಸುತಿಹರು ನಿಷ್ಕಾರಣವಾಗಿಯೆ //
4 : ಪ್ರೀತಿಗೆ ಪ್ರತಿಯಾಗಿ ಮಾಡುತಿಹರು ಆಪಾದನೆ / ಆದರೂ ಮಾಡುತ್ತಿರುವೆ ಅವರಿಗಾಗಿ ಪ್ರಾರ್ಥನೆ //
5 : ಉಪಕಾರಕ್ಕೆ ಅಪಕಾರವನ್ನೆಸಗಿಹರು / ಗೆಳೆತನಕ್ಕೆ ಹಗೆತನವನ್ನೇ ತೋರಿಹರು //
6 : ತಪ್ಪುಹೊರಿಸುವವನನು ನಿಲ್ಲಿಸು ಆ ಶತ್ರುವಿನ ಬಲಗಡೆಗೆ / ಗುರಿಪಡಿಸು ಅವನನು ಭ್ರಷ್ಟ ನ್ಯಾಯಾಧೀಶನ ತೀರ್ಪಿಗೆ //
7 : ಅಪರಾಧಿಯಾಗಲಿ ಅವನು ನ್ಯಾಯವಿಚಾರಣೆಯಲಿ / ಅವನ ಪ್ರಾರ್ಥನೆಯೂ ಪಾಪವಾಗಿ ಎಣಿಸಲ್ಪಡಲಿ //
8 : ಅಲ್ಪವಾಗಿರಲಿ ಅವನ ಜೀವನಾವಧಿ / ಮತ್ತೊಬ್ಬನದಾಗಲಿ ಅವನಾಸ್ತಿಪಾಸ್ತಿ //
9 : ತಬ್ಬಲಿಗಳಾಗಲಿ ಅವನ ಮಕ್ಕಳುಮರಿ / ವಿಧವೆಯಾಗಲಿ ಅವನ ನಾರಿಮಣಿ //
10 : ತಿರುಕರಂತೆ ಅಲೆಯಲಿ ಅವನ ಮಕ್ಕಳು ಭಿಕ್ಷೆಬೇಡುತ / ಹೊರದೂಡಲ್ಪಡಲಿ ತಮ್ಮ ಪಾಳುಬಿದ್ದಾಮನೆಗಳಿಂದ //
11 : ಕಸಿದುಕೊಳ್ಳಲಿ ಅವನದೆಲ್ಲವನು ಸಾಲಿಗನು / ಸುಲಿದುಕೊಳ್ಳಲಿ ಪರರು ಅವನ ಕಷ್ಟಾರ್ಜಿತವನು //
12 : ಕರುಣೆತೋರುವವನಾರೂ ಅವನಿಗಿಲ್ಲ ವಾಗಲಿ / ಅವನ ತಬ್ಬಲಿ ಮಕ್ಕಳನಾರೂ ಕನಿಕರಿಸದಿರಲಿ //
13 : ನಿರ್ಮೂಲವಾಗಲಿ ಅವನಾ ಪೀಳಿಗೆ / ನಿರ್ನಾಮವಾಗಲಿ ಮರುವಂಶದೊಳಗೆ //
14 : ಮರೆಯದಿರಲಿ ಪ್ರಭು ಅವನಾ ಹಿರಿಯರ ದೋಷವನು / ಪರಿಹರಿಸದಿರಲಿ ಅವನ ತಾಯಿಯು ಗೈದ ಪಾಪವನು //
15 : ಅವರ ಪಾಪಗಳು ಪ್ರಭುವಿನ ನೆನಪಲ್ಲಿರಲಿ / ಅವನ ಹೆಸರೇ ಇಲ್ಲದಂತಾಗಲಿ ಧರೆಯಲಿ //
16 : ಯಾರೊಬ್ಬನಿಗು ಮರುಕತೋರೆ ಮರೆತುಬಿಟ್ಟನವನು / ಕೊಲ್ಲಲು ಯತ್ನಿಸಿದನು ದೀನರನು, ಮನಗುಂದಿದವರನು //
17 : ಅವನಿಗೆ ಪ್ರಿಯ ಶಪಿಸುವುದೆಂದರೆ, ಎರಗಲಿದೀಗ ಅವನ ಮೇಲೇ / ಆಶೀರ್ವದಿಸುವುದು ಅವನಿಗಪ್ರಿಯ, ಇರಲಿ ಅವನಿಗದು ದೂರದಲೇ //
18 : ಶಪಿಸುವುದೆಂದರೆ ಅವನಿಗೆ ಉಡಿಗೆತೊಡಿಗೆಯಂತೆ / ಇಳಿಯಲಿ ಅದೀಗ ಅವನ ದೇಹಕೆ ನೀರಿ ನಂತೆ / ಸೇರಲಿ ಅದೀಗ ಅವನ ಕೀಲಿಗೆ ಎಣ್ಣೆಯಂತೆ //
19 : ಅವನಿಗಿರಲಿ ಶಾಪ ಹೊದಿಕೆಯಂತೆ / ಅದುವೆ ಅನುದಿನದ ನಡುಗಟ್ಟಂತೆ //
20 : ನನಗೆದುರಾಡಿ ತಪ್ಪು ಹೊರಿಸುವವರಿಗೆ / ಅದುವೇ ಪ್ರಭುವಿನಿಂದ ಗಿಟ್ಟುವ ಕೊಡುಗೆ //
21 : ಹೇ ಪ್ರಭು, ದೇವಾ, ನನ್ನನಾದರಿಸು ಅಕ್ಕರೆಯಿಂದ / ನನ್ನ ಪಕ್ಷವಹಿಸಿ ರಕ್ಷಿಸು ನಿನ್ನ ನಾಮದ ಪ್ರಯುಕ್ತ //
22 : ಬಡವ ನಾನು, ನನಗಿದೆ ಕುಂದುಕೊರತೆ / ನನ್ನ ಎದೆಗೆ ಅಲಗೇ ನಾಟಿದಂತಿದೆ //
23 : ನಾ ಗತಿಸಿಹೋಗುತ್ತಿರುವೆ ಬೈಗಿನ ನೆರಳಂತೆ / ಬಿರುಗಾಳಿ ಕೊಂಡೊಯ್ಯುವ ಮಿಡತೆಯಂತೆ //
24 : ಬಡಕಲಾಯಿತೆನ್ನ ದೇಹ ಬರಡಿಲ್ಲದೆ / ನಡುಕಹುಟ್ಟಿತು ಕಾಲಿಗೆ ತ್ರಾಣವಿಲ್ಲದೆ //
25 : ಗುರಿಯಾಗಿರುವೆನು ನಾ ಜನರ ಅಪಹಾಸ್ಯಕ್ಕೆ / ನೋಡುವವರು ತಲೆಯಾಡಿಸಿ ಮಾಡುವ ನಿಂದೆಗೆ //
26 : ಹೇ ಪ್ರಭೂ, ಹೇ ದೇವಾ, ನೆರವಾಗಯ್ಯಾ / ಅಚಲಪ್ರೀತಿಯಿಂದ ನನ್ನ ರಕ್ಷಿಸಯ್ಯಾ //
27 : ನನ್ನ ರಕ್ಷಣೆ ನಿನ್ನ ಕೈಯಿಂದಾದುದೆಂದು ಅವರರಿಯಲಿ / ಅದು ನಿನ್ನಿಂದಲೇ ಹೇ ಪ್ರಭು, ಆದುದೆಂದು ಖಚಿತವಾಗಲಿ //
28 : ಅವರೆನ್ನನು ಶಪಿಸಿದರೂ ನೀನೆನ್ನನು ಹರಸು / ನನ್ನೆದುರಾಳಿಗೆ ಅಪಮಾನವನು ಹೊರಿಸು / ನಿನ್ನ ದಾಸನೆನಗೆ ಆನಂದವನು ಪಾಲಿಸು //
29 : ಮಾನಭಂಗವಾಗಲಿ ನನ್ನಾ ನಿಂದಕರಿಗೆ / ಬಟ್ಟೆಯಂತೆ ಅವರಿಗಂಟಿಕೊಳ್ಳಲಿ ಹೇಸಿಗೆ //
30 : ಕೊಂಡಾಡುವೆನು ಪ್ರಭುವನು ಬಹಳವಾಗಿ / ಕೀರ್ತಿಸುವೆನು ಆತನನು ಸಾಮೂಹಿಕವಾಗಿ //
31 : ನಿಂತಿರುವನು ಪ್ರಭು ಬಡವನ ಬಲಗಡೆ / ವಿಧಿಸುವವರಿಂದ ತಪ್ಪಿಸುವನು ಮರಣದಂಡನೆ //

Holydivine