Psalms - Chapter 91
Holy Bible

1 : ಪರಾತ್ಪರ ಪ್ರಭುವಿನ ಮೊರೆಹೊಕ್ಕಿರುವವನು / ಸರ್ವಶಕ್ತನ ಆಶ್ರಯದಲಿ ಸುರಕ್ಷಿತನು //
2 : ನಾನಾತನಿಗೆ, ‘ನೀನೇ ನನ್ನ ರಕ್ಷಕನೂ / ದುರ್ಗವೂ ನಾ ನಂಬಿದ ದೇವನು’ ಎನ್ನುವೆನು //
3 : ತಪ್ಪಿಸುವನಾತನು ಬೇಟೆಗಾರನ ಬಲೆಯಿಂದ / ರಕ್ಷಿಸುವನು ಮಾರಕವಾದ ವ್ಯಾಧಿಯಿಂದ //
4 : ಹುದುಗಿಸುವನು ನಿನ್ನನು ತನ್ನ ಗರಿಗಳ ತೆಕ್ಕೆಯಲಿ / ಆಶ್ರಯಪಡೆಯುವೆ ನೀ ಆತನ ರೆಕ್ಕೆಗಳಡಿಯಲಿ / ರಕ್ಷಣೆಯ ಕವಚವಿದೆ ಆತನು ಕೊಟ್ಟ ಮಾತಿನಲಿ //
5 : ನೀನು ಅಂಜಬೇಕಾಗಿಲ್ಲ ಇರುಳಿನ ದುರಿತಕೆ / ಹಗಲಿನಲಿ ಹಾರಿಬರುವ ಬಿರುಸು ಬಾಣಕೆ //
6 : ಕತ್ತಲೆಯಲಿ ಸಂಚರಿಸುವ ವಿಪತ್ತಿಗೆ / ನಡುಹಗಲಲೆ ಪೀಡಿಸುವ ಜಾಡ್ಯಕೆ //
7 : ಬೀಳಬಹುದು ಸಾವಿರ ಹೆಣಗಳು ಪಕ್ಕದಲೆ / ಹತ್ತುಸಾವಿರ ಹೆಣಗಳು ನಿನ್ನ ಬಲಗಡೆಯಲೆ / ಅಂಥ ಕೇಡೊಂದೂ ಬಾರದು ನಿನ್ನ ಪಾಲಿಗೆ //
8 : ನೀನಿದನು ಕಣ್ಣಾರೆ ಕಾಣುವೆ / ದುರುಳರ ದಂಡನೆಯನು ನೋಡುವೆ //
9 : ಪ್ರಭುವನೆ ನಿನ್ನಾಶ್ರಯವಾಗಿಸಿ ಕೊಂಡಿರುವುದರಿಂದ / ಪರಾತ್ಪರನನೆ ನಿನ್ನ ನಿವಾಸ ಆಗಿಸಿಕೊಂಡದ್ದರಿಂದ //
10 : ಹಾನಿಯೊಂದೂ ನಿನಗೆ ಸಂಭವಿಸದು / ಕೆಡಕು ನಿನ್ನ ಗುಡಾರದ ಬಳಿ ಸುಳಿಯದು //
11 : ನೀನು ಹೋದೆಡೆಯೆಲ್ಲಾ ನಿನ್ನ ಕಾಯುವುದಕ್ಕೆ / ಕೊಟ್ಟಿಹನಾತ ಕಟ್ಟಳೆ ತನ್ನ ದೂತರಿಗೆ //
12 : ನಿನ್ನ ಕಾಲು ಕಲ್ಲಿಗೆ ತಾಗದಂತೆ / ನಿನ್ನನೆತ್ತಿಕೊಳ್ವರವರು ಕೈಗಳಲೆ //
13 : ಸಿಂಹಗಳ ಮೇಲೂ, ಸರ್ಪಗಳ ಮೇಲೂ ನಡೆಯುವೆ / ಪ್ರಾಯದ ಸಿಂಹವನು, ಘಟಸರ್ಪವನು ತುಳಿದುಬಿಡುವೆ //
14 : ಪ್ರಭು : “ನನ್ನ ಭಕ್ತನಾದ್ದರಿಂದ ವಿಮೋಚಿ ಸುವೆನು ಅವನನು / ನನ್ನ ನಾಮವನು ಅರಿತವನಾದ್ದರಿಂದ ರಕ್ಷಿಸುವೆನು //
15 : ನನಗೆ ಮೊರೆಯಿಟ್ಟಾಗ ಕಿವಿಗೊಡುವೆನು / ಸಂಕಟದೊಳು ಅವನ ಸಂಗಡವಿರುವೆನು / ಅವನನು ಉದ್ಧರಿಸಿ ಘನಪಡಿಸುವೆನು //
16 : ದೀರ್ಘಾಯುಸ್ಸನ್ನಿತ್ತು ತೃಪ್ತಿಪಡಿಸುವೆನು / ನಾನು ನೀಡುವ ಮುಕ್ತಿಯನವನಿಗೆ ಮನಗಾಣಿಸುವೆನು” //

Holydivine