Psalms - Chapter 129
Holy Bible

1 : ಯೌವನಾರಭ್ಯ ಶತ್ರುಕಾಡಿದ್ದು ಎಂತೆಂದು / ಇಸ್ರಯೇಲ್ ಜನಾಂಗ ವರದಿ ಮಾಡಲಿ ನಮಗಿಂದು
2 : ಯೌವನಾರಭ್ಯ ನನ್ನನು ಎನಿತೋ ಬಾಧಿಸಿಹರು / ನನ್ನ ಮೇಲಾದರೋ ಜಯಗಳಿಸಲಿಲ್ಲ ಅವರು
3 : ಉಳುವವರು ಎನ್ನ ಬೆನ್ನನೆ ಉತ್ತಿರುವರು / ಆಳವಾದ ಗಾಯಗೆರೆಗಳನ್ನು ಮಾಡಿಹರು
4 : ನಮ್ಮ ಪ್ರಭುವಾದರೋ ಸತ್ಯಸ್ವರೂಪನು / ಕಡಿದಿಹನು ದುರುಳರು ಹಾಕಿದ ಕಟ್ಟುಗಳನು
5 : ಸಿಯೋನನ್ನು ದ್ವೇಷಿಸುವ ಜನ / ಹಿಂದಿರುಗಲಿ ಪಡೆದು ಅಪಮಾನ
6 : ಅವರಾಗಲಿ ಮಾಳಿಗೆ ಮೇಲಿನ ಹುಲ್ಲಿನಂತೆ / ಒಣಗಿಹೋಗುವುದದು ಹೂ ಬಿಡುವುದಕ್ಕೆ ಮುಂಚೆ
7 : ತುಂಬುವುದಿಲ್ಲಾ ಕೊಯ್ಯುವವನ ಹಿಡಿಯು / ಅದರ ಸಿವುಡು ಕಟ್ಟುವವನಾ ಮಡಿಲು
8 : ‘ಪ್ರಭು ನಿನ್ನನು ಆಶೀರ್ವದಿಸಲಿ’ ಎಂಬ ಮಾತನ್ನಾಗಲಿ | ‘ಪ್ರಭು ನಾಮದಲಿ ನಿನಗೆ ಶುಭ’ ಎಂದಾಗಲಿ | ಹಾದುಹೋಗುವ ಜನಜಂಗುಳಿ ಅವರಿಗೆ ಹೇಳದಿರಲಿ” ||

Holydivine