Psalms - Chapter 104
Holy Bible

1 : ಭಜಿಸು ನನ್ನ ಮನವೇ, ಭಜಿಸು, ಪ್ರಭುವನು / ಪ್ರಭು, ನನ್ನ ದೇವಾ, ನೀ ಸರ್ವೋತ್ತಮನು / ಮಹಿಮೆ ಪ್ರತಾಪಗಳಿಂದ ಭೂಷಿತನು //
2 : ತೊಟ್ಟುಕೊಂಡಿರುವೆ ಬೆಳಕನೇ ಬಟ್ಟೆಯಂತೆ / ಹರಡಿಸಿರುವೆ ಆಗಸವನು ಗುಡಾರದಂತೆ //
3 : ನಿರ್ಮಿಸಿರುವೆ ನಿನ್ನ ಭವನವನು ಜಲದ ಮೇಲೆ | ಮಾಡುವೆ ಸಂಚಾರ ಮಾರುತನ ರೆಕ್ಕೆಗಳ ಮೇಲೆ | ನಿನಗೆ ರಥವಾಹನಗಳು ಆ ಮುಗಿಲು ಮೋಡಗಳೇ ||
4 : ಗಾಳಿಗಳೇ ನಿನಗೆ ದೂತರುಗಳು / ಅಗ್ನಿಜ್ವಾಲೆಗಳೇ ಆಳುಗಳು //
5 : ಬುವಿಯನು ತಳಹದಿಯ ಮೇಲೆ ಸ್ಥಾಪಿಸಿರುವೆ / ಅದೆಂದಿಗೂ ಕದಲದಂತೆ ಮಾಡಿರುವೆ //
6 : ಅದಕ್ಕೆ ಹೊದಿಸಿರುವೆ ಸಾಗರವೆಂಬ ವಸ್ತ್ರವನು / ಆ ಜಲರಾಶಿಗಳು ಮುಳುಗಿಸಿವೆ ಬೆಟ್ಟಗಳನು //
7 : ತಲೆದೋರಿತು ಜಲ ನಿನ್ನ ಗದರಿಕೆಗೆ / ಹೆದರಿ ಹಿಂಜರಿಯಿತು ನಿನ್ನ ಗರ್ಜನೆಗೆ //
8 : ತಲೆದೋರಿದವು ಬೆಟ್ಟಗುಡ್ಡಗಳು / ತುಂಬಿಕೊಂಡವು ಹಳ್ಳಕೊಳ್ಳಗಳು / ಅವೇ ನೀ ನೇಮಿಸಿದ ಸ್ಥಳಗಳು //
9 : ಗೊತ್ತುಮಾಡಿರುವೆ ಆ ಜಲರಾಶಿಗೆ ಮೇರೆಯನು / ಅವು ಮತ್ತೆ ಮುಚ್ಚದಂತೆ ಮಾಡಿರುವೆ ಭೂಮಿಯನು //
10 : ಬುಗ್ಗೆಗಳು ಚಿಮ್ಮಿ ಓಡಮಾಡುವೆ ತಗ್ಗುಗಳಲಿ / ನದಿಗಳ ಹರಿಯಮಾಡುವೆ ಗುಡ್ಡಗಳ ನಡುವೆಯಲಿ //
11 : ನೀರ ನೀಡುವವು ಕುಡಿಯಲಿಕ್ಕೆ ಕಾಡುಮೃಗಗಳಿಗೆ / ದಾಹ ನೀಗಿಸಿಕೊಳ್ಳಲು ಆ ಕಾಡುಕತ್ತೆಗಳಿಗೆ //
12 : ಅವುಗಳ ಅರುಗಲ್ಲೇ ಇವೆ ಹಕ್ಕಿಗಳ ಗೂಡುಗಳು / ಕೇಳುತಿವೆ ಕೊಂಬೆಗಳಿಂದಾ ಪಕ್ಷಿಗಳ ಕಲರವಗಳು //
13 : ಮಲೆಗಳ ಮೇಲೆ ಮಳೆಗರೆಯುವೆ ಗಗನದಿಂದ / ತೃಪ್ತಿಗೊಂಡಿದೆ ಪೃಥ್ವಿಯು ನಿನ್ನ ಕೃಪೆ ಗಳಿಂದ //
14 : ಮೊಳೆಸುವೆ ಹುಲ್ಲನ್ನು ದನಕರುಗಳಿಗೋಸ್ಕರ | ಬೆಳೆಸುವೆ ಪೈರನು ನರಮಾನವರಿಗೋಸ್ಕರ ||
15 : ಒದಗಿಸುವೆ ಬೇಸಾಯದ ಆಹಾರವನು / ಹೃದಯವನು ಮುದಗೊಳಿಸುವ ದ್ರಾಕ್ಷಾರಸವನು / ಮುಖಕೆ ಮೆರಗನ್ನೀಯುವ ತಿಳಿತೈಲಗಳನು / ದೇಹವನು ಗಟ್ಟಿಮುಟ್ಟಾಗಿಸುವ ರೊಟ್ಟಿಯನು //
16 : ಜಲವಿದೆ ಲೆಬನೋನಿನ ದೇವದಾರು ವೃಕ್ಷಗಳಿಗೆ | ನೀರು ಬೇಕಾದಷ್ಟಿದೆ ಪ್ರಭು ನೆಟ್ಟ ಮರಗಳಿಗೆ ||
17 : ಗೂಡುಕಟ್ಟಿಕೊಳ್ಳುವುವು ಹಕ್ಕಿಗಳಾ ಮರಗಳಲಿ / ವಾಸಮಾಡುವುವು ಕೊಕ್ಕರೆಗಳು ತುರಾಯಿಮರಗಳಲಿ //
18 : ಬೆಟ್ಟಗುಡ್ಡಗಳಿವೆ ಕಾಡುಕುರಿಗಳಿಗೆ / ಬಂಡೆಬಿರುಕುಗಳಿವೆ ಬೆಟ್ಟದ ಮೊಲಗಳಿಗೆ //
19 : ಋತು ಸೂಚನೆಗಾಗಿ ನೀ ನಿರ್ಮಿಸಿದೆ ಚಂದ್ರನನು / ಸೂರ್ಯ ಬಲ್ಲನು ತನ್ನಸ್ತಮಾನದ ವೇಳೆಯನು //
20 : ರಾತ್ರಿಯಾಗುತ್ತದೆ ನೀ ಕತ್ತಲನು ಬರಮಾಡಲು / ತಿರುಗಾಡುತ್ತವೆ ಆಗ ಕಾಡಿನ ಜೀವ ಜಂತುಗಳು //
21 : ಗರ್ಜಿಸುತ್ತವೆ ಪ್ರಾಯಸಿಂಹಗಳು ಬೇಟೆಗಾಗಿ / ದೇವರನ್ನು ಎದುರು ನೋಡುತ್ತವೆ ಆಹಾರಕ್ಕಾಗಿ //
22 : ಮರಳುತ್ತವೆ ಸೂರ್ಯೋದಯವಾಗಲು / ತಂತಮ್ಮ ಗವಿಗುಹೆಗಳಲಿ ಮಲಗಲು //
23 : ಹೊರಡುತ್ತಾನಾಗ ಮಾನವ ಕೆಲಸಕೆ / ದುಡಿಯುತ್ತಾನೆ ಸಾಯಂಕಾಲದವರೆಗೆ //
24 : ಸೃಜಿಸಿರುವೆ ಎಲ್ಲವನು ಸುಜ್ಞಾನದಿಂದ / ಜಗವೆಲ್ಲ ತುಂಬಿದೆ ನಿನ್ನ ಸೃಷ್ಟಿಯಿಂದ //
25 : ಸಮುದ್ರವಿದೊ ಎಷ್ಟು ಅಪಾರ, ಅದೆಷ್ಟು ವಿಶಾಲ / ಅದರಲ್ಲಿರುವ ಸಣ್ಣ-ದೊಡ್ಡ ಜೀವಿಗಳಿಗೆ ಲೆಕ್ಕವಿಲ್ಲ //
26 : ಓಡಾಡುತ್ತವದರೊಳು ಹಡಗುಗಳು / ನೀನುಂಟುಮಾಡಿದ ತಿಮಿಂಗಿಲಗಳು //
27 : ಸಕಾಲದಲೊದಗಿಸುವೆ ಆಹಾರವನು / ನಂಬಿಕೊಂಡಿವೆ ಈ ಜೀವಿಗಳು ನಿನ್ನನು //
28 : ನೀ ನೀಡಲು ಕೂಡಿಸಿಟ್ಟುಕೊಳ್ಳುವುವು / ನೀ ಕೈತೆರೆಯಲವು ಸಂತೃಪ್ತಿಪಡೆವುವು //
29 : ತಲ್ಲಣಗೊಳ್ಳುವುವು ನೀ ಮುಖ ಮರೆಮಾಡಿಕೊಳ್ಳಲು | ಮಣ್ಣುಪಾಲಾಗುವುವು ನೀನವುಗಳ ಉಸಿರನಡಗಿಸಲು ||
30 : ನೀ ಉಸಿರನ್ನೂದಲು ಹೊಸದಾಗುವುವು / ಪುನಶ್ಚೇತನಗೊಳ್ಳುವುದು ಜಗವೆಲ್ಲವು //
31 : ಸ್ವಾಮಿದೇವನ ಮಹಿಮೆಯಿರಲಿ ಶಾಶ್ವತ ವಾಗಿ / ಆತ ಸಂತೋಷಿಸಲಿ ತನ್ನ ಸುಕೃತ್ಯಗಳಿಗಾಗಿ //
32 : ನಡುಗುತ್ತದೆ ಭೂಮಂಡಲ ಆತನ ಕೃತ್ಯಕೆ / ಹೊಗೆಕಾರುತ್ತದೆ ಪರ್ವತ ಆತನ ಸ್ಪರ್ಶಕೆ //
33 : ಪ್ರಭುವನು ನಾ ಹೊಗಳಿ ಹಾಡುವೆನು ಬಾಳಿನೊಳೆಲ್ಲ / ನನ್ನ ದೇವನನು ಭಜಿಸುವೆನು ನಾ ಜೀವಮಾನವೆಲ್ಲ //
34 : ಆತನಿಗೊಲಿಯಲಿ ನನ್ನ ಧ್ಯಾನ / ಆತನಲೇ ಹರ್ಷಿಸಲಿ ನನ್ನ ಮನ //
35 : ದಹಿಸಿಹೋಗಲಿ ಧರೆಯಿಂದ ದುಷ್ಟರು / ನಿರ್ಮೂಲವಾಗಲಿ ಸಕಲ ದುರುಳರು / ಪ್ರಭುವನು ನನ್ನ ಮನ ಸ್ತುತಿಸಲಿ / ಪ್ರಭುವಿಗೆ ಸ್ತುತಿಸ್ತೋತ್ರವಾಗಲಿ //

Holydivine