Psalms - Chapter 132
Holy Bible

1 : ನೆನಸಿಕೋ ಹೇ ಪ್ರಭೂ, ದಾವೀದನನು / ಆತ ಸಹಿಸಿದ ಕಷ್ಟದುಃಖಗಳನು
2 : ಸ್ಮರಿಸಿಕೊ ಪ್ರಭೂ, ಆತನು ಮಾಡಿದ ಶಪಥವನು / ಯಕೋಬ್ಯ ಘನದೇವನಿಗಾತ ಕೊಟ್ಟ ಈ ಮಾತನು
3 : “ಪ್ರಭುವಿಗೆ ಆಲಯವೊಂದನು ನಿರ್ಮಿಸುವ ತನಕ / ಯಕೋಬ್ಯ ಘನದೇವನಿಗೆ ಗುಡಿ ಕಟ್ಟುವ ತನಕ
4 : ನಾ ಸೇರೆನು ನನ್ನರಮನೆಯನು / ನಾ ಏರೆನು ನನ್ನ ಶಯ್ಯೆಯನು
5 : ಮುಚ್ಚೆನು ನಾನು ಕಣ್ಣುಗಳನು / ಕೂಡಿಸೆನು ನಾನು ರೆಪ್ಪೆಗಳನು”
6 : ಮಂಜೂಷವನು ಕುರಿತು ಕೇಳಿದೆವು ಎಫ್ರಾತಾದಲಿ / ನಮಗದು ಕಾಣಬಂದಿತು ಆ ಯಹಾರ್ ಮೈದಾನದಲಿ
7 : ಹೋಗೋಣ ಬನ್ನಿರಿ ಆತನ ಮಂದಿರಕೆ / ಅಡ್ಡಬೀಳೋಣ ಆತನ ಪಾದಪೀಠಕೆ
8 : ಆಗಮಿಸು ಪ್ರಭು, ನಿನ್ನ ತೇಜೋ ಮಂಜೂಷದೊಡನೆ / ನಿನ್ನಾ ವಾಸಸ್ಥಾನವನು ಬಂದು ಸೇರು ಬೇಗನೆ
9 : ನೀತಿಭೂಷಿತರಾಗಲಿ ನಿನ್ನ ಯಾಜಕರು / ಆನಂದ ಘೋಷಮಾಡಲಿ ನಿನ್ನ ಭಕ್ತಜನರು
10 : ನಿನ್ನ ದಾಸ ದಾವೀದನ ಪ್ರಯುಕ್ತ / ತಳ್ಳಲ್ಪಡದಿರಲಿ ನಿನ್ನಾ ಅಭಿಷಿಕ್ತ
11 : ದಾವೀದನಿಗೆ ಪ್ರಭು ಆಣೆಯಿಟ್ಟು ಇಂತೆಂದ: / ಆಣೆಯಿಟ್ಟು ಕೊಟ್ಟಾ ಮಾತಿಗೆ ತಪ್ಪಲಾರನಾತ: / “ನಿನ್ನ ಸಿಂಹಾಸನದಲಿ ಕೂರಿಸುವೆನು ನಿನ್ನ ತನುಜನೊಬ್ಬನನು”
12 : “ನನ್ನ ನೇಮನಿಯಮಗಳನು ನಿನ್ನ ಮಕ್ಕಳು ಅನುಸರಿಸುವರಾದರೆ / ಕೂರುವರು ಸದಾಕಾಲ ಅವರ ಮಕ್ಕಳ ನಿನ್ನಾ ಸಿಂಹಾಸನದ ಮೇಲೆ”
13 : ಆರಿಸಿಕೊಂಡಿಹನು ಪ್ರಭು ಸಿಯೋನ್ ನಗರವನು / ಅಪೇಕ್ಷಿಸಿಹನು ತನ್ನ ನಿವಾಸಕ್ಕಾಗಿ ಅದನು
14 : “ಎಂದೆಂದಿಗು ಇದೇ ನನ್ನ ನಿವಾಸ / ಇರುವೆನಿಲ್ಲೇ, ಇದು ನನ್ನ ಅಭಿಲಾಶ
15 : ಇದಕ್ಕೊದಗಿಸುವೆನು ಧಾರಾಳ ಸಿರಿಸಂಪತ್ತನು / ಅನ್ನದಿಂದ ತೃಪ್ತಿಪಡಿಸುವೆನಿಲ್ಲಿಯ ದಲಿತರನು
16 : ಹೊದಿಸುವೆನಿದರ ಯಾಜಕರಿಗೆ ರಕ್ಷಣಾವಸ್ತ್ರವನು / ಸಾಧುಸಂತರು ಮಾಡುವರಿದರ ಹರ್ಷೋದ್ಗಾರವನು
17 : ಕೋಡೊಂದು ಮೂಡುವಂತೆ ಮಾಡುವೆ ದಾವೀದನಿಗಿಲ್ಲೆ / ನಂದಾದೀಪ ಬೆಳಗುವಂತೆ ಮಾಡುವೆ ನನ್ನ ಅಭಿಷಿಕ್ತನಿಗಿಲ್ಲೆ
18 : ತೊಡಿಸುವೆನು ಅವನ ವೈರಿಗಳಿಗೆ ಲಜ್ಜಾಕವಚವನು / ಮುಡಿಸುವೆನು ಅವನಿಗಾದರೋ ಪ್ರಜ್ವಲ ಕಿರೀಟವನು” //

Holydivine