Psalms - Chapter 40
Holy Bible

1 : ಕಾದಿದ್ದೆನು, ಪ್ರಭುವಿಗಾಗಿ ಕಾದಿದ್ದೆನು / ಕೊನೆಗಾತ ನನ್ನತ್ತ ಬಾಗಿ ಕಿವಿಗೊಟ್ಟನು //
2 : ಮೇಲೆತ್ತಿದನು ವಿನಾಶದ ಕೆಸರಿಂದ, ಕರಾಳ ಕೂಪದಿಂದ | ಗೋರ್ಕಲ್ಲ ಮೇಲಿರಿಸಿ ಹೆಜ್ಜೆಯಿಡಿಸಿದನು ಅತಿ ಧೈರ್ಯದಿಂದ ||
3 : ಬರಿಸಿದನು ನವಗೀತೆಯನು, ದೇವಸ್ತುತಿಯನು ನನ್ನ ಬಾಯಲಿ | ಇದ ಕಂಡವರು ಭಯಪಡುವರು, ಇಡುವರು ಭರವಸೆ ಪ್ರಭುವಿನಲಿ ||
4 : ಪ್ರಭುವಿನಲ್ಲೆ ಭರವಸೆ ಇಟ್ಟು ನಡೆವಾತನು ಧನ್ಯನು | ಗರ್ವಿಗಳನು, ಸುಳ್ಳುದೇವರನು, ಹಿಂಬಾಲಿಸನವನು ||
5 : ಪ್ರಭು, ಎನ್ನ ದೇವ, ನಿನಗೆ ಸಮಾನತೆ ಎಲ್ಲಿಯದು | ನೀನೆಸಗಿದ ಪವಾಡ ಪ್ರಯೋಜನಗಳೆನಿತು | ಅಗಣಿತವಾದವುಗಳ ವಿವರ ಅಸದಳವಾದುದು ||
6 : ಬೇಡವಾದವು ನಿನಗೆ ಯಜ್ಞಾರ್ಪಣೆ, ಬಲಿಕಾಣಿಕೆ | ಬಯಸಿಲ್ಲ ನೀ ಹೋಮವನೆ, ಪರಿಹಾರಕ ಬಲಿಯನೆ | ಶ್ರವಣಶಕ್ತಿಯನು ಅನುಗ್ರಹಿಸಿದೆ ನೀನು ನನಗೆ ||
7 : ನಾನೋಗೊಡುತ ಇಂತೆಂದೆ: “ಇಗೋ ನಾನೇ ಬರುತ್ತಿರುವೆ | ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ? ||
8 : ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ | ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ”||
9 : ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ || ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ ||
10 : ಬಚ್ಚಿಟ್ಟುಕೊಳ್ಳಲಿಲ್ಲ ನನ್ನೆದೆಯೊಳು ನಿನ್ನ ಸತ್ಸಂಬಂಧವನು | ಪ್ರಕಟಿಸಿದೆನು ಜೀವೋದ್ಧಾರವನು, ನಿನ್ನ ಪ್ರಾಮಾಣಿಕತೆಯನು | ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ ಪ್ರೀತಿ ಸತ್ಯತೆಯನು ||
11 : ಅಗಲಿಸಬೇಡ ಪ್ರಭೂ, ನಿನ್ನ ಕೃಪೆಯನು ನನ್ನಿಂದ | ನಿನ್ನ ಪ್ರೀತಿ ಸತ್ಯಕೆ ಕಾದಿರಿಸಲಿ ನನ್ನನು ಸತತ ||
12 : ಲೆಕ್ಕವಿಲ್ಲದಾಪತ್ತುಗಳು ನನ್ನನು ಸುತ್ತಿಕೊಂಡಿವೆ | ದಿಕ್ಕು ತೋಚದಂತೆನ್ನ ಪಾಪಗಳು ನನಗಂಟಿಕೊಂಡಿವೆ | ಸಿಲುಕವು ಎಣಿಕೆಗೆ ತಲೆಗೂದಲಂತೆ, ನಾನೆದೆಗುಂದಿರುವೆ ||
13 : ಕರುಣೆಯಿಂದೆನ್ನನು ಪ್ರಭು ರಕ್ಷಿಸ ಬಾ | ನನಗೊತ್ತಾಸೆ ಮಾಡಲು ಪ್ರಭು, ಬೇಗ ಬಾ ||
14 : ನನ್ನ ಕೊಲೆಗೆಂದು ಯತ್ನಿಸುವವರು ನಾಚಿ ಗಲಿಬಿಲಿಗೊಳ್ಳಲಿ / ನನ್ನಳಿವನು ಕೋರುವಂಥವರು ಲಜ್ಜೆಯಿಂದ ಹಿಂದಿರುಗಲಿ //
15 : ಆಹಾ ಆಹಾ ಎಂದು ಹಾಸ್ಯ ಮಾಡುವವರು | ಅಕಟಕಟವೆನ್ನಲಿ ಹೇಸಿಗೆಯಿಂದಾ ನರರು ||
16 : ನಿನ್ನನು ಅರಸುವವರೆಲ್ಲರು ಹರ್ಷಾನಂದಗೊಳ್ಳಲಿ / ನಿನ್ನ ರಕ್ಷಣಾಪ್ರಿಯರು ಸತತ “ಪ್ರಭು ಪರಾಕ್ರಮಿ” ಎನ್ನಲಿ //
17 : ಬಡವನು, ದುರ್ಬಲನು ಆದೆನಗೆ ಪ್ರಭೂ, ನೀ ಹಿತಚಿಂತಕನು / ತಡಮಾಡಬೇಡ ದೇವಾ, ನೀನೆನಗುದ್ಧಾರಕನು, ಸಹಾಯಕನು //

Holydivine