Psalms - Chapter 106
Holy Bible

1 : ಪ್ರಭು ದಯಾಪೂರಿತ, ಆತನ ಪ್ರೀತಿ ಶಾಶ್ವತ / ತೋರಿ ಆತನಿಗೆ ನಿಮ್ಮ ಸ್ತೋತ್ರ ಕೃತಜ್ಞತಾ //
2 : ವರ್ಣಿಸಬಲ್ಲವನಾರು ಆತನ ಮಹತ್ಕಾರ್ಯಗಳನು?/ ಯೋಗ್ಯರೀತಿಯಲಿ ಹೊಗಳಬಲ್ಲವರಾರು ಆತನನು? //
3 : ನ್ಯಾಯದಂತೆ ನಡೆಯುವವರು ಧನ್ಯರು / ಅವಿರತವಾಗಿ ನೀತಿವಂತರು ಧನ್ಯರು //
4 : ಮರೆಯಬೇಡೆನ್ನನು ಪ್ರಭು, ನಿನ್ನ ಪ್ರಜೆಗೆ ದಯೆತೋರುವಾಗ / ನೆರವು ನೀಡೆನಗೆ ಸ್ವಾಮಿ, ನೀನಾ ಜನರನು ಉದ್ಧರಿಸುವಾಗ //
5 : ನೀನಾರಿಸಿಕೊಂಡಿರುವ ಪ್ರಗತಿಯನು ನಾ ಕಾಣಮಾಡು / ನಿನ್ನ ಜನಾಂಗದವರ ಸಂತಸವನು ನಾ ಸವಿಯಮಾಡು / ನಿನ್ನ ಸ್ವಕೀಯರ ಮಹಿಮೆಯಲ್ಲೆನಗೆ ಪಾಲನ್ನು ನೀಡು //
6 : ನಮ್ಮ ಪಿತೃಗಳಂತೆಯೆ ಪಾಪಿಗಳು ನಾವು / ಅಕ್ರಮಗೈದೆವು, ಅಪರಾಧಿಗಳಾದೆವು //
7 : ಗ್ರಹಿಸಲಿಲ್ಲಾ ಪಿತೃಗಳು ನಿನ್ನದ್ಭುತಗಳನು ಈಜಿಪ್ಟಿನಲಿ / ಸ್ಮರಿಸಲಿಲ್ಲವರು ನಿನ್ನಚಲ ಪ್ರೇಮಾತಿಶಯಗಳನು ಅಲ್ಲಿ / ಬದಲಿಗೆ ಮಹೋನ್ನತನನೆ ಪ್ರತಿಭಟಿಸಿದರು ಕೆಂಗಡಲಬಳಿ //
8 : ಆದರೂ ತನ್ನ ನಾಮಪ್ರಯುಕ್ತ ರಕ್ಷಿಸಿದನವರನು / ಪ್ರಕಟಿಸಿದನಾತ ಹೀಗೆ ತನ್ನ ಶಕ್ತಿಸಾಮಥ್ರ್ಯವನು //
9 : ಒಣಗಿಹೋಯಿತಾ ಕೆಂಗಡಲು ಆತನ ಗದರಿಕೆಗೆ / ದಾಟಿಸಿದನಾ ಸಾಗರವನು ಅಡವಿಯೋ ಎಂಬ ಹಾಗೆ //
10 : ತಪ್ಪಿಸಿದನವರನು ವೈರಿಗಳ ಕೈಯಿಂದ / ರಕ್ಷಿಸಿದನು ಆ ಶತ್ರುಗಳ ಹಿಡಿತದಿಂದ //
11 : ಮುಳುಗಿಸಿತು ಜಲರಾಶಿ ಆ ಶತ್ರುಗಳನು / ಉಳಿಯಗೊಡಿಸಲಿಲ್ಲ ಅವರಲ್ಲೊಬ್ಬನನು //
12 : ಆಗ ನಂಬಿದರು ಪ್ರಭುವಿನಾ ಮಾತನು / ಮಾಡಿದರಾಗ ಆತನ ಗುಣಗಾನವನು //
13 : ಆದರೆ ಮರೆತರು ಬೇಗನೆ ಆತನ ಸತ್ಕಾರ್ಯಗಳನು / ಕಾಯದೆ ಹೋದರು ಆತನಾ ಸಂಕಲ್ಪ ಸಾಧನೆಯನು //
14 : ಆಶಾಪಾಶಗಳಿಗೆ ಈಡಾದರು ಅಡವಿಯೊಳು / ದೇವನನೇ ಪರಿಶೋಧಿಸಿದರು ಅರಣ್ಯದೊಳು //
15 : ಪೂರೈಸಿದನಾತ ಅವರ ಕೋರಿಕೆಯನು / ಕಳುಹಿಸಿದನಾದರೆ ಭೀಕರ ರೋಗವನು //
16 : ಅಸೂಯೆಗೊಂಡರು ಪಾಳೆಯದೊಳು ಮೋಶೆಯ ಮೇಲೆ / ಪ್ರಭುವಿಗೆ ಪ್ರತಿಷ್ಟಿತನಾದ ಆ ಆರೋನನ ಮೇಲೆ //
17 : ಭೂಮಿ ಬಾಯ್ದೆರೆದು ನುಂಗಿತು ದಾತಾನನನು / ಮುಚ್ಚಿಬಿಟ್ಟಿತು ಅಭಿರಾಮನ ಕಡೆಯವರನು //
18 : ಆ ಜನರ ಮಧ್ಯದಲಿ ಬೆಂಕಿ ಹಬ್ಬಿತು / ಅಗ್ನಿಜ್ವಾಲೆ ದಹಿಸಿಬಿಟ್ಟಿತು ಆ ದುಷ್ಟರನು //
19 : ಹೋರೇಬಿನಲಿ ಮಾಡಿದರು ಬಸವನನು / ಆರಾಧಿಸಿದರು ಆ ಎರಕದ ಶಿಲೆಯನು //
20 : ಈಪರಿ ತೊರೆದುಬಿಟ್ಟರು ತಮ್ಮ ಮಹಿಮಾ ದೇವರನು / ಆರಿಸಿಕೊಂಡರು ಹುಲ್ಲುತಿನ್ನುವ ಬಸವನ ವಿಗ್ರಹವನು //
21 : ಮರೆತುಬಿಟ್ಟರವರು ತಮ್ಮ ಮುಕ್ತಿದಾತ ದೇವನನು / ಈಜಿಪ್ಟಿನಲ್ಲಾತ ಎಸಗಿದ ಮಹತ್ಕಾರ್ಯಗಳನು //
22 : ಹಾಮನಾಡಿನಲಿ ಮಾಡಿದ ಅದ್ಭುತಗಳನು / ಕೆಂಗಡಬಳಿ ನಡೆದ ಘೋರ ಕೃತ್ಯಗಳನು //
23 : ಎಂತಲೇ ‘ಸಂಹರಿಸುವೆ’ ಎನ್ನಲು ಪ್ರಭು ಅವರನು / ಆಪ್ತ ಮೋಶೆಯು ಮಧ್ಯಸ್ಥನಾಗಿ ಬಂದನು / ಸಂಹರಿಸದಂತೆ ಶಮನಗೊಳಿಸಿದನಾ ಕೋಪವನು //
24 : ಅವರೊ ಬೇಡವೆಂದರು ಆ ಚೆಲುವಿನ ನಾಡನು / ನಂಬದೆ ಹೋದರು ಅವನಿತ್ತಾ ವಾಗ್ದಾನವನು //
25 : ಗೊಣಗುಟ್ಟಿದರು ತಮ್ಮ ಗುಡಾರಗಳಲಿ / ನಂಬಿಕೆಯಿಡಲಿಲ್ಲ ಆತನ ಮಾತಿನಲಿ //
26 : ಈ ಕಾರಣ ಆಣೆಯಿಟ್ಟನು ಕೈಯೆತ್ತಿ: / “ಬೀಳಮಾಡುವೆನು ನಿಮ್ಮನು ಅಡವಿಯಲಿ, //
27 : ಚದರಿಸುವೆನು ನಿಮ್ಮ ಸಂತಾನವನು ಹೊರನಾಡುಗಳಲಿ / ಅಳಿದು ಹೋಗುವರವರು ಅನ್ಯಜನಾಂಗಗಳ ಮಧ್ಯೆಯಲಿ” /
28 : ಬಾಳ್‍ಪೆಗೋರ ದೇತೆಯ ಊಳಿಗದವರಾದರು / ಸತ್ತವರಿಗರ್ಪಿಸಿದ ಬಲಿಯನು ಉಣ್ಣುವವರಾದರು // ಅವರಕ್ರಮ ನಡತೆ ಪ್ರಭುವನು ಕೆಣಕಿತು / ಭೀಕರ ವ್ಯಾಧಿ ಅವರ ಮಧ್ಯೆ ಹಬ್ಬಿತು //
29 ಅವರಕ್ರಮ ನಡತೆ ಪ್ರಭುವನು ಕೆಣಕಿತು I ಭೀಕರ ವ್ಯಾಧಿ ಅವರ ಮಧ್ಯೆ ಹಬ್ಬಿತು II
30 : ಫಿನೆಹಾಸನೆದ್ದು ದಂಡಿಸಿದೊಡನೆ / ನಿಂತುಹೋಯಿತು ಆ ಘೋರ ಬೇನೆ //
31 : ಆತ ಮಾಡಿದಾ ನೈಪುಣ್ಯ / ಆಯಿತು ತಲಾಂತರಕು ಗಣ್ಯ //
32 : ಮೆರಿಬಾ ನದಿಯ ಬಳಿ ರೇಗಿಸಿದರಾತನನು / ಹೀಗೆ ಬರಮಾಡಿದರು ಮೋಶೆಗೂ ಹಾನಿಯನು //
33 : ನಿಂತರಾಗ ದೇವರಾತ್ಮನಿಗೆ ವಿರೋಧವಾಗಿ / ನುಡಿಯಬೇಕಾಯಿತು ಮೋಶೆಯು ಅವಿವೇಕವಾಗಿ //
34 : ಅನುಸರಿಸಲಿಲ್ಲ ಅವರು ಪ್ರಭುವಿನಾಜ್ಞೆಯನು / ಆತ ಸಂಹರಿಸಲಿಲ್ಲ ಶೋಧಿಸಿದಾ ಜನರನು //
35 : ಅನ್ಯಜನರೊಡನವರು ಕಲೆತು ಬೆರೆತುಹೋದರು / ಅವರ ದುರಾಚಾರಗಳನ್ನೂ ಕಲಿತುಕೊಂಡರು //
36 : ಪೂಜೆಮಾಡಿದರು ಆ ಜನರ ವಿಗ್ರಹಗಳಿಗೆ / ಉರುಲಾದವು ಆ ವಿಗ್ರಹಗಳೆ ಅವರಿಗೆ //
37 : ತಮ್ಮ ಪುತ್ರ ಪುತ್ರಿಯರನೇ ಅರ್ಪಿಸಿದರು / ದೆವ್ವಭೂತಗಳಿಗೆ ಅವರನು ಬಲಿಕೊಟ್ಟರು /
38 : ಸುರಿಸಿದರು ತಮ್ಮ ಮಕ್ಕಳ ನಿರ್ದೋಷ ರಕ್ತವನು / ಬಲಿಕೊಟ್ಟರು ಕಾನಾನ್ಯರ ವಿಗ್ರಹಗಳಿಗೆ ಅವರನು / ಹೊಲೆಮಾಡಿದರಿಂಥ ಕೊಲೆಗಳಿಂದ ದೇಶವನು //
39 : ಅಶುದ್ಧರಾದರವರು ತಮ್ಮ ದುಷ್ಕøತ್ಯಗಳಿಂದ / ದೇವದ್ರೋಹಿಗಳಾದರು ದುರಾಚಾರ ಗಳಿಂದ //
40 : ಕೆರಳಿತು ಕೋಪ ಆ ಜನರ ಮೇಲೆ ಪ್ರಭುವಿಗೆ / ತನ್ನವರಾ ನಡತೆ ಅಸಹ್ಯವಾಯಿತು ಆತನಿಗೆ //
41 : ಎಂತಲೆ ಒಪ್ಪಿಸಿದನವರನು ಅನ್ಯರಾಷ್ಟ್ರಗಳ ಕೈಗೆ / ಹಗೆಮಾಡುತ್ತಿದ್ದವರೇ ಅಧಿಕಾರಿಗಳಾದರವರಿಗೆ //
42 : ಗುರಿಯಾದರು ಶತ್ರುಶೋಷಣೆಗೆ / ಕುಗ್ಗಿಹೋದವರು ಅವರ ಕೈಕೆಳಗೆ //
43 : ಪ್ರಭು ಪದೇಪದೇ ವಿಮುಕ್ತಗೊಳಿಸಿದನಾದರೂ / ಪರ್ಯಾಲೋಚಿಸದೆ ಪ್ರತಿಭಟನೆ ಮಾಡಿದರವರು / ಈ ಪರಿಯ ಅಕ್ರಮದ ನಿಮಿತ್ತ ಅವನತಿಗಿಳಿದರು //
44 : ನೋಡಿದನಾತ ಅವರ ಕಷ್ಟಕಾರ್ಪಣ್ಯವನು / ಗಮನಿಸಿದನು ಅವರ ಆರ್ತನಾದವನು //
45 : ನೆನಪಿಗೆ ತಂದುಕೊಂಡನು ತನ್ನೊಡಂಬಡಿಕೆಯನು / ದಯಾಳುತನದಿಂದ ತೋರಿದನವರಿಗೆ ಕರುಣೆಯನು /
46 : ಬಂಧಿಸಿದವರಿಂದಲೂ ದಯೆಯನು ದೊರಕಿಸಿದನು //
47 : ಹೇ ಪ್ರಭು, ನಮ್ಮ ದೇವಾ, ನಮ್ಮನ್ನುದ್ಧರಿಸು / ನಾಡುನಾಡುಗಳಿಂದ ನಮ್ಮನೊಂದುಗೂಡಿಸು / ನಿನ್ನ ಪವಿತ್ರ ನಾಮವನು ನಾವು ಭಜಿಸುವೆವು / ನಿನ್ನಸ್ತುತಿ ಸ್ತೋತ್ರಗಳಲಿ ಹೆಚ್ಚಳ ಪಡುವೆವು //
48 : ಇಸ್ರಯೇಲಿನ ದೇವನಾದ ಪ್ರಭುವಿಗೆ ಸ್ತೋತ್ರ / ಅನಾದಿಯಿಂದ ಯುಗಯುಗಾಂತರಕು ಸ್ತೋತ್ರ / ಜನರೆಲ್ಲರು ಹೇಳಲಿ ‘ಆಮೆನ್’, ಪ್ರಭುವಿಗೆ ಸ್ತೋತ್ರ //

Holydivine