Psalms - Chapter 46
Holy Bible

1 : ದೇವರೆಮಗೆ ಆಶ್ರಯ ದುರ್ಗ / ಸಂಕಟದಲಿ ಸಿದ್ಧ ಸಹಾಯಕ //
2 : ಕಡಲಲ್ಲಿ ಗುಡ್ಡಗಳು ಮುಳುಗಿದರೂ ದಿಗಿಲಿಲ್ಲ / ಪೊಡವಿ ಕಂಪಿಸಿದರು ನಮಗೇನು ಭಯವಿಲ್ಲ //
3 : ಸಮುದ್ರ ಭೋರ್ಗರೆದರೇನು? ನೊರೆಕಾರಿದರೇನು?/ ಅದರೊಡನೆ ಪರ್ವತಗಳು ಅಲುಗಾಡಿದರೇನು?// ನಮ್ಮ ಕಡೆಗಿರುವನು ಸೇನಾಧೀಶ್ವರ ಪ್ರಭುವು / ಯಕೋಬ ಕುಲದೇವನು ನಮಗಾಶ್ರಯ ದುರ್ಗವು //
4 : ನದಿಯೊಂದು ಆನಂದಗೊಳಿಸುವುದು ದೇವನಗರವನು | ಪುನೀತಗೊಳಿಸುವುದು ಪರಾತ್ಪರನ ನಿವಾಸವನು ||
5 : ದೇವನಿರುವನಾ ನಗರ ಮಧ್ಯೆ, ಅಳಿವಿಲ್ಲ ಅದಕೆ / ಉದಯಕಾಲದಲೆ ದೇವ ಬರುವನು ಅದರ ಸಹಾಯಕೆ //
6 : ನಡುಗಿದವು ರಾಷ್ಟ್ರಗಳು, ಉಡುಗಿದವು ರಾಜ್ಯಗಳು / ದೇವರ ಗರ್ಜನೆಗೆ ಕರಗಿತು ಧರೆಯೆಲ್ಲವು //
7 : ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು / ಯಕೋಬ ಕುಲದೇವರು ನಮಗಾಶ್ರಯ ದುರ್ಗವು //
8 : ಪ್ರಭುವಿನ ಕಾರ್ಯಗಳ ನೋಡಬನ್ನಿ / ಇಳೆಯೊಳಗೆಸಗಿದ ಪವಾಡಗಳನು ನೋಡಿ //
9 : ಜಗದೆಲ್ಲೆಡೆ ಕದನ ಕಾಳಗ ನಿಲ್ಲಿಸಿಹನು / ಬಿಲ್ಲು ಭಲ್ಲೆಗಳನು ಮುರಿದು ಹಾಕಿದನು / ರಥಗಳನು ಬೆಂಕಿಯಿಂದ ಸುಟ್ಟುಹಾಕಿದನು //
10 : ‘ಶಾಂತರಾಗಿರಿ, ತಿಳಿಯಿರಿ ನಾನು ದೇವನೆಂದು / ಜನಕ್ಕೂ ಜನಾಂಗಕ್ಕೂ ನಾನಧಿಪತಿಯೆಂದು’//
11 : ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು / ಯಕೋಬ ಕುಲದೇವರು ನಮಗಾಶ್ರಯ ದೇವರು //

Holydivine