Psalms - Chapter 9
Holy Bible

1 : ಮನಃಪೂರ್ವಕವಾಗಿ ಪ್ರಭು, ನಿನ್ನ ಕೊಂಡಾಡುವೆನು / ನಿನ್ನದ್ಭುಕಾರ್ಯಗಳೆಲ್ಲವನು ನಾ ವರ್ಣಿಸುವೆನು //
2 : ಪರಾತ್ಪರನೇ, ಮಾಡುವೆನು ನಿನ್ನ ನಾಮಸ್ತುತಿ / ಹರ್ಷಾನಂದಗೊಳ್ವೆನು ದೇವಾ, ನಿನ್ನಲ್ಲತಿ //
3 : ನಿನ್ನ ಕಂಡು ನನ್ನ ವೈರಿಗಳು ಗೈದರು ಪಲಾಯನ / ಎದ್ದು ಬಿದ್ದು ಅವರೆಲ್ಲರೂ ಹೊಂದಿದರು ವಿನಾಶನ //
4 : ನ್ಯಾಯಪೀಠದಲಿ ಕುಳಿತೆನ್ನ ವ್ಯಾಜ್ಯತೀರಿಸಿದೆ / ನೀತಿಗನುಸಾರವಾಗಿ ನ್ಯಾಯ ಸ್ಥಾಪಿಸಿದೆ //
5 : ಭ್ರಷ್ಟರನು ದಂಡಿಸಿದೆ, ರಾಷ್ಟ್ರಗಳನು ಖಂಡಿಸಿದೆ / ಎಂದೆಂದೂ ಹೆಸರಿಲ್ಲದಂತೆ ಅವರನು ಅಳಿಸಿಹಾಕಿದೆ //
6 : ನಿಶ್ಯೇಷವಾಗಿ ಹೋದರು ವಿರೋಧಿಗಳು / ನಾಶವಾಗಿ ಹೋದವು ಅವರ ನಗರಗಳು / ಇಲ್ಲವಾದವು ಅವರ ಯಾವ ನೆನಪುಗಳು //
7 : ಪ್ರಭುವಿನ ರಾಜ್ಯಾಡಳಿತ ಶಾಶ್ವತ / ಆತನ ನ್ಯಾಯ ಪೀಠ ಸುಸ್ಥಾಪಿತ //
8 : ಜಗಕೆ ನ್ಯಾಯ ತೀರಿಸುವನು ನೀತಿಗನುಸಾರ / ಜನಾಂಗಕೆ ತೀರ್ಪುಕೊಡುವನು ಸತ್ಯಕ್ಕನುಸಾರ //
9 : ದಲಿತರಿಗೆ ಪ್ರಭು ದುರ್ಗಸ್ಥಾನ / ಆಪತ್ತಿನಲ್ಲಿ ಆಶ್ರಯ ಸ್ಥಾನ //
10 : ನಿನ್ನನು ಅರಸುವವರನು ಹೇ ಪ್ರಭು, ನೀ ಕೈ ಬಿಡುವವನಲ್ಲ / ನಿನ್ನಲ್ಲಿ ಭರವಸೆ ಇಡುವರು ನಿನ್ನ ನಾಮವನರಿತವರೆಲ್ಲ //
11 : ಸಂಕೀರ್ತಿಸಿರಿ ಸಿಯೋನಿನಲಿ ವಾಸಿಸುವ ಪ್ರಭುವನು / ಪ್ರಕಟಿಸಿರಿ ಜನತೆಗೆ ಆತನ ಮಹತ್ಕಾರ್ಯಗಳನು //
12 : ರಕ್ತಪಾತ ಲೆಕ್ಕಿಸಿ ಸೇಡು ತೀರಿಸುವಾತ / ದೀನದಲಿತರ ಮೊರೆಯನೆಂದಿಗು ಮರೆಯನಾತ //
13 : ಮೃತ್ಯುವಿನ ಬಾಯಿಂದೆನ್ನ ಬದುಕಿಸುವ ಪ್ರಭು, ಕನಿಕರಿಸು / ವೈರಿ-ವಿರೋಧಿಗಳೆನಗೆ ಗೈದ ಕಿರುಕುಳವನು, ನೀ ಗಮನಿಸು //
14 : ಆಗ ಸಿಯೋನ್ ನಗರಿಯ ದ್ವಾರದಲೆ ನಿಲ್ಲುವೆನು / ನಿನ್ನ ಗುಣಾತಿಶಯಗಳನು ಪ್ರಸಿದ್ಧಪಡಿಸುವೆನು / ನೀನಿತ್ತ ಮುಕ್ತಿಗಾಗಿ ಆನಂದಗೊಳ್ಳುವೆನು //
15 : ಬಿದ್ದರು ಹೊರನಾಡಿಗರು ತಾವು ತೋಡಿದ ಗುಣಿಯಲೆ / ಸಿಕ್ಕಿಕೊಂಡಿತವರ ಕಾಲು ಅವರೊಡ್ಡಿದ ಬಲೆಯಲೆ //
16 : ಪ್ರಭುವಿತ್ತ ನ್ಯಾಯತೀರ್ಪೇ ಆತನಿಗೆ ಪ್ರಚಾರಕ / ದುಷ್ಟರ ಗೈದ ಕುಯುಕ್ತಿಯೇ ಅವರಿಗೆ ಸಂಹಾರಕ //
17 ಕೆಳ ಪಾತಾಳವೊಂದೇ ಗತಿ ದುಷ್ಟರಿಗೆ I ದೇವರನು ಕೈಬಿಟ್ಟಾ ರಾಷ್ಟ್ರಗಳಿಗೆ II
18 : ದರಿದ್ರರನು ದೇವರು ಎಂದಿಗು ಮರೆಯುವುದಿಲ್ಲ / ನಿರ್ಗತಿಕರ ನಿರೀಕ್ಷೆ ಕೈಗೂಡದೆ ಇರುವುದಿಲ್ಲ //
19 : ಎದ್ದೇಳು ಪ್ರಭೂ, ಜಯ ದೊರಕದಿರಲಿ ನರಮಾನವನಿಗೆ / ನಡೆಯಲಿ ನಿನ್ನ ಮುಂದೆಯೆ ನ್ಯಾಯನಿರ್ಣಯ ಜನಾಂಗಗಳಿಗೆ //
20 : ಮೂಡಿಸು ಹೇ ಪ್ರಭೂ, ಅವರಲಿ ಭಯಭ್ರಾಂತಿಯನು / ಕಲಿಸು ಜನಾಂಗಕೆ ತಾವು ಹುಲು ಮಾನವರೆಂಬುದನು //

Holydivine