Psalms - Chapter 83
Holy Bible

1 : ಮಾತನಾಡದೆ ದೇವಾ, ಸುಮ್ಮನಿರಬೇಡ / ಮೌನದಿಂದ ಸ್ವಾವಿೂ, ನಿಶ್ಚಿಂತನಿರಬೇಡ //
2 : ದಂಗೆಯೆದ್ದಿಹರಿದೋ ನಿನ್ನ ಶತ್ರುಗಳು / ತಲೆಯೆತ್ತಿಕೊಂಡಿಹರು ನಿನ್ನ ದ್ವೇಷಿಗಳು //
3 : ಕುತಂತ್ರಮಾಡುತಿಹರು ನಿನ್ನ ಪ್ರಜೆಗೆ ವಿರುದ್ಧ / ಆಲೋಚಿಸುತಿಹರು ನಿನ್ನ ಶರಣರಿಗೆ ವಿರುದ್ಧ //
4 : ಇಂತೆನ್ನುತಿಹರು: “ಬನ್ನಿ ಸಂಹರಿಸೋಣ / ಆತನ ಜನಾಂಗ ಉಳಿಯದಂತೆ ಮಾಡೋಣ / ಇಸ್ರಯೇಲೆಂಬ ನಾಮವನಳಿಸಿಬಿಡೋಣ”//
5 : ಎದೋಮ್ಯರ ಪಾಳೆಯದವರು, ಇಷ್ಮಾಯೇಲ್ಯರು, / ಗೇಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು, //
6 : ಮೊವಾಬ್ಯ, ಹಗ್ರೀಯ, ಫಿಲಿಷ್ಟಿಯ, ಟೈರ್ ಜನರು / ಒಮ್ಮತದಿಂದಿವರೆಲ್ಲರು ಒಟ್ಟುಗೂಡಿಹರು /
7 : ನಿನ್ನ ವಿರುದ್ಧವಾಗಿ ಒಳಸಂಚು ಮಾಡಿಹರು //
8 : ಇವರೊಡನೆ ಕೂಡಿಕೊಂಡಿಹ ಅಸ್ಸೀರ್ಯರು / ಲೋಟನ ವಂಶಕ್ಕೆ ಭುಜಬಲವಾಗಿಹರು //
9 : ಮಾಡವರಿಗೆ ಪ್ರಭೂ, ನೀ ಮಿದ್ಯಾನ್ಯರಿಗೆ ಮಾಡಿದಂತೆ / ಕಿಷೋನ್ ನದಿಯಬಳಿ ಸೀಸೆರ್‍ಯಾಬೀನರಿಗೆ ಮಾಡಿದಂತೆ //
10 : ಎಂದೋರಿನಲ್ಲವರು ಕೊಲೆಯಾದರು / ಹೊಲಗದ್ದೆಗಳಿಗೆ ಗೊಬ್ಬರವಾದರು //
11 : ಒರೆಬ್, ಜೇಬ್ ಎಂಬವರ ಗತಿಯೊದಗಲಿ ಇವರ ಸಿರಿವಂತರಿಗೆ / ಜೇಬಹ, ಚೆಲ್ಮುನ್ನರ ಪಾಡು ಬರಲಿರುವ ಸಕಲ ರಾಜರಿಗೆ /
12 : “ಬನ್ನಿ, ದೇವರ ನಾಡುಬೀಡನು ಆಕ್ರಮಿಸೋಣ” ಎಂದವರಿಗೆ //
13 : ಮಾಡಿವರನು ದೇವಾ, ಗಾಳಿಗೆ ತೂರುವ ಹೊಟ್ಟಿನಂತೆ / ಸುಂಟರಗಾಳಿಯಲಿ ಮೇಲೇಳುವ ದೂಳೀಪಟದಂತೆ //
14 : ಕಾಡುಮೇಡನು ಸುಡುವಾ ಬೆಂಕಿಯಂತೆ / ಪರ್ವತವನೆ ಉರಿಸುವ ಜ್ವಾಲೆಯಂತೆ //
15 : ಓಡಿಸೋಡಿಸವರನು ನೀ ಬೀಸುವ ಬಿರುಗಾಳಿಗೆ / ಗುರಿಪಡಿಸವರನು ನಿನ್ನಾ ಚಂಡಮಾರುತಕೆ //
16 : ಕವಿಯಲಿ ಅವಮಾನ ನಿಂದೆ ಇವರ ಮುಖವನು / ಅರಸುವರಾಗ ಪ್ರಭೂ, ನಿನ್ನ ಸಿರಿನಾಮವನು //
17 : ಕಳವಳಗೊಳ್ಳಲಿ ಅವರು ಸತತವು ಲಜ್ಜೆಯಿಂದ / ಅವರಳಿದುಹೋಗಲಿ ಅವಮಾನ ನಿಂದೆಗಳಿಂದ //
18 : ಇವರು ಅರಿಯಲಿ ಪ್ರಭುವೆಂಬ ನಾಮ ನಿನ್ನದೆಂದು ಧರೆಯಲ್ಲೆಲ್ಲಾ ಸರ್ವೋನ್ನತ ನೀನೇ ಎಂದು //

Holydivine