Psalms - Chapter 75
Holy Bible

1 : ವಂದನೆ ಹೇ ದೇವಾ, ಕೃತಜ್ಞತಾ ವಂದನೆ / ನೀ ಸಾಧಿಸಿದ ಸತ್ಕಾರ್ಯಗಳ ವಿವರಣೆ / ತಂದಿದೆ ನಮಗೆ ನಿನ್ನ ನಾಮದ ಸ್ಮರಣೆ //
2 : ಈ ಪರಿ ನುಡಿದಿರುವನಾ ದೇವನು : / “ಕ್ಲುಪ್ತಕಾಲದಲಿ ನಾ ನೀಡುವೆನು / ತೀರ್ಪನು, ನ್ಯಾಯವಾದ ತೀರ್ಪನು //
3 : ಇಳೆಯು ಭೂನಿವಾಸಿಗಳ ಸಮೇತ ತಳಮಳಗೊಳ್ಳಲು / ಅದರ ತಳಹದಿಯ ಬಿಗಿಹಿಡಿದಿರುವವನು ನಾನಿಲ್ಲದಿನ್ನಾರು? //
4 : ಗರ್ವಿಗಳೇ, ಸಾಕುಮಾಡಿ ನಿಮ್ಮ ಸೊಕ್ಕುಮಾತುಗಳನು / ದುರ್ಜನರೇ, ತೋರಬೇಡಿ ನಿಮ್ಮ ಕೋರೆಕೊಂಬುಗಳನು //
5 : ಕಾಣಿಸಿಕೊಳ್ಳದಿರಲಿ ನಿಮ್ಮ ಕೋರೆಕೊಂಬುಗಳು // ಮಾತೆತ್ತದಿರಲಿ ನಿಮ್ಮಗಳ ಕೊಬ್ಬಿದಾ ಕಂಠಗಳು” //
6 : ಪೂರ್ವ ಪಶ್ಚಿಮದಿಂದ ಬರುವುದಿಲ್ಲ ಉದ್ಧಾರ / ಅರಣ್ಯದಿಂದ ದೊರಕುವುದಿಲ್ಲ ಜೀವೋದ್ಧಾರ //
7 : ನ್ಯಾಯತೀರ್ಪು ಬರುವುದು ದೇವನಿಂದಲೇ / ಉನ್ನತಿಯು ಅವನತಿಯು ಆತನಿಂದಲೇ //
8 : ಪ್ರಭುವಿನ ಕರಗಳಲ್ಲಿದೆ ಕೋಪಕೊಡ ಒಂದು / ತುಂಬಿದೆ ಅಮಲುಮಿಶ್ರ ರೌದ್ರರಸದಿಂದದು // ಅದನವನು ಸುರಿಯಲು ಕುಡಿವರು ಜಗದ ದುರುಳರು / ಮಡ್ಡಿಯನು ಕೂಡ ಬಿಡದೆ ಕುಡಿವರೆಲ್ಲರು //
9 : ನಾನಾದರೊ ಕೀರ್ತಿಸುವೆನು ಯಕೋಬ ದೇವರನು / ಮಾಡುವೆನು ಅನವರತ ಆತನ ಗುಣಗಾನವನು //
10 : ಕತ್ತರಿಸುವನು ಕೆಡುಕರ ಕೋರೆಕೋಡು ಗಳನು / ಎತ್ತರಿಸುವನು ಸಜ್ಜನರ ಕೋರೆಕೊಂಬುಗಳನು //

Holydivine