Psalms - Chapter 139
Holy Bible

1 : ಪ್ರಭು, ಪರಿಶೋಧಿಸಿರುವೆ ನೀ ನನ್ನನು / ಅರಿತುಕೊಂಡಿರುವೆ ಅಂತರಂಗವನು
2 : ನಾ ಕೂರುವುದೂ ಏಳುವುದೂ ನಿನಗೆ ಗೊತ್ತಿದೆ / ನನ್ನಾಲೋಚನೆ ದೂರದಿಂದಲೇ ನಿನಗೆ ತಿಳಿದಿದೆ
3 : ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ / ನನ್ನ ನಡತೆಯೆಲ್ಲವು ನಿನಗೆ ಸುಪರಿಚಿತ
4 : ಪ್ರಭು, ನಾ ಮಾತೆತ್ತುವುದಕ್ಕೆ ಮುಂಚಿತವಾಗಿ / ತಿಳಿದುಹೋಗಿದೆ ಎಲ್ಲ ನಿನಗೆ ಪೂರ್ತಿಯಾಗಿ
5 : ನನ್ನ ಹಿಂದೆಯೂ ಮುಂದೆಯೂ ನೀನಿರುವೆ / ಅಭಯ ಹಸ್ತವನು ನನ್ನ ಮೇಲಿರಿಸಿರುವೆ
6 : ನನ್ನ ಕುರಿತು ನಿನಗಿರುವ ಅರಿವು ಅಗಾಧ / ನನ್ನ ಬುದ್ಧಿಗದು ಸಿಲುಕದಷ್ಟು ಉನ್ನತ
7 : ನಾನೆಲ್ಲಿಗೆ ಹೋಗಲು ಸಾಧ್ಯ, ನಿನ್ನಾತ್ಮನಿಂದ ತಪ್ಪಿಸಿಕೊಳ್ಳಲು? / ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ ಮರೆಯಾಗಲು?
8 : ಆಕಾಶಕೆ ನಾನೇರಿದರೂ ನೀನಿರುವೆ ಅಲ್ಲಿ / ಪಾತಾಳದಲಿ ನಾ ನಿದ್ರಿಸಿದರೂ ನೀನಿರುವೆ ಅಲ್ಲಿ
9 : ನಾನರುಣನ ರೆಕ್ಕೆಗಳನೇರಿ ಹಾರಿದರೂ / ಸಮುದ್ರ ಕಟ್ಟಕಡೆಗಳಲಿ ನಾ ಸೇರಿದರೂ
10 : ಅಲ್ಲೂ ನನ್ನ ನಡೆಸುವುದು ನಿನ್ನ ಕೈ / ನನ್ನ ಹಿಡಿದಿರುವುದು ನಿನ್ನ ಬಲಗೈ
11 : “ಕಾರ್ಗತ್ತಲೆನ್ನ ಕವಿಯಲಿ” ಎಂದರೂ / “ಸುತ್ತಲ ಬೆಳಕು ಇರುಳಾಗಲಿ” ಎಂದರೂ
12 : ಕತ್ತಲು ಕತ್ತಲಲ್ಲ ನಿನಗೆ / ಇರುಳೂ ಹಗಲಾಗಿದೆ ನಿನಗೆ / ಕತ್ತಲು, ಬೆಳಕು - ಒಂದೇ ನಿನಗೆ
13 : ನನ್ನ ಅಂತರಂಗವನು ಉಂಟುಮಾಡಿದಾತ ನೀನು / ತಾಯಗರ್ಭದಲೆ ನನ್ನ ರೂಪಿಸಿದಾತ ನೀನು
14 : ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ / ನಿನ್ನ ಕೃತ್ಯಗಳು ಅದ್ಭುತಕರ ಹಾಗೂ ವಿಚಿತ್ರ / ನನ್ನ ಬಗ್ಗೆ ನಿನಗಿರುವ ಪೂರ್ಣ ಅರಿವು ಸಮರ್ಥ
15 : ನನ್ನ ಅಸ್ಥಿಪಂಜರವನು ರೂಪಿಸುವಾಗ / ತಾಯಗರ್ಭದೊಳು ಅಚ್ಚರದಿ ರಚಿಸುವಾಗ / ಗುಟ್ಟಾಗಿ ನಾನಲ್ಲಿ ಬೆಳೆಯುತ್ತಿದ್ದಾಗ / ಮರೆಯಾಗಿರಲಿಲ್ಲ ನಾನು ನಿನಗಾಗ
16 : ನಾನಿನ್ನೂ ಭ್ರೂಣವಾಗಿದ್ದಾಗ ನೋಡಿದವು ನಿನ್ನ ಕಣ್ಣುಗಳು / ಪ್ರಾರಂಭವಾಗುವುದಕ್ಕೆ ಮುನ್ನ ನನ್ನ ಆಯುಷ್ಕಾಲದ ದಿನಗಳು / ಲಿಖಿತವಾದವು ಅವುಗಳಲೊಂದೂ ತಪ್ಪದೆ ನಿನ್ನ ಪುಸ್ತಕದೊಳು
17 : ದೇವಾ, ನಿನ್ನ ಯೋಚನೆಗಳೆಷ್ಟು ಅಮೂಲ್ಯ / ಅವುಗಳೆಷ್ಟು ಅಸಂಖ್ಯ, ನನಗದೆಷ್ಟು ಅಗಣ್ಯ
18 : ಎಣಿಕೆಗೆ ಅವುಗಳ ಸಂಖ್ಯೆ ಸಮುದ್ರತೀರದ ಮರಳಿನಂತೆ / ಎಚ್ಚತ್ತು ಎಣಿಸಲೆತ್ನಿಸೆ ನಿನ್ನ ಮುಂದಿರುವೆ ಮುಂಚಿನಂತೆ
19 : ದೇವಾ, ದುಷ್ಟರನು ಸಂಹರಿಸಿಬಿಟ್ಟರೆ ಎಷ್ಟೋ ಉಚಿತ / ಕೊಲೆಪಾತಕರು ನನ್ನಿಂದ ತೊಲಗಿಹೋದರೆ ಎಷ್ಟೋ ಹಿತ
20 : ಅವರಾಡುವ ಮಾತುಗಳು ನಿನಗೆ ವಿರೋಧ / ಹಗೆಗಳನು ಎತ್ತಿಕ್ಕುವರು ನಿನಗೆ ವಿರುದ್ಧ
21 : ಪ್ರಭು, ನಿನ್ನ ದ್ವೇಷಿಗಳನು ನಾ ದ್ವೇಷಿಸದಿರುವೆನೆ?/ ನಿನ್ನ ವಿರೋಧಿಗಳನ್ನು ನಾ ತಿರಸ್ಕಾರ ಮಾಡದಿರುವೆನೆ?
22 : ಹಗೆಮಾಡುವೆನವರನು ಸಂಪೂರ್ಣವಾಗಿ / ಭಾವಿಸುವೆನವರನು ನನ್ನ ವೈರಿಗಳನ್ನಾಗಿ
23 : ತಿಳಿದುಕೋ ದೇವಾ, ನನ್ನ ಹೃದಯವನು ಪರೀಕ್ಷಿಸಿ / ಅರಿತುಕೋ ನನ್ನ ಆಲೋಚನೆಗಳನು ಪರಿಶೋಧಿಸಿ
24 : ಕೇಡಿದೆಯೇ ನೋಡು ನನ್ನ ಮಾರ್ಗದಲಿ ನಡೆಸೆನ್ನನು ಆ ಸನಾತನ ಪಥದಲಿ //

Holydivine