Psalms - Chapter 147
Holy Bible

1 : ನಮ್ಮ ದೇವರನು ಹೊಗಳಿ ಹಾಡುವುದು ಉಚಿತ / ಆತನ ಸ್ತುತಿ ಮನೋಹರ, ಅದು ಬಲುಸೂಕ್ತ
2 : ನಿರ್ಮಿಸುತಿಹನು ಪ್ರಭು ಮರಳಿ ಜೆರುಸಲೇಮನು / ಒಂದು ಸೇರಿಸುತಿಹನು ಚದರಿದ ಇಸ್ರಯೇಲರನು
3 : ವಾಸಿಮಾಡುವನು ಮುರಿದ ಮನಸ್ಸುಳ್ಳವರನು / ಕಟ್ಟಿ ಗುಣಪಡಿಸುವನು ಅವರ ಗಾಯಗಳನು
4 : ನಿಯಮಿಸಿಹನು ತಾರೆಗಳ ಸಂಖ್ಯೆಯನು / ಇಟ್ಟಿಹನು ಪ್ರತಿಯೊಂದಕೂ ಹೆಸರನು
5 : ನಮ್ಮ ಪ್ರಭು ಘನವಂತ, ಪರಾಕ್ರಮಿ / ಅಪರಿಮಿತವಾದುದು ಆತನ ಜ್ಞಾನನಿಧಿ
6 : ಆಧಾರವಾಗಿಹನು ಪ್ರಭು ದೀನರಿಗೆ / ತುಳಿದುಬಿಡುವನು ದುರ್ಜನರನು ನೆಲಕೆ
7 : ಧನ್ಯವಾದವಿತ್ತು ಹಾಡಿರಿ ಪ್ರಭುವನು / ಕಿನ್ನರಿಯೊಡನೆ ಭಜಿಸಿರಿ ನಮ್ಮ ದೇವನನು
8 : ಕವಿಸುವನಾತ ಮೋಡಗಳನು ಗಗನದಲಿ / ಸುರಿಸುವನು ಮಳೆಯನು ಬುವಿಯಲಿ / ಬೆಳೆಸುವನು ಹುಲ್ಲನು ಬೆಟ್ಟಗಳಲಿ
9 : ಪಶುಗಳಿಗೂ ಕೂಗುವ ಕಾಗೆಮರಿಗಳಿಗೂ / ಒದಗಿಸುವನು ಬೇಕಾದ ಆಹಾರಗಳನು
10 : ಅಶ್ವಬಲದಲಿ ಆತನಿಗೆ ಇಷ್ಟವಿಲ್ಲ / ಶೂರನ ಶಕ್ತಿಯನವನು ಮೆಚ್ಚುವುದಿಲ್ಲ
11 : ಮೆಚ್ಚುವನಾತ ತನ್ನಲಿ ಭಯಭಕ್ತಿಯುಳ್ಳವರನು / ತನ್ನಚಲ ಪ್ರೀತಿಯಲಿ ಭರವಸೆಯುಳ್ಳವರನು
12 : ಜೆರುಸಲೇಮೇ, ಕೀರ್ತಿಸು ಪ್ರಭುವನು / ಸಿಯೋನೇ, ಸ್ತುತಿಸು ನಿನ್ನ ದೇವರನು
13 : ಬಲಪಡಿಸಿಹನಾತ ನಿನ್ನ ಹೆಬ್ಬಾಗಿಲ ಅಗುಳಿಗಳನು ಆಶೀರ್ವದಿಸಿಹನು ನಿನ್ನಲ್ಲಿರುವ ಮಕ್ಕಳನು
14 : ನಿನ್ನ ಪ್ರಾಂತದೊಳಗೆಲ್ಲಾ ಇರುವುದು ನೆಮ್ಮದಿ / ನೀಡುವನು ನಿನಗೆ ಅತ್ಯುತ್ತಮ ಗೋದಿ
15 : ಕಳಿಸುವನು ಧರೆಗೆ ತನ್ನ ಆಣತಿ / ಸಿದ್ಧಿಯಾಗುವುದದು ಬಲು ಶೀಘ್ರದಿ
16 : ಸುರಿಸುವನು ಹಿಮವನು ಉಣ್ಣೆಯಂತೆ / ಹರಡುವನು ಇಬ್ಬನಿಯನು ಬೂದಿಯಂತೆ
17 : ಸುರಿಸುವನು ಆಲಿಕಲ್ಲನು ರೊಟ್ಟಿ ತುಂಡುಗಳಂತೆ / ಕೊರೆಯುವ ಚಳಿಯನು ಕಳಿಸುವನು ಸಹಿಸಲಾಗದಂತೆ
18 : ಕರಗುವುವು ಆ ಕಲ್ಲುಗಳು ಆತನ ಅಪ್ಪಣೆಗೆ / ಹರಿಯುವುದು ನೀರು ಆತ ಕಳುಹಿಸುವ ಗಾಳಿಗೆ
19 : ತಿಳಿಸಿಹನು ತನ್ನ ವಾಕ್ಯವನು ಯಕೋಬ್ಯರಿಗೆ / ತನ್ನ ವಿಧಿನಿಯಮಗಳನು ಇಸ್ರಯೇಲರಿಗೆ
20 : ಬೇರಾವ ಜನಾಂಗಕ್ಕೂ ಆತ ಹೀಗೆ ಮಾಡಿಲ್ಲ / ಆತನ ವಿಧಿನಿಯಮಗಳನು ಅವರಿಗೆ ತಿಳಿಸಿಲ್ಲ / ಅಲ್ಲೆಲೂಯ!

Holydivine