Psalms - Chapter 73
Holy Bible

1 : ದೇವನು ಎನಿತೋ ಒಳ್ಳೆಯವನು ಇಸ್ರಯೇಲಿಗೆ / ದಯಾಪರನಾತನು ಶುದ್ಧ ಹೃದಯಿಗಳಿಗೆ //
2 : ದುರ್ಜನರು ಧನಿಕರಾಗುವುದ ಕಂಡಾಗ / ಗರ್ವಿಗಳ ನೋಡಿ ನಾನಸೂಯೆಗೊಂಡಾಗ /
3 : ತಡವರಿಸಿದವು ನನ್ನ ಕಾಲುಗಳು / ಜಾರಿ ಬೀಳಲಿದ್ದವು ಹೆಜ್ಜೆಗಳು //
4 : ಆ ಜನರಿಗೆ ನೋವುಕಾವೆಂಬುದಿಲ್ಲ / ಅವರ ದೇಹ ಸಬಲವಾಗಿದೆಯಲ್ಲ! //
5 : ಇತರರಂತೆ ಅವರಿಗೆ ಸಂಕಟವಿಲ್ಲವಲ್ಲಾ ! / ರೋಗರುಜೆ ಅವರಿಗಂಟುವುದಿಲ್ಲವಲ್ಲಾ ! //
6 : ಈ ಕಾರಣ ಗರ್ವವೇ ಅವರಿಗೆ ಕಂಠಮಾಲೆ / ಹಿಂಸಾಚಾರವೇ ಅವರಿಗೆ ಬಟ್ಟೆಬರೆ //
7 : ದೋಷ ಹೊರಸೂಸುತ್ತಿದೆ ಕೊಬ್ಬಿನಾ ಕಣ್ಗಳಿಂದ / ದುಷ್ಕಲ್ಪನೆಗಳು ತುಳುಕುತಿವೆ ಹೃನ್ಮನಗಳಿಂದ //
8 : ಕೇಡು ಮಾತು, ಕೆಣಕುಮಾತು ಅವರದು / ಜೊತೆಗೆ ಬಲಾತ್ಕಾರದ ಸೊಕ್ಕುಮಾತು //
9 : ನಾಕವನೆ ತಾಕುತಿದೆ ಅವರ ಗರ್ವದ ನುಡಿ / ಜಗದಲಿ ಹರಡುತಿದೆ ಅವರ ದರ್ಪದನುಡಿ //
10 : ಎಂತಲೆ ಜನರವರ ಕಡೆ ತಿರುಗಿಕೊಳ್ಳುವರು / ನೀರಂತೆ ಅವರ ಮಾತನು ಹೀರಿಕೊಳ್ಳುವರು //
11 : “ಆ ದೇವನೆಂತು ಕಂಡುಹಿಡಿದಾನು?” ಎಂಬರು / “ಪರಾತ್ಪರನು ಪರಿಜ್ಞನೆ?” ಎಂದುಕೊಳ್ವರು //
12 : ದುರ್ಜನರಿದೊ ನಿಶ್ಚಿಂತರಾಗಿಹರು / ಸಿರಿಮೇಲೆ ಸಿರಿಯ ಶೇಖರಿಸುತಿಹರು //
13 : ನಾ ನಿರ್ಮಲಚಿತ್ತನಾಗಿ ಬಾಳಿದ್ದು ವ್ಯರ್ಥವೋ? | ಶುದ್ಧಹಸ್ತನಾಗಿ ನಡೆದುಕೊಂಡುದು ನಿರರ್ಥಕವೋ? ||
14 : ನಾ ನಿರ್ಮಲಚಿತ್ತನಾಗಿ ಬಾಳಿದ್ದು ವ್ಯರ್ಥವೋ? | ಶುದ್ಧಹಸ್ತನಾಗಿ ನಡೆದುಕೊಂಡುದು ನಿರರ್ಥಕವೋ? ||
15 : ನಾ ಬಾಯ್ದೆರೆದು ನುಡಿದಿದ್ದೆನಾದರೆ ಈ ಪರಿ / ನಿನ್ನ ಭಕ್ತಕುಲಕೆ ನಾ ದ್ರೋಹಿಯೇ ಸರಿ //
16 : ಇದರ ಮರ್ಮವನು ನಾ ಬಗೆಹರಿಸಲು ಯತ್ನಿಸೆ / ತೋಚಿತೆನಗಿದು ಬಿಡಿಸಲಾಗದಂಥ ಸಮಸ್ಯೆ //
17 : ಆದರೆ ದೇವಾಲಯವನು ಹೊಕ್ಕು ನಿಂತಾಗ / ಆ ಜನರ ಅಂತಿಮ ಗತಿಯನಾಲೋಚಿಸಿದಾಗ / ಋಜುವಾದ ಜ್ಞಾನೋದಯ ಆಯಿತೆನಗಾಗ //
18 : ಜಾರು ನೆಲದಲಿ ಆ ಜನರನು ನೀ ನಿಲ್ಲಿಸಿರುವೆ / ನಿಶ್ಚಯನಾಗಿ ನೀ ಬೀಳಿಸಿ ಅವರನು ನಾಶಮಾಡುವೆ //
19 : ಕ್ಷಣಮಾತ್ರದಲಿ ಅಳಿದು ಹಾಳಾಗುವರು / ಭೀಕರವಾಗಿ ನಿರ್ಮೂಲವಾಗುವರು //
20 : ನಿದ್ರೆಯಿಂದೆದ್ದವನು ಕನಸನ್ನು ತೃಣೀಕರಿಸುವಂತೆ / ಪ್ರಭು ನೀನೆದ್ದು ಕಡೆಗಣಿಸುವೆ ಅವರನು ಮಾಯೆಯಂತೆ //
21 : ಹೃದಯ ನೊಂದು ಬೆಂದಿರಲು / ಮನದಲಿ ಅಲಗು ನಾಟಿರಲು //
22 : ನಾ ಮಂದಮತಿಯಾಗಿದ್ದೆ ಅರಿವಿಲ್ಲದೆ / ನಾ ವನ್ಯಮೃಗನಂತಿದ್ದೆ ನಿನ್ನ ಮುಂದೆ /
23 : ಆದರೂ ನಾನಿರುವೆ ನಿನ್ನ ಸನ್ನಿಧಿಯಲಿ / ನೀ ಹಿಡಿದಿರುವೆ ನನ್ನ ಬಲಗೈಯನು ಭದ್ರವಾಗಿ //
24 : ಸೂಕ್ತ ಸಲಹೆಯನಿತ್ತು ಮುಂದಕೆನ್ನ ನಡೆಸು / ಅಂತ್ಯದಲಿ ನಿನ್ನ ಮಹಿಮೆಗೆನ್ನ ಸೇರ್ಪಡಿಸು //
25 : ನನಗೆ ನೀನಲ್ಲದೆ ಇನ್ನಾರಿಹರು ಪರದಲಿ / ನಿನ್ನ ಹೊರತು ನನಗೇನು ಬೇಕಿಲ್ಲ ಇಹದಲಿ //
26 : ನನ್ನ ತನುಮನಗಳೆಲ್ಲವೂ ಸೊರಗಿಹೋದರೂ / ನನ್ನಾತ್ಮದ ಶಕ್ತಿ, ಶಾಶ್ವತ ಸೊತ್ತು ದೇವರು //
27 : ವಿನಾಶವಾಗುವರು ನಿನ್ನಿಂದ ದೂರ ಸರಿವವರು / ಧ್ವಂಸವಾಗುವರು ನಿನಗೆ ದ್ರೋಹವೆಸಗಿದವರು //
28 : ನಿನ್ನ ಸಾನ್ನಿಧ್ಯ ಸ್ವಾಮಿದೇವಾ, ನನಗೆಂಥ ಸೌಭಾಗ್ಯ / ನಿನ್ನ ಸತ್ಕಾರ್ಯಗಳ ಸಾರಲೆಂದೆ ನಿನ್ನನಾಶ್ರಯಿಸಿಕೊಂಡೆನಯ್ಯಾ //

Holydivine