Psalms - Chapter 115
Holy Bible

1 : ನಮಗಲ್ಲ ಹೇ ಪ್ರಭು. ನಮಗಲ್ಲ ಮಹಿಮೆ / ನಿನ್ನ ನಾಮಕೇ ಸಲ್ಲಲಿ ಆ ಮಹಿಮೆ / ನಿನ್ನ ನೀತಿ ಸತ್ಯತೆಗಳ ನಿಮಿತ್ತವೆ //
2 : ಅನ್ಯ ಜನರು ನುಡಿಯುವುದೆಂತು: / “ಅವರ ದೇವರೆಲ್ಲಿ?” ಎಂದು //
3 : ಪರದಲ್ಲಿಹನು ನಮ್ಮ ದೇವನು / ಗೈವನು ತನಗಿಷ್ಟ ಬಂದುದನು //
4 : ಅವರ ವಿಗ್ರಹ ಬರೀ ಬೆಳ್ಳಿ ಬಂಗಾರ / ಅವು ಮಾನವನ ಕೈ ಕೆಲಸಗಳು ಮಾತ್ರ //
5 : ಬಾಯಿದ್ದರೂ ಅವು ಮಾತಾಡುವುದಿಲ್ಲ / ಕಣ್ಣುಗಳಿದ್ದರೂ ಅವು ಕಾಣುವುದಿಲ್ಲ //
6 : ಕಿವಿಯಿದ್ದರೂ ಅವು ಕೇಳುವುದಿಲ್ಲ / ಮೂಗಿದ್ದರೂ ಅವು ಮೂಸುವುದಿಲ್ಲ / ಗಂಟಲೊಳು ಅವಕೆ ಶಬ್ದವೇ ಇಲ್ಲ //
7 : ಕೈಯಿದ್ದರೂ ಅವು ಮುಟ್ಟುವುದಿಲ್ಲ / ಕಾಲಿದ್ದರೂ ಅವು ನಡೆಯುವುದಿಲ್ಲ //
8 : ಅವುಗಳಂತಾಗುವರು ಅವುಗಳನು ಮಾಡುವವರು / ಅವುಗಳಂತಾಗುವರು ಅವುಗಳನು ನಂಬುವವರು //
9 : ಪ್ರಭುವಿನಲ್ಲಿದೆ ಭರವಸೆ ಇಸ್ರಯೇಲ್ ಜನರಿಗೆ / ಆತನೇ ಸಹಾಯಕ, ರಕ್ಷಾಕವಚ ಅವರಿಗೆ //
10 : ಪ್ರಭುವಿನಲ್ಲಿದೆ ಭರವಸೆ ಆರೋನನ ಕುಲಕೆ / ಆತನೇ ಸಹಾಯಕ, ರಕ್ಷಾಕವಚ ಅವರಿಗೆ //
11 : ಪ್ರಭುವಿನಲ್ಲಿದೆ ಭರವಸೆ ಆತನ ಭಕ್ತ ಜನರಿಗೆ / ಆತನೇ ಸಹಾಯಕ, ರಕ್ಷಾಕವಚ ಅವರಿಗೆ //
12 : ಆಶೀರ್ವದಿಸುವನು ಪ್ರಭು ಮರೆಯದೆ ನಮ್ಮನು / ಇಸ್ರಯೇಲ್ ವಂಶವನು, ಆರೋನನ ಕುಲವನು //
13 : ಆಶೀರ್ವದಿಸುವನು ಪ್ರಭು ತನ್ನಲಿ ಭಯಭಕ್ತಿಯುಳ್ಳವರನು / ಚಿಕ್ಕವರು ದೊಡ್ಡವರೆನ್ನದೆ ಭಯಭಕ್ತಿಯುಳ್ಳವರನು //
14 : ವೃದ್ಧಿಗೊಳಿಸಲಿ ಪ್ರಭುವು ನಿಮ್ಮನು / ವೃದ್ಧಿಗೊಳಿಸಲಿ ನಿಮ್ಮ ಮಕ್ಕಳನು //
15 : ಇಹಪರಗಳನು ಉಂಟುಮಾಡಿದ ಪ್ರಭುವಿಂದ / ಲಭಿಸುವಂತಾಗಲಿ ನಿಮಗೆ ಆಶೀರ್ವಾದ //
16 : ಪ್ರಭುವಿಗೆ ಸ್ವಂತವಾದುದು ಪರಲೋಕ / ನರರಿಗೆ ಕೊಟ್ಟಿಹನಾತನು ಭೂಲೋಕ //
17 : ಸ್ತುತಿಸುವುದಿಲ್ಲ ಸತ್ತವರಾರೂ ಪ್ರಭುವನು / ಕೀರ್ತಿಸರು ಪಾತಾಳಕ್ಕಿಳಿವವರು ಆತನನು //
18 : ನಾವಾದರೋ ಪ್ರಭುವನು ಹೊಗಳಿ ಹಾಡುವೆವು / ಇಂದಿಗೂ ಎಂದೆಂದಿಗೂ ಹೊಗಳಿ ಹಾಡುವೆವು // ಅಲ್ಲೆಲೂಯ.

Holydivine