Psalms - Chapter 10
Holy Bible

1 : ನನ್ನಿಂದೇಕೆ ಪ್ರಭು, ಅಷ್ಟು ದೂರವಿರುವೆ? / ಕಷ್ಟಕಾಲದಲೇಕೆ ಕಣ್ಮರೆಯಾಗಿರುವೆ? //
2 : ಸೊಕ್ಕಿನಿಂದ ಶೋಷಿಸುತಿಹರು ದಲಿತರನು ದುರುಳರು / ಸಿಕ್ಕಿಬೀಳಲಿ ತಾವೇ ಒಡ್ಡಿದ ಉರಿಲಿನೊಳವರು /
3 : ಕೇಡಿಗನು ತನ್ನ ಮನದಾಸೆಗಾಗಿ ಹೆಮ್ಮೆಪಡುತಿಹನು / ಲಾಭಬಡುಕನು ಪ್ರಭುವನು ಶಪಿಸಿ ತಿರಸ್ಕರಿಸುತಿಹನು //
4 : ಸೊಕ್ಕೇರಿದ ಮುಖದಾತನು ಪ್ರಭುವನು ಅರಸುವುದಿಲ್ಲ / ಅವನ ಮನದೊಳಿದೊಂದೇ ಭಾವನೆ: “ದೇವರೇ ಇಲ್ಲ”! //
5 : ಗೆಲುವೆ ಅವನ ವ್ಯವಹಾರವೆಲ್ಲದರ ಸಾರ / ನಿನ್ನ ನಿರ್ಣಯ ಅವನ ಗ್ರಹಿಕೆಗೆ ಅತಿ ದೂರ // ಶತ್ರುಗಳನು ಕಂಡರೆ ಅವನಿಗೆ ತಾತ್ಸಾರ //
6 : ನೆನೆವನು ಮನದೊಳು ದುರುಳನಿಂತು: / “ಯಾರಿಗೂ ನನ್ನ ಕದಲಿಸಲಾಗದು / ಬಾರದು ನನಗೆಂದಿಗು ಆಪತ್ತು”//
7 : ತುಂಬಿದೆ ಶಾಪಕೋಪ, ಕುತಂತ್ರ ಅವನ ಬಾಯಲಿ / ಅವಿತಿದೆ ಪಾಪ, ಅತಿವಿನಾಶ ನಾಲಗೆಯಡಿಯಲಿ //
8 : ಊರು ಸಂದುಗೊಂದುಗಳಲೆ ಅವಿತಿದ್ದು / ನಿರ್ಗತಿಕರಿಗಾಗಿ ಅಲ್ಲೆ ಕಾದಿದ್ದು / ಕೊಲೆಗೈವನು ಮರೆಯಲ್ಲೆ ಮೇಲೆಬಿದ್ದು //
9 : ಹೊಂಚುಹಾಕುವನವನು ಗುಹೆಯೊಳಗಿನ ಸಿಂಹದಂತೆ / ಕಾಯ್ದು ಹಿಡಿದೆಳೆವನು ದಲಿತರನು ಬಲೆಗೆ ಬೀಳ್ವಂತೆ //
10 : ಬಲಿಯಾಗಿಹನು ಬಲತ್ಕಾರಕೆ ಅಬಲನು / ಕುಸಿದು ಬಿದ್ದಿಹನು ಜಜ್ಜರಿತವಾಗವನು //
11 : ಮನದೊಳಿಂತೆಂದು ನೆನೆದನಾ ದುರುಳನು: / “ದೇವನಿದನು ಮರೆತು ವಿಮುಖನಾಗಿಹನು / ಇನ್ನೆಂದಿಗು ನೋಡನು ಇದೆಲ್ಲವನು” //
12 : ಎದ್ದೇಳು ಪ್ರಭು, ದಲಿತನನು ಮರೆಯದಿರಯ್ಯಾ / ಆತನನು ರಕ್ಷಿಸಲು ದೇವಾ, ಕೈಚಾಚಯ್ಯಾ //
13 : ದುರುಳನು ನಿನ್ನನಲಕ್ಷ್ಯ ಮಾಡುವುದೆಂತು? / “ದೇವನೆನ್ನ ವಿಚಾರಿಸನು” ಎನ್ನುವುದೆಂತು? //
14 : ಹೌದು ದೇವಾ, ನೀ ವಿಚಾರಿಪವನು; ದುಃಖದುಗುಡ ಲೆಕ್ಕಿಸುವವನು / ತಬ್ಬಲಿಗಳಿಗೆ ತಂದೆ ನೀನು, ನಿರ್ಗತಿಕ ನಿನಗೆ ಶರಣಾಗತನು //
15 : ಧೂರ್ತನ, ದುರುಳನ ಭುಜಬಲವನು ನೀ ಮುರಿದು ಬಿಡು / ಆತನ ನೀಚತನವನು ಪರೀಕ್ಷಿಸಿ ಶೂನ್ಯಮಾಡು //
16 : ಪ್ರಭುವಿನ ಶ್ರೀಸಾಮ್ರಾಜ್ಯವು ಅನವರತ / ಆತನ ನಾಡಲಿ ಮುಗಿಯಿತು ಅನ್ಯಜನರ ಉಳಿತ //
17 : ದೀನ ಕೋರಿಕೆಯನು ಪ್ರಭು, ತೀರಿಸುವೆ / ಹುರಿದುಂಬಿಸಿ, ಅವರ ಮೊರೆಗೆ ಕಿವಿಗೊಡುವೆ //
18 : ದಲಿತರಿಗೆ, ದಿಕ್ಕಿಲ್ಲದವರಿಗೆ ನ್ಯಾಯವನು ದೊರಕಿಸುವೆ / ಈ ಪರಿ ಇಳೆಮಾನವರ ತುಳಿತದಿಂದ ಪಾರುಮಾಡುವೆ //

Holydivine