Psalms - Chapter 26
Holy Bible

1 : ಸಾಚವಾದುದೆನ್ನ ನಡತೆ, ಅಚಲವಾದುದೆನ್ನ ನಂಬುಗೆ / ನೀಚ ನಾನಲ್ಲವೆಂದು ಪ್ರಭು, ನ್ಯಾಯ ತೀರಿಸೆನಗೆ //
2 : ಪರೀಕ್ಷಿಸು ಪ್ರಭು, ಎನ್ನನು ಪರಿಶೀಲಿಸು / ಹೃನ್ಮನಗಳೆಲ್ಲವನು ನೀ ಪರಿಶೋಧಿಸು //
3 : ಕೈಬಿಡದ ನಿನ್ನೊಲವು ನನ್ನ ಕಣ್ಮುಂದಿದೆ / ನೀ ತೋರಿದ ಸತ್ಯ ಪಥದಲಿ, ನಾ ನಡೆದೆ //
4 : ದುಷ್ಟರ ಕೂಟದಲಿ ನಾ ಕೂರುವವನಲ್ಲ / ಕಪಟಿಗಳ ಸಂಘವನು ನಾ ಸೇರುವವನಲ್ಲ //
5 : ದುರ್ಜನರ ಸಹವಾಸವದು ನನಗಸಹ್ಯ / ದುರುಳರೊಡನಾಟ ನನಗೆ ಬೇಡವಯ್ಯಾ //
6 : ನಿರ್ದೋಷಿ ನಾನೆಂದು ನೀರಿನಲ್ಲಿ ಕೈತೊಳೆವೆನಯ್ಯಾ / ಪ್ರಭು, ನಿನ್ನ ಬಲಿಪೀಠದ ಪ್ರದಕ್ಷಿಣೆ ಮಾಡುವೆನಯ್ಯಾ //
7 : ದನಿಯೆತ್ತಿ ನಿನಗೆ ಧನ್ಯಗೀತೆ ಹಾಡುವೆನಯ್ಯಾ / ನಿನ್ನದ್ಭುತ ಕಾರ್ಯಗಳೆಲ್ಲವನು ಘೋಷಿಸುವೆನಯ್ಯಾ //
8 : ಪ್ರಿಯವಾದುದೆನಗೆ ನಿನ್ನ ನಿವಾಸದ ಮಂದಿರ / ಸುಪ್ರೀತವಾದುದು ನಿನ್ನ ಮಹಿಮೆಯ ಆಗರ //
9 : ಪಾಪಿಗಳ ಸಮೇತ ಎನ್ನ ಪ್ರಾಣವನಳಿಸಬೇಡಯ್ಯಾ / ಕೊಲೆಪಾತಕರ ಸಮೇತ ಎನ್ನ ಜೀವ ತೆಗೆಯಬೇಡಯ್ಯಾ /
10 : ಇದೆ ಆ ಜನರ ಕೈಗಳಲಿ ಕೆಡುಕುತನ / ಬಲಗೈ ತುಂಬ ಲಂಚಕೋರತನ //
11 : ನೀತಿಯ ಪಥದೊಳು ನಾ ನಡೆವೆನಯ್ಯಾ / ಕರುಣೆ ತೋರುತ ಪ್ರಭು, ರಕ್ಷಿಸಯ್ಯಾ //
12 : ಸಮತಳದಲಿ ನಿಂತಿವೆ ನನ್ನ ಪಾದಗಳು / ಸ್ತುತಿಸುವೆ ನಾ ಪ್ರಭುವನು ಭಕ್ತರ ಸಭೆಯೊಳು //

Holydivine