Psalms - Chapter 32
Holy Bible

1 : ಯಾರ ಪಾಪ ಪರಿಹಾರವಾಗಿದೆಯೋ / ಯಾರ ದ್ರೋಹ ವಿಮೋಚನೆಯಾಗಿದೆಯೋ - ಅವರೇ ಧನ್ಯರು //
2 : ಯಾರಪರಾಧವನು ಪ್ರಭು ಎಣಿಸಿಲ್ಲವೋ / ಯಾರಂತರಂಗದಲಿ ಕುತಂತ್ರವಿಲ್ಲವೋ ಅವರೇ ಧನ್ಯರು //
3 : ಪಾಪ ನಿವೇದನೆ ಮಾಡದೆ ನಾ ಮೌನದಿಂದಿರಲು ದಿನವೆಲ್ಲ ನರಳಿ ಸವೆದು ಹೋದವು ನನ್ನೆಲುಬುಗಳು //
4 : ಪ್ರಭುವಿನ ಶಿಕ್ಷಾಹಸ್ತ ನನ್ನ ಮೇಲೆ ಭಾರವಾಗಿತ್ತು ಹಗಲಿರುಳು / ಬೇಸಿಗೆಯ ನೀರಿನಂತೆ ಬತ್ತಿ ಹೋಗಿತ್ತು ನನ್ನ ಶರೀರದ ತಿರುಳು //
5 : ಆಗ ನಾ ನಿವೇದಿಸಿದೆ ನಿನಗೆ ನನ್ನ ಪಾಪವನು / ಮರೆಮಾಡಲಿಲ್ಲ ನಿನ್ನಿಂದ ನನ್ನ ದ್ರೋಹವನು // “ಪ್ರಭು ಮುಂದೆ ನನ್ನ ತಪ್ಪುಗಳನ್ನೊಪ್ಪಿಕೊಳ್ವೆ” ಎಂದೆನು / ಆಗ ನೀ ಪರಿಹರಿಸಿದೆ ನನ್ನ ಪಾಪದೋಷವನು //
6 : ಎಂತಲೇ ಭಕ್ತರೆಲ್ಲರು ನಿನ್ನ ಪ್ರಾರ್ಥಿಸಲಿ ಸಕಾಲದಲಿ / ಹುಚ್ಚುಹೊಳೆ ಉಕ್ಕಿಬಂದಾಗ ನೀ ಸಿಕ್ಕಲಿಲ್ಲವೆನ್ನದಿರಲಿ //
7 : ನೀನೆ ನನಗೆ ಮರೆಯು, ಆಪತ್ತಿನಲಾಸರೆಯು / ನನ್ನನು ಆವರಿಸುವ ಉದ್ದಾರಕ ನಾದವು //
8 : ಪ್ರಭು ಇಂತೆಂದನು : “ಕಲಿಸುವೆನು, ನಾ ನಿನಗೆ ತಿಳಿಸುವೆನು ಸನ್ಮಾರ್ಗವನು / ಕಟಾಕ್ಷಿಸಿ ನಿನ್ನನು, ಈವೆನು ಸದಾಲೋಚನೆಯನು //
9 : ‘ಬುದ್ಧಿಹೀನರಾಗದಿರಿ ಕತ್ತೆ ಕುದುರೆಗಳಂತೆ / ಸ್ವಾಧೀನವಾಗವವು ಕಟ್ಟುಕಡಿವಾಣ ವಿಲ್ಲದೆ’//
10 : ‘ದುಷ್ಟರ ಕಷ್ಟನಷ್ಟಗಳು ಅನೇಕ / ಪ್ರಭುವನು ನಂಬಿದವರ ಸುತ್ತ ಮರುಕ’”//
11 : ಸಜ್ಜನರೇ ಸಂತೋಷಿಸಿರಿ, ಉಲ್ಲಾಸಿಸಿರಿ ಪ್ರಭುವಿನಲಿ / ಯಥಾರ್ಥಚಿತ್ತರೇ, ಜಯಕಾರಮಾಡಿ ಆತನ ವಿಷಯದಲಿ //

Holydivine