Psalms - Chapter 105
Holy Bible

1 : ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು / ಮಾಡಿರಿ ಆತನ ನಾಮಸ್ಮರಣೆಯನು / ಸಾರಿರಿ ಜಗಕೆ ಆತನ ಸತ್ಕಾರ್ಯಗಳನು //
2 : ಹಾಡಿ ಪಾಡಿ ಹೊಗಳಿರಿ ಪ್ರಭುವನು / ಧ್ಯಾನಿಸಿ ನೀವು ಆತನ ಪವಾಡಗಳನು //
3 : ಹೆಮ್ಮೆಪಡಿ, ನೆನೆದಾತನ ಶ್ರೀನಾಮ / ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ //
4 : ಅರಸಿರಿ ಪ್ರಭುವನೂ ಆತನ ಶಕ್ತಿಯನೂ / ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು //
5 : ಆತನ ದಾಸ ಅಬ್ರಹಾಮನ ಸಂತತಿಯವರೇ / ಆತನಾರಿಸಿಕೊಂಡ ಯಕೋಬನ ವಂಶದವರೇ /
6 : ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು / ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು //
7 : ಪ್ರಭು ನಮ್ಮ ದೇವನೆಂಬುದು ಶ್ರುತ / ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ //
8 : ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು / ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು //
9 : ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು / ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು //
10 : ಯಕೋಬನಿಗೆ ರಾಜಶಾಸನವಾಗಿ ಕೊಟ್ಟುದನು / ಇಸ್ರಯೇಲಿಗೆ ಶಾಶ್ವತವಾಗಿತ್ತ ಈ ಮಾತನು //
11 : “ನಾ ಕೊಡುವೆನು ಕಾನಾನ್ ನಾಡನು ನಿಮಗೆ / ಸ್ವಾಸ್ತ್ಯವಾಗುವುದು ಅದು ನಿಮ್ಮ ಸಂತತಿಗೆ”//
12 : ಅಲ್ಪಸಂಖ್ಯಾತರೂ ಆಗಂತುಕರೂ ಅವರಾಗಿರಲು |
13 : ನಾಡಿಂದ ನಾಡಿಗೆ ರಾಜ್ಯದಿಂದ ರಾಜ್ಯಕೆ ಅಲೆಯುತ್ತಿರಲು ||
14 : ಅವರಿಗಾರಿಂದಲೂ ಅನ್ಯಾಯವಾಗ ಗೊಡಿಸಲಿಲ್ಲ / ಅವರಿಗಾಗಿ ಅರಸರನೂ ಗದರಿಸದೆ ಬಿಡಲಿಲ್ಲ : //
15 : “ನಾನಭಿಷೇಕಿಸಿದವರನಿದೋ ಮುಟ್ಟಬೇಡಿ / ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿ” //
16 : ತದನಂತರ ಬರಮಾಡಿದನಾ ನಾಡಿನಲಿ ಕ್ಷಾಮವನು / ಮುರಿದುಬಿಟ್ಟನು ಆಹಾರವೆಂಬಾ ಊರುಗೋಲನು //
17 : ಕಳಿಸಿದ ಅವರಿಗೆ ಮುಂದಾಗಿ ಒಬ್ಬಾತನನು / ದಾಸತ್ವಕೆ ಮಾರಲಾದ ಆ ಜೋಸೆಫನನು //
18 : ಅವನ ಕಾಲು ನೊಂದವು ಸಂಕೋಲೆಗಳಿಂದ / ಕುತ್ತಿಗೆ ಕೊರೆಯಿತು ಕಬ್ಬಿಣದ ಕೋಳಗಳಿಂದ //
19 : ಕ್ರಮೇಣ ಕೈಗೂಡಿತು ಜೋಸೆಫನು ನುಡಿದದ್ದು / ಪ್ರಭುವಿನ ವಾಣಿ ಕಂಡು ಬಂದಿತು ಸತ್ಯವೆಂದು //
20 : ಬಿಡಿಸಲವನನು ಅರಸ ಕಳಿಸಿದ ಆಳನು / ಬಿಡುಗಡೆಮಾಡಿದ ಜನಾಧಿಪತಿ ಅವನನು //
21 : ನೇಮಿಸಿದವನನು ತನ್ನ ಮನೆಗೆ ಯಜಮಾನನ್ನಾಗಿ / ಮಾಡಿದ ತನ್ನಾಸ್ತಿಗೆಲ್ಲಾ ಅಧಿಕಾರಿಯನ್ನಾಗಿ //
22 : ಪದಾಧಿಕಾರಿಗಳಿಗೆ ಶಿಕ್ಷಕನನ್ನಾಗಿಸಿದ / ಮಂತ್ರಿಗಳಿಗೆಲ್ಲ ಉಪದೇಶಕನನ್ನಾಗಿಸಿದ //
23 : ಬಂದನು ಆಗ ಇಸ್ರಯೇಲನು ಈಜಿಪ್ಟಿಗೆ ಪ್ರವಾಸಿಯಾದ ಯಕೋಬನು ಹಾಮ ನಾಡಿಗೆ //
24 : ತನ್ನ ಜನರ ಸಂತಾನವನು ಪ್ರಭು ಅಭಿವೃದ್ಧಿಗೊಳಿಸಿದ / ಶತ್ರುಗಳಿಗಿಂತಲೂ ಅವರನು ಬಲಿಷ್ಠರನ್ನಾಗಿಸಿದ //
25 : ಮಾರ್ಪಡಿಸಿದ ಈಜಿಪ್ಟರನು ತನ್ನ ಜನರನು ದ್ವೇಷಿಸುವಂತೆ | ತನ್ನ ದಾಸರೊಡನವರು ಕುಯುಕ್ತಿಯಿಂದ ನಡೆದುಕೊಳ್ಳುವಂತೆ ||
26 : ಕಳಿಸಿದ ತನ್ನ ದಾಸ ಮೋಶೆಯನು | ತಾನು ಆರಿಸಿಕೊಂಡ ಆರೋನನನು ||
27 : ನೋಡಿದರಿವರು ಆತನ ಸೂಚಕ ಕಾರ್ಯಗಳನು | ಹಾಮ ನಾಡಿನಲಿ ನಾನಾ ಅದ್ಭುತ ಕಾರ್ಯಗಳನು ||
28 : ಕಾಳ ರಾತ್ರಿಯಾಯಿತು ಪ್ರಭು ಕಳಿಸಲು ಕತ್ತಲನು | ಈಜಿಪ್ಟರಾದರೊ ಇದಿರಿಸಿದರು ಆತನ ಮಾತನು ||
29 : ರಕ್ತವಾಗಿಸಿದನಾತ ಅವರ ನದಿಗಳನು | ಸಾಯಿಸಿದನು ಅವುಗಳಲಿದ್ದ ವಿೂನುಗಳನು ||
30 : ತುಂಬಿಕೊಂಡವು ಕಪ್ಪೆಗಳು ನಾಡಿನೊಳೆಲ್ಲ | ಹರಡಿಕೊಂಡವು ಅರಸನ ಕೊಠಡಿಗಳಲೆಲ್ಲ ||
31 : ಕಾಣಿಸಿಕೊಂಡವು ಆತನಾಜ್ಞಾಪಿಸಲು | ಹುಳುಹುಪ್ಪಟೆಗಳು ಪ್ರಾಂತ್ಯದೆಲ್ಲೆಡೆಯೊಳು ||
32 : ಮಳೆಗೆ ಬದಲು ಕಳಿಸಿದ ಕಲ್ಮಳೆಯನು | ನಾಡಿನೆಲ್ಲೆಡೆಯೊಳು ಸಿಡಿಲುಮಿಂಚನು ||
33 : ನಾಶಮಾಡಿದ ನಾಡಿನ ಎಲ್ಲಾ ಮರವೃಕ್ಷಗಳನು | ದ್ರಾಕ್ಷಾಲತೆಗಳನ್ನು ಮೇಣ್ ಅಂಜೂರ ಗಿಡಗಳನು ||
34 : ಆತ ನುಡಿದದ್ದೇ, ಬಂದವು ಮಿಡತೆಗಳು | ಅಗಣಿತವಾದ ಸಂಖ್ಯೆಯಲಿ ಚಿಟ್ಟೆಹುಳುಗಳು ||
35 : ತಿಂದುಬಿಟ್ಟವವು ನಾಡಿನ ಬೆಳೆಯನು | ಹೊಲಗದ್ದೆಗಳು ಇತ್ತ ಫಲವೆಲ್ಲವನು ||
36 : ಕೊಂದನು ನಾಡಿನ ಜ್ಯೇಷ್ಠರೆಲ್ಲರನು | ಗಂಡಸುತನದಾ ಪ್ರಥಮ ಫಲಗಳನು ||
37 : ಹೊರತಂದನು ಇಸ್ರಯೇಲರನು ಬೆಳ್ಳಿಬಂಗಾರ ಸಹಿತ | ಅವರಾ ಗೋತ್ರದೊಳಿರಲಿಲ್ಲ ಯಾರೊಬ್ಬನೂ ನಿಶ್ಯಕ್ತ ||
38 : ಭೀತಿಯಿತ್ತಾ ಈಜಿಪ್ಟರಿಗೆ ಇಸ್ರಯೇಲರ ಬಗ್ಗೆ | ಈ ಕಾರಣ ಆನಂದಿಸಿದರು ಅವರು ಹೋದುದಕ್ಕೆ ||
39 : ಹಗಲೊಳು ಮೋಡವಿತ್ತನವರಿಗೆ ನೆರಳಿಗೋಸ್ಕರ | ಇರುಳೊಳು ಬೆಂಕಿಯಿತ್ತನವರಿಗೆ ಬೆಳಕಿಗೋಸ್ಕರ ||
40 : ಕೂಳನು ಕೇಳಿದಾಗ ಬರಮಾಡಿದನು ಲಾವಕ್ಕಿಗಳನು | ತೃಪ್ತಿಪಡಿಸಿದನು ಆಗಸದ ಆಹಾರಗಳಿಂದವರನು ||
41 : ಬಂಡೆಯನಾತ ಸೀಳಲು ನೀರು ಹರಿದು ಬಂದಿತು | ನಿರ್ಜಲ ಪ್ರದೇಶದಲದು ನದಿಯಾಗಿ ಹರಿಯಿತು ||
42 : ಸ್ಮರಿಸಿಕೊಂಡನು ಪ್ರಭು ತನ್ನ ವಾಗ್ದಾನವನು | ತನ್ನ ದಾಸ ಅಬ್ರಹಾಮನಿಗೆ ಕೊಟ್ಟಾ ಮಾತನು ||
43 : ಹೊರತಂದನು ತನ್ನ ಪ್ರಜೆಯನು ಉಲ್ಲಾಸದಿಂದ | ತಾನಾರಿಸಿಕೊಂಡವರನು ಹರ್ಷೋದ್ಗಾರದಿಂದ ||
44 : ಕೊಟ್ಟನವರಿಗೆ ಅನ್ಯರಾಷ್ಟ್ರಗಳ ನಾಡುಬೀಡನು | ಅವರ ಕೈವಶಮಾಡಿದನು ಅನ್ಯರ ಕಷ್ಟಾರ್ಜಿತವನು ||
45 : ತನ್ನ ವಿಧಿಗಳಂತೆ ನಡೆಯಲೆಂದೇ | ತನ್ನ ಶಾಸ್ತ್ರವನು ಅನುಸರಿಸಲೆಂದೇ | ಈ ಪರಿ ಮಾಡಿದಾ ಸ್ವಾಮಿಗೆ ವಂದನೆ ||

Holydivine