Psalms - Chapter 141
Holy Bible

1 : ಬೇಗನೆ ಬಾ ಪ್ರಭು, ಮೊರೆಯಿಡುವೆ ನಿನಗೆ / ಮೊರೆಯಿಡುವಾಗಲೆಲ್ಲ ಕಿವಿಗೊಡು ನನಗೆ
2 : ಸಮರ್ಪಕವಾಗಲಿ ನನ್ನ ಪ್ರಾರ್ಥನೆ ಧೂಪಾರತಿಯಂತೆ / ಕೈಮುಗಿದು ಮಾಡುವ ವಂದನೆ ಸಂಧ್ಯಾಬಲಿಯರ್ಪಣೆಯಂತೆ
3 : ಕಾವಲಿರಿಸು ಪ್ರಭು ನನ್ನ ಬಾಯಿಗೆ / ಪಹರೆಯಿರಲಿ ನನ್ನ ತುಟಿ ಕದಗಳಿಗೆ
4 : ಮಾಡು ನನ್ನ ಹೃದಯ ದುರಾಚಾರವನು ಮೆಚ್ಚದಂತೆ / ಕಾಪಾಡು ದುರ್ಜನರೊಡಗೂಡಿ ಕೇಡನು ಮಾಡದಂತೆ / ನೋಡು ದುರುಳರೌತಣಗಳಲಿ ನಾ ಪಾಲ್ಗೊಳ್ಳದಂತೆ
5 : ಸಜ್ಜನರು ವಿಧಿಸುವಾ ಶಿಕ್ಷೆ ಎನಗೆ ಕಟಾಕ್ಷ / ದುರ್ಜನರಿಂದ ನನಗಾಗದಿರಲಿ ಅಭಿಷೇಕ / ಸತತ ಪ್ರಾರ್ಥಿಸುವೆ ಆ ದುಷ್ಕøತ್ಯಗಳ ವಿರುದ್ಧ
6 : ದುರುಳರ ಒಡೆಯರು ಶಿಖರದಿಂದ ಬಿದ್ದಾಗ ಕೆಳಕೆ / ನನ್ನ ಮಾತು ಯಥಾರ್ಥವೆಂದು ಜನ ಕಿವಿಗೊಡುವರೆನಗೆ
7 : ಉತ್ತ ಹೊಲದ ಹೆಂಟೆಗಳನು ಒಡೆದು ಚದರಿಸುವ ಹಾಗೆ / ಎರಚಲಾಗುವುದು ಅವರ ಎಲುಬುಗಳನು ಸನರಕದ ಬಾಯಿಗೆ
8 : ಹೇ ಪ್ರಭೂ, ದೇವಾ, ನನ್ನ ದೃಷ್ಟಿ ನಿನ್ನ ಮೇಲಿದೆ / ವಿನಾಶಕೊಪ್ಪಿಸಬೇಡೆನ್ನ, ನಿನ್ನಾಶ್ರಯ ಕೋರಿರುವೆ
9 : ಕಾಪಾಡು ಕೆಡುಕರೊಡ್ಡಿದ ಉರುಲಿನಿಂದ / ತಪ್ಪಿಸೆನ್ನನು ಅವರಿಟ್ಟ ಬೋನಿನಿಂದ
10 : ದುರುಳರೊಡ್ಡಿದ ಉರುಲಲಿ ಆ ದುರುಳರೆ ಸಿಕ್ಕಿಬೀಳಲಿ / ನಾನಾದರೊ ನುಗ್ಗಿನಡೆವೆನು ಸುರಕ್ಷಿತವಾಗಿಯೆ ಅಲ್ಲಿ //

Holydivine