Psalms - Chapter 77
Holy Bible

1 : ಮೊರೆಯಿಡುವೆನು, ಕೂಗಿ ಮೊರೆಯಿಡುವೆನು / ಸ್ವಾಮಿ ದೇವನು ನನಗೆ ಕಿವಿಗೊಡುವನು //
2 : ಸಂಕಟದ ವೇಳೆಯೊಳು ಸ್ವಾಮಿಯನು ನಾ ಕರೆದೆ / ಇರುಳೆಲ್ಲ ಆಯಾಸವರಿಯದೆ ಕೈಚಾಚಿದೆ / ಎನ್ನ ಮನಸ್ಸಿತ್ತು ದುಃಖಶಮನಗೊಳ್ಳದೆ //
3 : ದೇವರನು ಸ್ಮರಿಸಿ ನಿಟ್ಟುಸಿರಿಡುತಿಹೆನು / ಹಂಬಲಿಸಿ ಮನದಲೇ ನಾ ಮರುಗುತಿಹೆನು //
4 : ನಿದ್ರಿಸದಂತೆ ನೀನೆನ್ನ ಕಣ್‍ಗಳ ತೆರೆದಿರುವೆ / ನುಡಿಯಲಾಗದ ತೆರದಿ ನಾ ತಳಮಳಗೊಂಡಿರುವೆ //
5 : ನೆನಪಿಗೆ ತಂದುಕೊಂಡೆ ಹಳೆಯ ದಿನಗಳನು / ಸ್ಮರಿಸಿಕೊಂಡೆ ಉರುಳಿ ಹೋದ ವರುಷಗಳನು //
6 : ನಿನ್ನ ಧ್ಯಾನ ಬರುತ್ತದೆ ನೆನಪಿಗೆ ರಾತ್ರಿಯೊಳು / ಆಲೋಚನೆ ಸುಳಿಯುತ್ತದೆ ನನ್ನಾಂತರ್ಯದೊಳು / ಈ ತೆರನ ಪ್ರಶ್ನೆಯೇಳುತ್ತದೆನ್ನ ಮನದೊಳು: //
7 : ಕೈಬಿಟ್ಟುಬಿಡುವನೋ ಪ್ರಭು ಸದಾಕಾಲಕು?/ ಕೃಪೆಯನು ತೋರನೋ ಮತ್ತೆಂದೆಂದಿಗೂ?//
8 : ಆತನಚಲ ಪ್ರೀತಿ ಇನ್ನು ಮಾಯವಾಯಿತೋ?/ ಆತನ ವಾಗ್ದಾನ ತಲತಲಾಂತರಕು ಮುಗಿಯಿತೋ?//
9 : ಕರುಣೆ ತೋರಲು ದೇವನು ಮರೆತುಬಿಟ್ಟನೋ?/ ಕರುಳಿಗೆ ಕೋಪದಿಂದ ಬರೆ ಹಾಕಿಕೊಂಡನೋ?//
10 : ಆಗ ನಾನು “ನೆನೆಯಲೀಪರಿ, ನನ್ನ ಚಪಲತೆಯೇ ಕಾರಣ / ಮಾಡುವೆನೀಗ ಪರಾತ್ಪರನಾ ಪವಾಡ ವರುಷಗಳ ಸ್ಮರಣ”//
11 : ವರ್ಣಿಸುವೆನು ಪ್ರಭುವಿನ ಮಹತ್ಕಾರ್ಯಗಳೆಲ್ಲವನು / ಸ್ಮರಿಸುವೆ ನೀನಾದಿಯಿಂದ ನಡೆಸಿದ ಅದ್ಭುತಗಳನು //
12 : ಧ್ಯಾನಿಸುವೆ ನಾನಿನ್ನ ಕಾರ್ಯಗಳನೆಲ್ಲ / ಮಾಡುವೆ ಮನನ ನಿನ್ನ ಪವಾಡಗಳನೆಲ್ಲ //
13 : ನಿನ್ನ ಮಾರ್ಗ ದೇವಾ, ಪರಿಶುದ್ಧವಾದುದಯ್ಯಾ / ನಮ್ಮ ದೇವರಂತಹ ಮಹಾ ದೇವರಾರಯ್ಯಾ?//
14 : ಅದ್ಭುತಗಳನು ನಡೆಸುವಂತಹ ದೇವ ನೀನೆಮಗೆ / ತೋರ್ಪಡಿಸಿದೆ ನಿನ್ನಾ ಪರಾಕ್ರಮವನು ಜನತೆಗೆ //
15 : ನಿನ್ನ ಭುಜಬಲದಿಂದ ಯಕೋಬ, ಜೋಸೆಫ್ ವಂಶಜರನು / ಉದ್ಧಾರ ಮಾಡಿದೆ ನಿನ್ನ ಪ್ರಜೆಗಳಾಗಿಹ ಆ ಜನರನು //
16 : ಜಲರಾಶಿಗಳು ದೇವಾ, ನಿನ್ನ ಕಂಡವು / ಕಾಣುತ್ತಲೇ ನಡುಗಿ ತಳಮಳಗೊಂಡವು / ತಳದವರೆಗೂ ಅಲ್ಲಕಲ್ಲೋಲವಾದವು //
17 : ಮಳೆಗರಿಯಿತಾ ಮೇಘ ಮಂಡಲವು / ಭೋರ್ಗರೆಯಿತಾಗ ಅಂತರಿಕ್ಷವು / ಮಿಂಚಿದವು ಎಲ್ಲೆಡೆ ನಿನ್ನಂಬುಗಳು //
18 : ಮೊಳಗಿತು ನಿನ್ನ ಗುಡುಗು ಬಿರುಗಾಳಿಯಲಿ / ಹೊಳೆಯಿತು ನಿನ್ನ ಮಿಂಚು ಇಡೀ ಲೋಕದಲಿ / ಕಂಪಿಸಿತೀ ಭೂಮಂಡಲ ನಡುನಡುಗಿ //
19 : ಸಾಗರವನೆ ನೀ ತುಳಿದು ನಡೆದೆ / ಮಹಾಸಾಗರವನೆ ನೀ ದಾಟಿದೆ / ಹೆಜ್ಜೆಯ ಗುರುತನೂ ಕಾಣಬಿಡದೆ //
20 : ಕುರುಬನು ತನ್ನ ಕುರಿಮಂದೆಯನು ಕರೆದೊಯ್ಯುವಂತೆ / ಮೋಶೆ, ಆರೋನರಿಂದ ನಿನ್ನ ಪ್ರಜೆಗಳನು ನಡೆಸಿದೆ //

Holydivine