Psalms - Chapter 41
Holy Bible

1 : ದಿಕ್ಕಿಲ್ಲದವನನು ಲಕ್ಷಿಸುವವನು ಧನ್ಯನು / ಆಪತ್ಕಾಲದಲಿ ಆದವನನು ಪ್ರಭು ರಕ್ಷಿಸುವನು //
2 : ಅಂಥವನನು ಪ್ರಭು ಜೀವದಿಂದಿರಿಸುವನು, ಸುರಕ್ಷಿತವಾಗಿಡುವನು / ನಾಡಿನಲ್ಲವನನು ಧನ್ಯನಾಗಿಸುವನು, ಶತ್ರುಗಳಿಗಧೀನನಾಗಿಸನು //
3 : ರೋಗದಿ ಹಾಸಿಗೆ ಹಿಡಿದಿರಲು ಪ್ರಭು ಸುಧಾರಿಸುವನು / ರೋಗ ನಿವಾರಿಸಿ ಅವನಿಗೆ ಆರೋಗ್ಯವನೀಯುವನು //
4 : ನಾನಂತು, “ಪ್ರಭೂ ಕರುಣಿಸು, ಗುಣಪಡಿಸೆನ್ನನು / ನಿನಗೆ ವಿರುದ್ಧ ಪಾಪಗೈದೆ” ಎಂದು ಬೇಡುವೆನು //
5 : “ಇವನ ಸಾವೆಂದು? ಇವ ನಿರ್ನಾಮ ವಾಗುವದೆಂತು?” / ನನಗೆ ಕೇಡುಬಯಸುವವರ ಕುಹಕ ನುಡಿಯಿದು //
6 : ನೋಡಬರುವರು, ನವಿರಾದ ಮಾತನಾಡುವರವರು / ಕೇಡನೆ ತುಂಬಿಸಿಕೊಂಡು ಹೊರಬಂದೊಡನೆ ಹರಡುವರು //
7 : ಹಗೆಯವರು ಎನಗೆ ವಿರುದ್ಧ ಗುಜುಗುಟ್ಟುತಿಹರು / ಅವರೆಲ್ಲರು ಎನಗೆ ಕೇಡನೆ ಕಲ್ಪಿಸುತಿಹರು://
8 : “ಹಾಸಿಗೆಯಿಂದವನು ಮರಳಿ ಏಳುವಂತಿಲ್ಲ / ಘಾಸಿ ರೋಗದಿಂದ ವಾಸಿಯಾಗುವಂತಿಲ್ಲ”//
9 : ನನ್ನಾಪ್ತ ಮಿತ್ರನು, ನನ್ನ ನಂಬಿಕೆಗೆ ಪಾತ್ರನು / ನನ್ನೊಡನೆ ಉಂಡವನು, ನನಗೆರಡು ಬಗೆದಿಹನು //
10 : ನೀನಾದರೋ ಪ್ರಭು ಕರುಣಿಸು, ಏಳ ಮಾಡೆನ್ನನು / ನಾನವರಿಗಾಗ ಮುಯ್ಯಿಗೆ ಮುಯ್ಯಿ ತೀರಿಸುವೆನು //
11 : ವಿರೋಧಿಗಳೆನ್ನ ಮೇಲೆ ಜಯಗೊಳ್ಳದಂದು / ಅರಿತುಕೊಳ್ವೆನು ನಿನ್ನೊಲುಮೆ ನನಗಿದೆಯೆಂದು //
12 : ನಿರ್ದೋಷಿಯಾದೆನ್ನನು ನೀನುದ್ಧರಿಸುವೆ / ಚಿರಕಾಲ ನಿನ್ನ ಸನ್ನಿಧಿಯಲ್ಲೆನ್ನನು ಇರಿಸುವೆ //
13 : ಇಸ್ರಯೇಲರ ದೇವರಾದ ಪ್ರಭುವಿಗೆ ಜಯ / ಯುಗಯುಗಾಂತರಕು ಆಮೆನ್ ಆಮೆನ್, ಜಯಜಯ //

Holydivine