Psalms - Chapter 107
Holy Bible

1 : ಕೃತಜ್ಞತೆಯಿಂದ ಸಲ್ಲಿಸಿರಿ ಪ್ರಭುವಿಗೆ ಸ್ತುತಿಯನು / ಆತನ ಪ್ರೀತಿ ಶಾಶ್ವತ, ಆತನು ಒಳ್ಳೆಯವನು //
2 : ಸ್ತುತಿಸಲಿ ಆತನನು ವಿಮುಕ್ತಿ ಪಡೆದವರೆಲ್ಲರು / ಶತ್ರುಗಳಿಂದ ಬಿಡುಗಡೆ ಹೊಂದಿದವರೆಲ್ಲರು //
3 : ಅಂತೆಯೇ ವಂದಿಸಲಿ ಬಂದವರು ಚತುರ್ದಿಕ್ಕುಗಳಿಂದ / ಒಂದಾಗಿ ಕೂಡಿಸಲ್ಪಟ್ಟವರೆಲ್ಲರು ನಾನಾ ದೇಶಗಳಿಂದ //
4 : ಅಲೆದರು ಮರುಳುಗಾಡಿನಲಿ ದಾರಿಕಾಣದೆ / ಬಳಲಿದರು ಜನರಿರುವ ಊರು ಸಿಗದೆ //
5 : ನರಳಿದರು ಹಸಿವೆ ಬಾಯಾರಿಕೆಯಿಂದ / ಸೊರಗಿದರು ಮನೋಯಾತನೆಯಿಂದ //
6 : ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ / ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ //
7 : ಸರಿಯಾದ ದಾರಿಯಲಿ ನಡೆಸಿದನವರನು / ಸೇರಮಾಡಿದನು ಜನವಾಸಿಸುವ ಊರನು //
8 : ಹೊಗಳಲಿ ಪ್ರಭುವಿನಚಲ ಪ್ರೀತಿಯನು / ಜನರಿಗೆ ಆತನೆಸಗಿದ ಅತಿಶಯಗಳನು //
9 : ಬಾಯಾರಿದವರ ಆಸೆಯನ್ನಾತ ಪೂರೈಸಿದನು / ಹಸಿದವರನು ಮೃಷ್ಟಾನ್ನದಿಂದ ತೃಪ್ತಿಪಡಿಸಿದನು //
10 : ದೇವರಾಜ್ಞೆಯನು ವಿರೋಧಿಸಿದ ಕಾರಣ / ಪರಾತ್ಪರನಾಜ್ಞೆಯನು ಹೀಗಳೆದ ಕಾರಣ //
11 : ಕುಳಿತಿದ್ದರವರು ಕತ್ತಲಲಿ, ಕಗ್ಗತ್ತಲಲಿ / ನರಳುತ್ತಿದ್ದರು ಬಂಧಿತರಾಗಿ ಬೇಡಿಗಳಲಿ //
12 : ಕರಗಿತ್ತವರ ಹೃದಯ ಕಡುಕಷ್ಟದಿಂದ / ಎಡವಿ ಬಿದ್ದಿದ್ದರು ಅಸಹಾಯತೆಯಿಂದ //
13 : ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ / ಬಿಕ್ಕಟ್ಟಿನಿಂದ ಬಿಡುಗಡೆಯಿತ್ತನು ಅವರಿಗೆ //
14 : ಕತ್ತಲು, ಕಗ್ಗತ್ತಲಿಂದವರನು ಹೊರತಂದನು / ಅವರ ಬೇಡಿಬಂಧನಗಳನು ಮುರಿದುಹಾಕಿದನು //
15 : ಹೊಗಳಲಿ ಪ್ರಭುವಿನಚಲ ಪ್ರೀತಿಯನು / ಜನರಿಗಾತ ಎಸಗಿದ ಅತಿಶಯಗಳನು //
16 : ಚೂರುಚೂರುಗೈದನು ಕಂಚಿನ ಕದಗಳನು / ಮುರಿದುಹಾಕಿದನು ಕಬ್ಬಿಣದ ಅಗುಳಿಗಳನು //
17 : ರೋಗಿಗಳಾದರವರು ಅನಾಚಾರದ ನಿಮಿತ್ತ / ಬಾಧೆಗೊಳಗಾದರು ಪಾಪಕಾರ್ಯಗಳ ನಿಮಿತ್ತ //
18 : ಅಸಹ್ಯಪಟ್ಟರು ಅನ್ನಆಹಾರಗಳಿಗೆ / ಹತ್ತಿರವಾದರವರು ಮೃತ್ಯುದ್ವಾರಕೆ //
19 : ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ / ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ //
20 : ಗುಣಪಡಿಸಿದನವರನು ತನ್ನ ವಾಣಿಯಿಂದ / ತಪ್ಪಿಸಿದನು ಅವರನು ವಿನಾಶಕೂಪದಿಂದ //
21 : ಹೊಗಳಲಿ ಪ್ರಭುವಿನಚಲ ಪ್ರೀತಿಯನು / ಜನರಿಗಾತ ಎಸಗಿದ ಅತಿಶಯಗಳನು //
22 : ಸಮರ್ಪಿಸಲಿ ಆತನಿಗೆ ಕೃತಜ್ಞತಾ ಬಲಿಗಳನು / ಹಾಡಿಹೊಗಳಲಿ ಆತನಾ ಮಹತ್ಕಾರ್ಯಗಳನು //
23 : ಹಡಗನು ಹತ್ತಿ ಕಡಲನು ದಾಟಿದರು / ಸಾಗರ ಹಾಯ್ದು ವ್ಯಾಪಾರ ಗೈದರು //
24 : ಕಂಡರು ಪ್ರಭುವಿನ ಪವಾಡಗಳನು / ಸಮುದ್ರದೊಳಾತನ ಅದ್ಭುತಗಳನು //
25 : ಬಿರುಗಾಳಿಯೆದ್ದಿತು ಆತನಾಜ್ಞೆಯೊಂದಕೆ / ತರಂಗಗಳು ಭೋರ್ಗರೆದವು ಅದರೊಂದಿಗೆ //
26 : ಗಗನಕ್ಕೇರಿದರು, ಅಗಾಧಕ್ಕಿಳಿದರು / ಗಂಡಾಂತರಕೆ ಸಿಲುಕಿ ಕರಗಿಹೋದರು //
27 : ಅಡ್ಡಾಡಿದರು, ಹೊಯ್ದಾಡಿದರು ಕುಡುಕ ರಂತೆ / ದಿಕ್ಕುತೋರದವರಾದರು ದಕ್ಷತೆ ಸಾಲದೆ //
28 : ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ / ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ //
29 : ಆ ಬಿರುಗಾಳಿಯನಾತ ಶಾಂತಪಡಿಸಿದ / ನಿಂತುಹೋಯಿತಾ ಸಮುದ್ರದಲೆಗಳ ಮೊರೆತ //
30 : ತಂದಿತು ಪ್ರಶಾಂತತೆ ಸಂತಸವನವರಿಗೆ / ಮುಟ್ಟಿಸಿದನಾತ ಅವರಾಶಿಸಿದ ರೇವಿಗೆ //
31 : ಹೊಗಳಲಿ ಪ್ರಭುವಿನಚಲ ಪ್ರೀತಿಯನು / ಜನರಿಗಾತ ಎಸಗಿದ ಅತಿಶಯಗಳನು //
32 : ಕೀರ್ತಿಸಲಿ ಆತನನು ನೆರೆದ ಸಭೆಯಲಿ / ಹಾಡಿಹೊಗಳಲಿ ಹಿರಿಯರಾ ಕೂಟದಲಿ //
33 : ನೀಚ ನಿವಾಸಿಗಳ ಕಾರಣದಿಂದ / ನದಿಗಳನೂ ಮರುಭೂಮಿಯಾಗಿಸಿದ //
34 : ಒಣನೆಲವಗಿಸಿದನಾತ ಬುಗ್ಗೆಗಳನು / ಉಪ್ಪುನೆಲವಾಗಿಸಿದ ಫಲಭೂಮಿಯನು //
35 : ಕೆರೆಯಾಗಿಸಿದಾ ಮರುಭೂಮಿಯನು / ಊಟೆಯಾಗಿಸಿದ ಆ ಒಣನೆಲವನು //
36 : ಹಸಿದವರನು ನೆಲೆಗೊಳಿಸಿದನಲ್ಲಿ / ವಾಸಿಸಲು ನಗರವನು ಕಟ್ಟಿದರಲ್ಲಿ //
37 : ಉತ್ತು ಬಿತ್ತಿದರು, ನೆಟ್ಟರು ದ್ರಾಕ್ಷಾಲತೆಯನು / ಕೂಡಿಸಿಕೊಂಡರು ಅಧಿಕವಾದ ಆದಾಯವನು //
38 : ಅಭಿವೃದ್ಧಿಯಾದರು ಆತನಾಶೀರ್ವಾದದಿಂದಲೆ / ಅವರಿಗಿರಲಿಲ್ಲ ದನಕರುಗಳಾವುದರ ಕೊರತೆ //
39 : ತದನಂತರ ಕುಗ್ಗಿತವರ ಅಂಕೆ ಸಂಖ್ಯೆ / ಕಷ್ಟಸಂಕಟ, ತಾಪತ್ರಯಗಳ ಮಧ್ಯೆ //
40 : ತೃಣೀಕರಿಸಿದನು ಪ್ರಭು ಅವರಧಿಪತಿಗಳನು / ದಾರಿಯಿಲ್ಲದರಣ್ಯದೊಳು ಅಲೆದಾಡಿಸಿದನು //
41 : ದೀನರನ್ನೇರಿಸಿದನು ಅವನತಿಯಿಂದ ಉನ್ನತಿಗೆ / ಹೆಚ್ಚಿಸಿದನವರ ಸಂತತಿಯನು ಕುರಿಮಂದೆ ಹಾಗೆ //
42 : ಇದಕಂಡು ಹಿಗ್ಗುವರು ಸಜ್ಜನರೆಲ್ಲರು / ಬಾಯಿ ಮುಚ್ಚಿಕೊಳ್ಳುವರು ದುರ್ಜನರು //
43 : ಪರ್ಯಾಲೋಚಿಸಲಿವುಗಳನು ಬುದ್ಧಿವಂತರು / ಗ್ರಹಿಸಲಿ ಪ್ರಭುವಿನಚಲ ಪ್ರೀತಿಯನಾ ಜನರು //

Holydivine