Psalms - Chapter 45
Holy Bible

1 : ಉಜ್ವಲಾಲೋಚನೆಯೊಂದು ತುಡುಕುತಿದೆ ಮನದಲಿ / ರಚಿಸಲಿರುವೆ ಮಹಾರಾಜನಿಗೊಂದು ಗೀತಾಂಜಲಿ / ನನ್ನ ಜಿಹ್ವೆ, ಸಜ್ಜಾದ ಬರಹಗಾರನ ಲೇಖನಿ //
2 : ನರಮಾನವರೊಳು ನೀ ಸುರ ಸುಂದರ / ನಿನ್ನ ಮುಖವಾಣಿ ಅತ್ಯಂತ ಮಧುರ / ದೇವಾನುಗ್ರಹ ನಿನಗಿದೆ ನಿರಂತರ //
3 : ಕಟ್ಟಿಕೋ ಶೂರನೇ, ಪಟ್ಟಗತ್ತಿಯನು ಸೊಂಟಕೆ / ಸಂಭ್ರಮ, ಶೋಭೆ, ಸಡಗರ ಸಲ್ಲತಕ್ಕವು ನಿನಗೆ //
4 : ಹೊರಡು ಒಡ್ಡೋಲಗದಿಂದ ವಾಹನಾರೂಢನಾಗಿ / ತೆರಳು ಭುಜಬಲದಿ ಮಹತ್ಕಾರ್ಯವೆಸಗುವವನಾಗಿ / ಹೆಣಗು ಸತ್ಯಕ್ಕಾಗಿ, ನ್ಯಾಯನೀತಿಪರನಾಗಿ //
5 : ನಿನ್ನಂಬು ಬಾಣಗಳು ಹರಿತವಾದುವು / ರಾಜದ್ರೋಹಿಗಳನು ಅವು ಇರಿಯುವುವು / ಜನಾಂಗಗಳು ನಿನ್ನ ಪಾದಕ್ಕೆರಗುವುವು //
6 : ಅಮರವಾದುದು ಹೇ ದೇವಾ, ನಿನ್ನ ಸಿಂಹಾಸನ / ನ್ಯಾಯಸ್ಥಾಪಕವಾದುದು ನಿನ್ನ ರಾಜ ದಂಡ //
7 : ಪ್ರೀತಿಸಿದೆ ನೀನು ಧರ್ಮವನು ದ್ವೇಷಿಸಿದೆ ಅಧರ್ಮವನು / ಆನಂದ ತೈಲದಿಂದಭಿಷೇಕಿಸಿಹನು ನಿನ್ನ, ದೇವನು / ಮಿತ್ರರಿಗಿಂತ ಮಿಗಿಲಾಗಿ ಅಭಿಷೇಕಿಸಿಹನು ಆತನು ನಿನ್ನನು //
8 : ಘಮಘಮಿಸುತಿದೆ ನಿನ್ನುಡಿಗೆ ರಸಗಂಧ, ಅಗರು, ಚಂದನಗಳಿಂದ / ಮನರಂಜನೆಗೊಳ್ಳುತಿರುವೆ ದಂತ ಮಂದಿರದುನ್ನತ ವಾದ್ಯಗಳಿಂದ /
9 : ರಾಜಕುವರಿಯರಿಹರು ನಿನ್ನ ಸ್ತ್ರೀ ಪರಿವಾರದಲಿ / ಪಟ್ಟದ ರಾಣಿಯು ನಿಂತಿಹಳು ನಿನ್ನ ಬಲಪಾಶ್ರ್ವದಲಿ / ಓಫಿರ್ ನಾಡಿನ ಚಿನ್ನಾಭರಣಗಳಿಂದ ಭೂಷಿತಳಾಗಿ //
10 : ಎಲೌ ಕುವರಿಯೇ, ಕೇಳು, ಎನ್ನ ಮಾತಿಗೆ ಕಿವಿಗೊಡು / ನಿನ್ನ ಜನರನು, ತೌರು ಮನೆಯನು ಮರೆತುಬಿಡು //
11 : ಆಗ ಬಯಸುವನು ರಾಜ ನಿನ್ನ ಲಾವಣ್ಯವನು / ಆತನ ಪಾದಕ್ಕೆರಗು, ಆತನೇ ನಿನಗೊಡೆಯನು //
12 : ಟೈರ್ ನಾಡಿಗರು ನಿನಗೆ ಕಾಣಿಕೆಯಿತ್ತು ಸನ್ಮಾನಿಸುವರು / ಸಿರಿವಂತ ಪ್ರಜೆಗಳು ನಿನ್ನುಪಕಾರವನು ಕೋರಿಬರುವರು //
13 : ರಾಜಕುವರಿ ವಿರಾಜಿಸುತಿಹಳು ಅಂತಃಪುರದಲಿ / ಮೆರೆಯುತಿಹಳು ಜರತಾರಿ ವಸ್ತ್ರಾಭರಣಗಳಲಿ //
14 : ಭೂಷಿತಳಾಗಿಹಳಾಕೆ ಕಸೂತಿಕೆಲಸದ ವಸ್ತ್ರಗಳಿಂದ / ಬರುತಿಹಳು ರಾಜನ ಬಳಿಗೆ ಸಖಿಯರ ಪರಿವಾರ ಸಮೇತ //
15 : ಆಗಮಿಸುತಿಹರಿದೋ ಸಂಭ್ರಮ ಸಡಗರದಿಂದ / ಪ್ರವೇಶಿಸುತಿಹರು ಅರಮನೆಯನು ಉತ್ಸಾಹದಿಂದ //
16 : ನಿನ್ನ ಪುತ್ರರು ಅಲಂಕರಿಸುವರು ಪೂರ್ವಜರ ಸ್ಥಾನವನು / ನೇಮಕಗೊಳ್ಳುವರು ಉತ್ತರಾಧಿಕಾರಿಗಳಾಗಿ ಜಗದೊಳು //
17 : ನಿನ್ನ ನಾಮಸ್ಮರಣೆಯನುಳಿಸುವೆನು ಚಿರಕಾಲ / ಹೊಗಳುವರು ಸಕಲ ಜನರು ನಿನ್ನನು ಅನುಗಾಲ //

Holydivine