Psalms - Chapter 90
Holy Bible

1 : ಪ್ರಭೂ, ತಲತಲಾಂತರಕ್ಕೆ / ಶ್ರೀನಿವಾಸ ನೀನೆಮಗೆ //
2 : ಬೆಟ್ಟಗಳು ಹುಟ್ಟುವುದಕೆ ಮುಂಚಿನಿಂದ | ಭೂದೇಶಗಳು ಆಗುವುದಕೆ ಮೊದಲಿಂದ | ನೀನೆಮಗೆ ದೇವರು ಯುಗಯುಗಗಳಿಂದ ||
3 : ಇಳೆಯ ಮಾನವರನು ನೀ ಮಣ್ಣುಪಾಲಾಗಿಸುತಿಹೆ / ‘ನರಪುತ್ರರೇ, ಮರಳಿ ಮಣ್ಣಿಗೆ ಸೇರಿರಿ’ ಎನ್ನುತಿಹೆ //
4 : ನಿನ್ನ ದೃಷ್ಟಿಯಲ್ಲಿ ಪ್ರಭೂ, ಸಹಸ್ರ ವರುಷ / ಇರುಳಿನೊಂದು ಜಾವ, ಗತಿಸಿಹೋದ ಒಂದು ದಿವಸ //
5 ಮನುಜರು ನೀ ಹರಿದೋಡಿಸುವ ಹೊಯಿಲು I ಇರುಳಿನ ಕನಸು, ಹಗಲಿನ ಗರಿಹುಲ್ಲು II
6 : ಚಿಗುರಿ ಹೂಬಿಡುವುದದು ಬೆಳಗಿನಲಿ / ಸೊರಗಿ ತರಗಾಗುವುದು ಬೈಗಿನಲಿ //
7 : ಇಲ್ಲವಾಗುವೆವು ನಿನ್ನ ಕೋಪದಿಂದ / ತಲ್ಲಣಗೊಳ್ವೆವು ನಿನ್ನ ರೌದ್ರದಿಂದ //
8 : ನಿನ್ನ ನೋಟಕೆ ಮರೆಯಾಗಿಲ್ಲ ನಮ್ಮ ಪಾಪದೋಷಗಳು / ನಿನ್ನ ಮುಖಕಾಂತಿಗೆ ಬಟ್ಟಬಯಲಾಗಿವೆ ಗುಪ್ತಾಪರಾಧಗಳು //
9 : ನಿನ್ನ ಕನಲಿನಲೇ ಕಳೆದಿವೆ ನಮ್ಮ ದಿನಗಳು / ನಿಟ್ಟುಸಿರಿನಂತೆ ಮುಗಿವುದೆಮ್ಮ ಬದುಕುಬಾಳು //
10 : ನಮ್ಮ ಆಯುಷ್ಕಾಲ ಎಪ್ಪತ್ತು ವರುಷ / ಹೆಚ್ಚಾಗಿದ್ದರೆ ಬಲ, ಎಂಬತ್ತು ವರುಷ //
11 : ನಿನ್ನ ಕೋಪದಾ ಪ್ರತಾಪವನು ಬಲ್ಲವರಾರು?/ ಭಯಂಕರ ರೌದ್ರವನು ಅನುಭವಿಸುವವರಾರು?//
12 : ಜೀವನಾವಧಿಯನು ಲೆಕ್ಕಿಸುವುದನು ನಮಗೆ ಕಲಿಸು / ಈ ಪರಿಜ್ಞಾನವುಳ್ಳಂಥ ಹೃದಯವನು ನೀ ಕರುಣಿಸು //
13 : ಪ್ರಭು, ತಿರುಗಿ ಬಾ, ಕೋಪವೆಷ್ಟರ ತನಕ?/ ನಿನ್ನೀ ಸೇವಕರ ಮೇಲಿರಲಿ ಮರುಕ //
14 : ಉದಯದಲೆ ತೋಯಿಸೆಮ್ಮನು ನಿನ್ನ ಕೃಪೆಯಿಂದ / ಹರ್ಷಿಸಿ ಆನಂದಿಸುವೆವು ಆಗ ದಿನವಾದ್ಯಂತ //
15 : ಸುಖಪಡಿಸೆಮ್ಮನು ನೀ ಕಷ್ಟಪಡಿಸಿದಷ್ಟು ಕಾಲ ಕೆಡುಕನ್ನು ನಾವು ಅನುಭವಿಸಿದಷ್ಟು ವರ್ಷ ಕಾಲ //
16 : ಪ್ರಕಟವಾಗಲಿ ನಿನ್ನ ರಕ್ಷಾಕಾರ್ಯ ಭÀಕ್ತರಿಗೆ / ನಿನ್ನ ಮಹಿಮಾಶಕ್ತಿ ಅವರ ಸಂತಾನಕೆ //
17 : ಸ್ವಾಮಿದೇವರ ಆಶೀರ್ವಾದ ನಮ್ಮ ಮೇಲಿರಲಿ / ನಾವು ಕೈಗೊಳ್ಳುವ ಕಾರ್ಯಗಳು ಸಫಲವಾಗಲಿ / ಅಹುದು, ನಮ್ಮ ಕಾರ್ಯಗಳೆಲ್ಲಾ ಸಫಲವಾಗಲಿ //

Holydivine