Psalms - Chapter 79
Holy Bible

1 : ಹೊಕ್ಕಿದರು ದೇವಾ, ಮ್ಲೇಚ್ಫರು ನಿನ್ನ ಸ್ವಂತನಾಡನು / ಹೊಲೆ ಮಾಡಿಹರು ನಿನ್ನ ಪವಿತ್ರ ದೇವಾಲಯವನು / ಹಾಳುದಿಬ್ಬವನ್ನಾಗಿಸಿಹರು ಜೆರುಸಲೇಮ್ ನಗರವನು //
2 : ಅರ್ಪಿಸಿದರು ನಿನ್ನ ದಾಸರಾ ಶವಗಳನು ಗಗನ ಪಕ್ಷಿಗಳಿಗೆ / ಹಾಕಿದರು ನಿನ್ನ ಭಕ್ತರ ಮಾಂಸವನು ಕಾಡುಮೃಗಗಳಿಗೆ //
3 : ನೀರಂತೆ ಚೆಲ್ಲಿಹರಾ ನೆತ್ತರನು ಜೆರುಸಲೇಮ್ ಸುತ್ತಲು / ನಮ್ಮವರ ಶವಗಳನು ಹೂಳಲು ಯಾರೂ ಇಲ್ಲದಿರಲು //
4 : ನಿಂದಾಸ್ಪದರಾದೆವು ನೆರೆಹೊರೆಯ ಜನಾಂಗಗಳಿಗೆ / ಗುರಿಯಾದೆವು ಸುತ್ತಣವರ ಹಾಸ್ಯಕುಚೋದ್ಯಗಳಿಗೆ //
5 : ನಿನ್ನ ಕೋಪತಾಪ ಹೇ ಪ್ರಭೂ, ಇನ್ನೆಷ್ಟರವರೆಗೆ? / ಉರಿಯುತ್ತಿರಬೇಕೆ ಸದಾ ನಿನ್ನ ರೋಷಾಗ್ನಿಯ ಧಗೆ?//
6 : ಸುರಿ ರೌದ್ರವನು ನಿನ್ನನರಿಯದಾ ಮ್ಲೇಚ್ಫರ ಮೇಲೆ / ನಿನ್ನ ಶ್ರೀನಾಮವನು ಉಚ್ಚರಿಸದಾ ರಾಜ್ಯಗಳ ಮೇಲೆ //
7 : ನುಂಗಿಬಿಟ್ಟರಾ ಜನರು ಯಕೋಬ ವಂಶದವರನು / ಹಾಳು ಮಾಡಿ ಬಿಟ್ಟರವರ ನಿವಾಸ ಸ್ಥಳಗಳನು //
8 : ಹೊರಿಸಬೇಡ ಪೂರ್ವಿಕರ ತಪ್ಪುಗಳನು ನಮ್ಮ ಮೇಲೆ / ಉರಿಸಂಕಟದಲ್ಲಿರುವೆವು, ತೋರೆಮಗೆ ಕರುಣೆಯನೀಗಲೆ //
9 : ದೇವಾ, ಮುಕ್ತಿದಾತ, ನೆರವಾಗು ನಿನ್ನ ನಾಮಮಹಿಮೆಯ ನಿಮಿತ್ತ / ಪಾಪಗಳನು ಅಳಿಸಿ ನಮ್ಮನುದ್ಧರಿಸು ನಿನ್ನ ನಾಮದ ಪ್ರಯುಕ್ತ //
10 : “ಅವರ ದೇವರೆಲ್ಲಿ?” ಎಂದು ಮ್ಲೇಚ್ಫರು ಆಡಿಕೊಳ್ಳುವುದೇಕೆ?/ ಆಗಲಿ ಪ್ರತೀಕಾರ ನಿನ್ನ ಸೇವಕರ ರಕ್ತ ಸುರಿಸಿದವರಿಗೆ / ಆಗರ್ಥವಾಗುವುದವರಿಗೆ; ಕಾಣಲಿ ಅದು ನಮ್ಮ ಕಣ್ಗಳಿಗೆ //
11 : ಸೆರೆಹೋಗಿರುವವರ ನರಳಾಟಕೆ ಕಿವಿಗೊಡು ನೀನು / ನಿನ್ನ ಶಕ್ತಿ ಕಾದಿಡಲಿ ಸಾವಿಗೀಡಾಗಿರುವ ಅವರನು //
12 : ಪ್ರಭು, ನಿನ್ನನು ನಿಂದಿಸಿದ ಅನ್ಯಜನರ ಮೇಲೆ / ಎರಗಲಿ ಏಳ್ಮಡಿ ದಂಡನೆ ಅವರೆದೆಯ ಮೇಲೆ //
13 : ಆಗ ಸಲ್ಲಿಸುವೆವು ಸದಾಕಾಲ ಕೃತಜ್ಞತೆಯನು ನಿನಗೆ / ಸ್ಮರಿಸುವೆವು ನಿನ್ನ ಮಹಿಮೆಯನು ತಲತಲಾಂತರದವರೆಗೆ / ಹೇ ದೇವಾ, ನಾವು ನಿನ್ನ ಪ್ರಜೆ, ನೀ ಪಾಲಿಸುವ ಮಂದೆ //

Holydivine