Psalms - Chapter 69
Holy Bible

1 : ಒಡನೆ ಕೈ ನೀಡಿ ಕಾಪಾಡು ದೇವಾ / ಕುತ್ತಿಗೆಗೆ ಬಂದಿದೆ ತುಂಬು ಪ್ರವಾಹ //
2 : ಮುಳುಗುತಿಹೆನು ಕಳ್ಳುಸುಬಿನಲಿ; ಕಾಲೂರಲೆನಗೆ ನೆಲವಿಲ್ಲ / ಸಿಕ್ಕಿಹೆನು ಆಳ ಮಡುವಿನಲ್ಲಿ, ಹುಚ್ಚುಹೊಳೆ ಕೊಚ್ಚುತ್ತಿದೆಯಲ್ಲಾ //
3 : ಕಾಯ್ದು ಕಾಯ್ದು ಕಣ್ಣು ಗುಳಿಬಿದ್ದಿದೆ ದೇವಾ, ನಿನಗಾಗಿ / ಗಂಟಲು ಒಣಗಿದೆ, ಜೀವ ಸೊರಗಿದೆ, ನಿನ್ನ ಕೂಗಿ ಕೂಗಿ //
4 : ತಲೆ ಕೂದಲಿಗಿಂತ ಮಿಗಿಲಿಹರು ನಿಷ್ಕಾರಣ ದ್ವೇಷಿಗಳು / ಬಲಿಷ್ಟರಿಹರು ನನ್ನ ಕೊಲೆಗಡುಕರು, ನಿರ್ನಿಮಿತ್ತ ಶತ್ರುಗಳು / ಕಳ್ಳನಾನಲ್ಲನಾದರೂ ದಂಡಕೋರುತಿಹರು ವೈರಿಗಳು //
5 : ನನ್ನ ಮೂರ್ಖತನವನು ದೇವಾ, ನೀ ಬಲ್ಲೆಯಯ್ಯಾ / ನನ್ನಪರಾಧಗಳು ನಿನಗೆ ಮರೆಯಾಗಿಲ್ಲವಯ್ಯಾ //
6 : ಪ್ರಭು ಸೇನಾಧೀಶ್ವರಾ / ನನ್ನಿಂದ ನಿರಾಶೆಯಾಗದಿರಲಿ, ನಿನ್ನ ನಂಬಿದವರಿಗೆ // ಇಸ್ರಯೇಲರ ದೇವಾ / ನನ್ನಿಂದ ನಿಂದೆಯಾಗದಿರಲಿ ನಿನ್ನ ದರ್ಶನಾರ್ಥಿಗಳಿಗೆ //
7 : ನಿನಗಾಗಿಯೇ ನಾ ನಿಂದೆಗೊಳಗಾದೆನಯ್ಯಾ / ನಾಚಿಕೆಯಿಂದಲೆ ಮುಖ ಮುಚ್ಚಿಕೊಂಡೆನಯ್ಯಾ //
8 : ನನ್ನವರಿಗೇ ನಾನನ್ಯನಾದೆನಯ್ಯಾ / ಒಡ ಹುಟ್ಟಿದವರಿಗೇ ಹೊರಗಿನವನಾದೆನಯ್ಯಾ //
9 : ಅಗ್ನಿಯಂತೆನ್ನ ದಹಿಸುತ್ತಿದೆ ನಿನ್ನಾಲಯದಭಿಮಾನ / ಎನ್ನ ಮೇಲೆರಗಿದೆ ನಿನ್ನ ಕಡುದ್ರೋಹಿಗಳ ದೂಷಣ //
10 : ಅತ್ತತ್ತು ನಾ ಒಪ್ಪೊತ್ತಿದ್ದುದೆಲ್ಲಾ / ಚುಚ್ಚುಮಾತಿಗೆ ಕಾರಣವಾಯಿತಲ್ಲಾ //
11 : ಗೋಣಿತಟ್ಟನು ನಾನುಟ್ಟುಕೊಂಡೆನಯ್ಯಾ / ಅಣಕ ಅವಹೇಳನಕೆ ಗುರಿಯಾದೆನಯ್ಯಾ //
12 : ಊರ ಬಾಗಿಲಲಿ ಕೂರುವವರ ಹರಟೆಗೆ ಕಾರಣನಾದೆನಯ್ಯಾ / ಸಾರಾಯಿ ಮದ್ಯಸಾರ ಕುಡಿವವರ ಪದ್ಯವಸ್ತುವಾದೆನಯ್ಯಾ //
13 : ಪ್ರಸನ್ನಕಾಲದಲ್ಲಿ ಪ್ರಭು, ನಾ ಮೊರೆಯಿಡುತ್ತಿರುವೆ ನಿನಗೆ / ಪ್ರೀತಿಮಯ ದೇವಾ, ಜೀವೋದ್ಧಾರಕ, ಸದುತ್ತರ ನೀಡೆನಗೆ //
14 : ಕಳ್ಳುಸುಬಿನಲಿ ನಾನಿಳಿದು ಹೋಗದಂತೆ ಸೆಳೆದುಕೊ / ಪೊಳ್ಳು ದುರುಳರ ಮಡುವಿನಲಿ ನಾ ಮುಳುಗದಂತೆ ಎಳೆದುಕೊ //
15 : ಹುಚ್ಚು ಹೊಳೆಯು ಎನ್ನ ಕೊಚ್ಚದಿರಲಯ್ಯಾ / ಮಡುವು ಎನ್ನ ಸೆಳೆದುಕೊಳ್ಳದಿರಲಯ್ಯಾ / ಪಾತಾಳವೆನ್ನನು ನುಂಗದಿರಲಯ್ಯಾ //
16 : ಆಲಿಸೆನ್ನ ಪ್ರಭು, ನಿನ್ನ ಪ್ರೀತಿ ಸುಮಧುರ / ಕಟಾಕ್ಷಿಸೆನ್ನನು ದೇವಾ, ಕರುಣಾಸಾಗರ //
17 : ನಿನ್ನ ದಾಸನಿಗೆ ವಿಮುಖನಾಗಬೇಡಯ್ಯಾ / ಆಪತ್ತಿನಲ್ಲಿರುವೆ, ತಡಮಾಡಬೇಡಯ್ಯಾ //
19 : ಹತ್ತಿರ ಬಂದೆನ್ನ ಉದ್ಧರಿಸಯ್ಯಾ / ಶತ್ರುಗಳ ಕೈಯಿಂದ ರಕ್ಷಿಸಯ್ಯಾ //
19 : ನನಗಾದ ನಿಂದೆ, ಅಪಮಾನ, ಲಜ್ಜೆ ನಿನಗೆ ತಿಳಿದಿದೆಯಯ್ಯಾ / ನನ್ನ ವೈರಿ ವಿರೋಧಿಗಳು ನಿನಗೆ ಮರೆಯಾಗಿಲ್ಲವಯ್ಯಾ //
20 : ನಿಂದೆಯಿಂದ ಮನನೊಂದು ಹತಾಶನಾಗಿರುವೆನಯ್ಯಾ / ಹಾತೊರೆದರೂ ದಯೆತೋರುವನಾರೂ ಸಿಗಲಿಲ್ಲ / ಅರಸಿದರೂ ಸಾಂತ್ವನನೀಡುವವನು ದೊರಕಲಿಲ್ಲ //
21 : ಹಸಿದ ನನಗೆ ವಿಷಬೆರೆತ ಆಹಾರವಿತ್ತ ರಯ್ಯಾ / ಬಾಯಾರಿದೆನಗೆ ಕಹಿ ಕಾಡಿಯನು ಕೊಟ್ಟರಯ್ಯಾ //
22 : ಅವರಿಗೆ ಬಡಿಸಿದ ಊಟವೇ ಅವರಿಗೆ ಉರುಲಾಗಲಿ / ಅವರ ಹಬ್ಬದೌತಣವೇ ಅವರಿಗೆ ಬೋನಾಗಲಿ //
23 : ಅವರ ಕಣ್ಣು ಮಬ್ಬಾಗಿ ಕಾಣದೆ ಹೋಗಲಿ ಅವರ ಸೊಂಟ ಬಿಡುವಿಲ್ಲದೆ ನಡುಗುತ್ತಿರಲಿ //
24 : ನಿನ್ನ ರೌದ್ರ ಅವರ ಮೇಲೆರಗಲಿ / ನಿನ್ನ ಕೋಪಾಗ್ನಿ ಅವರನು ದಹಿಸಲಿ //
25 : ಅವರ ಪಾಳೆಯ ಹಾಳು ಬೀಳಲಿ / ಅವರ ಗುಡಾರ ಬಿಕೋ ಎನಿಸಲಿ //
26 : ನೀ ಗಾಯಪಡಿಸಿದವರನು ಪೀಡಿಸುತಿಹರು / ಗಾಯದ ಮೇಲೆ ಬರೆಯೆಳೆಯುತಿಹರು //
27 : ದಂಡನೆ ಮೇಲೆ ದಂಡನೆಯನು ಅವರಿಗೆ ವಿಧಿಸು / ಅವರು ನಿರಪರಾಧಿಗಳೆಂಬುದನು ತಪ್ಪಿಸು //
28 : ಉಳಿಸಬೇಡವರನು ಜೀವಬಾಧ್ಯರ ಪಟ್ಟಿ ಯಲಿ / ಸೇರಿಸಬೇಡವರನು ಸಜ್ಜನರ ಸಂಖ್ಯೆಯಲಿ //
29 : ದೇವಾ, ನಾ ನೊಂದುಬೆಂದಿಹೆನಯ್ಯಾ / ಉದ್ಧರಿಸಿ ನನ್ನನು ಕಾಪಾಡಯ್ಯಾ //
30 : ದೇವಾ, ನಾ ನೊಂದುಬೆಂದಿಹೆನಯ್ಯಾ / ಉದ್ಧರಿಸಿ ನನ್ನನು ಕಾಪಾಡಯ್ಯಾ //
31 : ಸ್ವಾಮಿ ದೇವನಿಗಿದುವೇ ಸುಪ್ರೀತ / ಕೊಂಬುಗೊರಸುಳ್ಳ ಗೂಳಿಬಲಿಗಿಂತ //
32 : ಇದನರಿತು ದೀನದಲಿತರು ಆನಂದಗೊಳ್ಳಲಿ / ದೇವನನು ಅರಸುವವರು ಪುನಶ್ಚೇತನಗೊಳ್ಳಲಿ //
33 : ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು / ಸೆರೆಯಲ್ಲಿಹ ತನ್ನವರನು ತಿರಸ್ಕರಿಸನು //
34 : ಭೂಮ್ಯಾಕಾಶಗಳು ಆತನನು ಕೊಂಡಾಡಲಿ / ಸಾಗರಗಳು, ಜಲಚರಗಳು ಆತನನು ಭಜಿಸಲಿ //
35 : ರಕ್ಷಿಸುವನು ದೇವನು ಆ ಸಿಯೋನ್ ಪಟ್ಟಣವನು / ಕಟ್ಟಿಸುವನು ಯೆಹೂದ ನಾಡಿನ ನಗರಗಳನು / ಸ್ವಂತವಾಗಿರಿಸಿಕೊಂಬರು ಆತನ ಪ್ರಜೆ ಅದನು //
36 : ಅವರ ವಂಶಜರೇ ಬಾಧ್ಯಸ್ಥರಾಗುವರದಕೆ / ದೇವರನಾಮ ಪ್ರಿಯರೇ ನಿವಾಸಿಗಳು ಅದಕೆ //

Holydivine