Psalms - Chapter 101
Holy Bible

1 : ಪ್ರೀತಿನೀತಿಗಳ ಕುರಿತು ಹಾಡುವೆನು / ಹೇ ಪ್ರಭೂ, ನಿನ್ನನೆ ಹಾಡಿಹೊಗಳುವೆನು//
2 : ಸನ್ಮಾರ್ಗದಲೇ ನಾ ನಡೆಯುವೆನು / ನನಗೆಂದು ನೀಡುವೆ ದರ್ಶನವನು? / ಮನೆಯೊಳಗೂ ಶುದ್ಧಹೃದಯಿ ನಾನು //
3 : ನೀಚಕಾರ್ಯಗಳನು ನಾ ವೀಕ್ಷಿಸಲಾರೆ / ಅಧರ್ಮಿಗಳ ನಡೆಯನು ನಾ ಸಹಿಸಲಾರೆ / ಅಂಥವರ ಸಹವಾಸವನು ನಾ ತಾಳಲಾರೆ //
4 : ನನ್ನಬಿಟ್ಟು ತೊಲಗಲಿ ಮೂರ್ಖತನ / ನನಗೆ ಹತ್ತದೆಯಿರಲಿ ಕೆಟ್ಟತನ //
5 : ಸಂಹರಿಸುವೆನು ನೆರೆಯವನ ಮೇಲೆ ಅಪವಾದ ಹೊರಿಸುವವನನು / ಸಹಿಸಲಾರೆ ಸೊಕ್ಕಿದಕಣ್ಣು, ಕೊಬ್ಬಿದ ಮನ ಉಳ್ಳಂಥವನನು //
6 : ಆರಿಸಿಕೊಳ್ವೆನು ನಾಡಿನ ಸಜ್ಜನರನು / ಇರಿಸಿಕೊಳ್ವೆನು ನನ್ನೊಡನೆ ವಾಸಿಸಲವರನು / ಸನ್ಮಾರ್ಗಿಯೆ ನನ್ನ ಸೇವಕನಾಗಿರುವನು //
7 : ಮೋಸಗಾರನು ವಾಸಮಾಡನು ನನ್ನ ನಿವಾಸದಲಿ / ಸುಳ್ಳುಗಾರನು ನಿಲ್ಲಲಾರನು ನನ್ನ ಸಮ್ಮುಖದಲಿ //
8 : ಇಲ್ಲಮಾಡುವೆನು ಕೆಡುಕರನು ಪ್ರಭುವಿನಾ ನಗರದೊಳಗೆ / ನಾಶಮಾಡುವೆನು ನಾಡಿನ ದುರುಳರನು ದಿನದಿನಗಳೊಳಗೆ //

Holydivine