Psalms - Chapter 66
Holy Bible

1 : ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ /
2 : ಹಾಡಲಿ ಆತನ ಶ್ರೀನಾಮ ಮಹಿಮೆಗೆ //
3 : “ನಿನ್ನ ಕಾರ್ಯಗಳೆನಿತೋ ಚೇತೋಹಾರಿ / ನಿನ್ನ ಪರಾಕ್ರಮಕೆ ಶತ್ರುಗಳು ಪರಾರಿ //
4 : ಜಗವೆಲ್ಲ ಪೂಜಿಪುದು ನಿನ್ನನು / ಪೊಗಳಿ ಮಾಳ್ಪುದು ಗುಣಗಾನವನು / ಕೀರ್ತಿಸುವುದು ನಿನ್ನ ನಾಮವನು”//
5 : ಬನ್ನಿ, ದೇವನತಿಶಯ ಕಾರ್ಯಗಳ ನೋಡಬನ್ನಿ / ಜನತೆಗಾತ ಮಾಡಿದುದು ಅತ್ಯಾಶ್ಚರ್ಯವೆನ್ನಿ //
6 : ಒಣನೆಲವಾಗಿ ಮಾರ್ಪಡಿಸಿದ ಕಡಲನು / ಕಾಲು ನಡೆಯಲೇ ದಾಟಿಸಿದ ನದಿಯನು / ಇದ ನಿಮಿತ್ತ ಪಡೆಯೋಣ ಆನಂದವನು //
7 : ಆತನಾಳ್ವಿಕೆ ಶಕ್ತಿಯುತ, ನಿರಂತರ / ರಾಷ್ಟ್ರಗಳ ಮೇಲೆ ಅವನ ನೇತ್ರ ಕನಿಕರ / ಜಂಬಕೊಚ್ಚದಿರಲಿ ದಂಗೆಕೋರ //
8 : ಜನಾಂಗಗಳೇ, ನಮಿಸಿರಿ ನಮ್ಮ ದೇವನನು / ಗಟ್ಟಿಯಾಗಿ ಮಾಡಿರಿ ಅವನ ಗುಣಗಾನವನು //
9 : ನಮ್ಮ ಪ್ರಾಣವನ್ನಾತ ಉಳಿಸಿದನಯ್ಯಾ / ಕಾಲೆಡವದಂತೆ ಕಾಪಾಡಿದನಯ್ಯಾ //
10 : ಹೇ ದೇವಾ, ನೀ ನಮ್ಮನ್ನು ಪರಿಶೋಧಿಸಿದೆ / ಪುಟಕ್ಕಿಟ್ಟ ಚಿನ್ನದಂತೆ ಶುದ್ಧೀಕರಿಸಿದೆ //
11 : ಉರುಲು ಬಲೆಗೆ ನಮ್ಮನು ಸಿಕ್ಕಿಸಿದೆ / ಭಾರಿ ಹೊರೆಯನು ಬೆನ್ನಿಗೆ ಹೊರಿಸಿದೆ /
12 : ಶತ್ರುಗಳೆಮ್ಮ ತಲೆಮೇಲೆ ರಥವನೋಡಗೊಳಿಸಿದೆ / ಅಗ್ನಿಯನೂ ಜಲವನೂ ದಾಟುವಂತೆ ಮಾಡಿದೆ / ಕೊನೆಗೆ ಸಮೃದ್ಧ ನಾಡಿಗೆಮ್ಮನು ಸೇರಿಸಿದೆ //
13 : ದಹನ ಬಲಿಯನರ್ಪಿಸೆ ದೇಗುಲಕೆ ಧಾವಿಸುವೆ / ನಿನಗೆ ನಾ ಹೊತ್ತ ಹರಕೆಗಳನ್ನು ತೀರಿಸುವೆ //
14 : ಪೂರೈಸುವೆನು ಬಾಯಾರೆ ಮಾಡಿದ ಹರಕೆಯನು / ಸಂಕಟಕಾಲದಲಿ ನಾ ಮಾಡಿದ ವ್ರತವನು //
15 : ಕೊಬ್ಬಿದ ಪ್ರಾಣಿಗಳನರ್ಪಿಸುವೆನು ಯಜ್ಞವಾಗಿ / ಹೋತಹೋರಿಗಳ ಕೊಡುವೆನು ನಿನಗೆ ಕಾಣಿಕೆಯಾಗಿ / ಟಗರುಗಳ ಬಲಿಧೂಪವೆತ್ತುವೆನು ಆರತಿಯಾಗಿ //
16 : ಬಂದು ಕೇಳಿರಿ ದೇವನಲಿ ಭಯಭಕ್ತಿಯುಳ್ಳವರೆ / ದೇವನೆನಗೆ ಮಾಡಿದ ಕಾರ್ಯಗಳ ತಿಳಿಸುವೆ ನಿಮಗೆ //
17 : ದೇವನಿಗೆನ್ನ ಮನ ಸ್ವರವೆತ್ತಿ ಮೊರೆಯಿಟ್ಟಿತು / ಆತನ ಸ್ತುತಿ ನನ್ನ ಬಾಯಲಿ ತುಳುಕುತ್ತಿತ್ತು //
18 : ಕೆಟ್ಟತನವನು ನಾ ಮನದಲ್ಲಿಟ್ಟಿದ್ದರೆ | ಮುಟ್ಟುವಂತಿರಲಿಲ್ಲ ಆತನಿಗೆ ಎನ್ನ ಮೊರೆ ||
19 : ಆದರೆನ್ನ ಮೊರೆಯು ದೇವನನು ಮುಟ್ಟಿರುವುದು ನಿಜ / ಎನ್ನ ಪ್ರಾರ್ಥನೆಗಾತ ಕಿವಿಗೊಟ್ಟಿರುವುದು ಸಹಜ//
20 : ಎನ್ನ ಪ್ರಾರ್ಥನೆಯನು ತಿರಸ್ಕರಿಸದ ದೇವನಿಗೆ ಸ್ತುತಿ / ತನ್ನ ಪ್ರೀತಿಯನೆನಗೆ ನಿರಾಕರಿಸದಾತನಿಗೆ ಸನ್ನುತಿ //

Holydivine