Psalms - Chapter 44
Holy Bible

1 : ಕೇಳಿದೆವು ಕಿವಿಯಾರೆ ದೇವಾ, ನೀ ಎಸಗಿದ ಘನಕಾರ್ಯಗಳನು / ವಿವರಿಸಿಹರು ನಮ್ಮ ಪೂರ್ವಜರು ನಿನ್ನಾ ಮಹತ್ಕಾರ್ಯಗಳನು //
2 : ಹೊರಗಟ್ಟಿದೆ ಪರಕೀಯರನು, ನಮ್ಮ ಪೂರ್ವಜರ ನೆಲೆಗೊಳಿಸಲು / ವಿನಾಶಗೊಳಿಸಿದೆ ಅನ್ಯರನು, ನಮ್ಮವರನು ವಿಕಾಸಗೊಳಿಸಲು //
3 : ನಾಡಗೆದ್ದುದು ನಮ್ಮವರ ಕತ್ತಿಯಲ್ಲ / ಜಯ ದೊರೆತದು ತಮ್ಮ ಭುಜ ಬಲದಿಂದಲ್ಲ // ಜಯ ತಂದಿತು ನಿನ್ನ ಬಲಹಸ್ತ, ನಿನ್ನ ಮುಖ ಕಾಂತಿ / ನಿನ್ನ ಭುಜಬಲ, ನೀತೋರಿದಾ ಅಚಲಪ್ರೀತಿ //
4 : ಯಕೋಬಿಗೆ ವಿಜಯ ಗಿಟ್ಟಿಸಿದಾತ / ನೀನಲ್ಲವೆ ದೇವಾ, ನನ್ನ ಅರಸ?//
5 : ಶತ್ರುಗಳನು ಸದೆಬಡಿವೆವು ನಿನ್ನ ಬೆಂಬಲದಿಂದ / ಎದುರಾಳಿಯನು ತುಳಿವೆವು ನಿನ್ನ ಆವೇಶದಿಂದ //
6 : ಬಿಲ್ಲುಬಾಣದಲಿ ನಾ ಭರವಸೆಯಿಡುವುದಿಲ್ಲ / ಕತ್ತಿ ಕಠಾರಿ ನನಗೆ ರಕ್ಷಣೆ ತರುವುದಿಲ್ಲ //
7 : ಹಿಂಸಕರಿಂದ ಸಂರಕ್ಷಿಸುವಾತ ನೀನೆ / ಹಗೆಗಳಿಗೆ ಆಶಾಭಂಗ ತರುವಾತ ನೀನೆ //
8 : ನಿನ್ನಲ್ಲಿಯೇ ದೇವಾ, ಹೆಮ್ಮೆಪಡುವೆವು ಸತತ / ನಿನ್ನ ನಾಮವನೆ ಸಂಕೀರ್ತಿಸುವೆವು ನಿರುತ //
9 : ಆದರೀಗ ನಮ್ಮನು ಕಡೆಗಣಿಸಿರುವೆ, ಕೈ ಬಿಟ್ಟಿರುವೆ / ನಮ್ಮ ಸೇನೆಗಳ ಸಂಗಡ ದೇವ, ಹೊರಟು ಬರದಿರುವೆ //
10 : ಶತ್ರುಗಳಿಗೆ ಬೆಂಗೊಟ್ಟು ನಾವೋಡುವಂತೆ ಮಾಡಿರುವೆ / ಹಗೆಗಳು ಹಾಯಾಗಿ ಸೊತ್ತನು ಸೂರೆಮಾಡ ಬಿಟ್ಟಿರುವೆ //
11 : ನಮ್ಮ ನೊಪ್ಪಿಸಿರುವೆ ವಧ್ಯಸ್ಥಾನಕೊಯ್ದ ಕುರಿಗಳಂತೆ / ಚದರಿಸಿಬಿಟ್ಟಿರುವೆ ನಮ್ಮನು ಅನ್ಯಜನಾಂಗಗಳ ಮಧ್ಯೆ //
12 : ಬಿಡುಕಾಸಿಗಿಂತ ಕಡೆಗಾಣಿಸಿರುವೆ ನಿನ್ನ ಪ್ರಜೆಯನು / ಲಾಭವಿಲ್ಲದವರಂತೆ ವಿಕ್ರಯಿಸಿರುವೆ ಅದನು //
13 : ಪರರು ನಮ್ಮನು ಜರೆಯುವಂತೆ ಮಾಡಿರುವೆ / ನೆರೆಯವರ ಪರಿಹಾಸ್ಯಕ್ಕೆ ಗುರಿಪಡಿಸಿರುವೆ //
14 : ಅನ್ಯಜನ ನಮ್ಮ ನಣಕಿಸಿ ತಲೆಯಾಡಿಸುವಂತೆ ಮಾಡಿರುವೆ / ಅನ್ಯಾಯಕ್ಕೆ ಅಡ್ಡಹೆಸರಾಗುವಂತೆ ನಮ್ಮನು ಬಿಟ್ಟಿರುವೆ //
15 : ನನ್ನ ಕಣ್ಮುಂದಿದೆ ಈ ಅವಮಾನ ದಿನವೆಲ್ಲ / ಲಜ್ಜೆಯಿಂದ ನಾ ಮುಖ ಮುಚ್ಚಿಕೊಳ್ಳುವಂತಾಗಿದೆಯಲ್ಲಾ //
16 : ದೂಷಕರ ನಿಂದೆಗೆ ಆಸ್ಪದನಾದೆ / ದ್ರೋಹಿಗಳ ವಕ್ರನೋಟಕೆ ಗುರಿಯಾದೆ //
17 : ನಿನ್ನ ಮರೆಯಲಿಲ್ಲ, ನಿನ್ನ ಒಪ್ಪಂದವನು ವಿೂರಲಿಲ್ಲ / ಆದರೂ ಒದಗಿವೆಯಲ್ಲ ನಮಗೀ ಅನಾಹುತಗಳೆಲ್ಲ //
18 : ನಮ್ಮಂತರಂಗ ದೂರವಾಗಿಲ್ಲ ನಿನ್ನಿಂದ / ನಾವು ಅಗಲಲಿಲ್ಲ ನೀನು ತೋರಿದ ಮಾರ್ಗದಿಂದ //
19 : ಆದರೂ ನಮ್ಮನ್ನು ತಂದು ನಾಯಿನರಿಗಳ ಪಾಲಾಗಿಸಿರುವೆ / ಕಾರ್ಗತ್ತಲೆಮ್ಮನು ಸುತ್ತುವರಿಯುವಂತೆ ಮಾಡಿರುವೆ //
20 : ನಮ್ಮ ದೇವನ ನಾಮವನು ಮರೆತಿದ್ದೆವಾದರೆ / ಅನ್ಯದೇವರಿಗೆ ನಾವು ಕೈ ಮುಗಿದಿದ್ದೆವಾದರೆ, /
21 : ದೇವಾ, ನಿನಗದು ಬಂiÀiಲಾಗದಿರುತ್ತಿತ್ತೆ?/ ನಮ್ಮೆದೆ ಗುಟ್ಟು ನಿನಗೆ ತಿಳಿಯದಿರುತ್ತಿತ್ತೆ?//
22 : ಎಣಿಕೆಯಾಗಿಹೆವು ಕೊಯ್ಗುರಿಗಳಂತೆ ನಾವೆಲ್ಲ / ಬಲಿಯಾಗುತಿಹೆವು ನಿನ್ನ ನಿಮಿತ್ತವೆ ದಿನವೆಲ್ಲ //
23 : ಪ್ರಭೂ, ಎದ್ದೇಳು, ನಿದ್ರಿಸಬೇಡ / ನಮ್ಮನು ಎಂದೆಂದಿಗೂ ತೊರೆಯಬೇಡ //
24 : ಮರೆಸಿಕೊಂಡಿರುವೆಯೇಕೆ ನಿನ್ನ ಮುಖವನು?/ ಮರೆತಿರುವೆಯೇಕೆ ನಮ್ಮ ಹಿಂಸೆ ಬಾಧೆಯನು?//
25 : ಮಣ್ಣುಪಾಲಾಗಿದೆ ನಮ್ಮ ಪ್ರಾಣ / ನೆಲ ಕಚ್ಚಿಕೊಂಡಿದೆ ನಮ್ಮ ದೇಹ //
26 : ಎದ್ದು ಬಂದು ಪ್ರಭು ನಿನ್ನ ನೆರವನ್ನೊದಗಿಸು / ನಿನ್ನ ಚಲ ಪ್ರೇಮದಿಂದ ನಮ್ಮನು ಉದ್ಧರಿಸು //

Holydivine