Psalms - Chapter 144
Holy Bible

1 : ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ ಆಶ್ರಯದುರ್ಗಕ್ಕೆ / ಕಲಿಸಿಹನು ಕದನ ಕೈಗೆ, ಕಾಳಗ ನನ್ನ ಬೆರಳಿಗೆ
2 : ಆತನೇ ನನಗೆ ಬಂಡೆ, ಕೋಟೆ, ದುರ್ಗ, ಉದ್ಧಾರಕ / ನನಗೆ ರಕ್ಷಾಕವಚ, ಆಶ್ರಯ, ಶತ್ರು ವಿಧ್ವಂಸಕ
3 : ಹೇ ಪ್ರಭೂ, ಮನುಜನು ಎಷ್ಟರವನು, ನೀನವನನು ಲಕ್ಷಿಸಲು / ನರಮಾನವನು ಏತರವನು, ನೀನವನನು ಪರಾಮರಿಸಲು
4 : ಮಾನವನು ಕೇವಲ ಉಸಿರಿಗೆ ಸಮಾನ / ಮರೆಯಾಗುವ ನೆರಳು ಅವನ ಜೀವನ
5 : ಆಕಾಶವನು ತಗ್ಗಿಸಿ ಬಾ ಪ್ರಭು ಇಳಿದು / ಬೆಟ್ಟಗಳನು ನೀ ಮುಟ್ಟಲು, ಹೊಗೆ ಹೊರಹೊಮ್ಮುವುದು
6 : ಸಿಡಿಲಿನಿಂದ ಚೆದರಿಸಿಬಿಡು ಶತ್ರುಗಳನು / ನಿನ್ನಂಬುಗಳಿಂದ ಭ್ರಾಂತಗೊಳಿಸವರನು
7 : ನನ್ನ ಸೆಳೆದುಕೊ ಮಹಾಜಲರಾಶಿಯಿಂದ / ನಿನ್ನ ಕೈಚಾಚಿ ಮೇಲಣಲೋಕದಿಂದ / ನನ್ನನು ಬಿಡಿಸು ಅನ್ಯಜನರ ಕೈಯಿಂದ
8 : ಅವರ ಬಾಯಿಂದ ಬರುವ ಮಾತು ಅಸತ್ಯ / ಅವರು ಕೈಯೆತ್ತಿ ಮಾಡುವ ಶಪಥ ಮಿಥ್ಯ
9 : ಹಾಡುವೆ ದೇವಾ, ನಿನಗೆ ನೂತನ ಕೀರ್ತನೆಯನು / ಪಾಡುವೆ ನುಡಿಸುತ್ತಾ ದಶತಂತಿಯ ವೀಣೆಯನು
10 : ನೀನೇ ಅರಸುಗಳಿಗೆ ಜಯಪ್ರದನು / ದಾಸ ದಾವೀದನನು ಬಿಡಿಸಿದವನು
11 : ಕ್ರೂರ ವೈರಿಗಳಿಂದೆನ್ನ ಬಿಡಿಸಯ್ಯಾ / ಅವರ ಬಾಯಿಂದ ಬರುವ ಮಾತು ಅಸತ್ಯ / ಅವರು ಕೈಯೆತ್ತಿ ಮಾಡುವ ಶಪಥ ಮಿಥ್ಯ
12 : ನಮ್ಮ ಗಂಡು ಮಕ್ಕಳಿರಲಿ / ಯೌವನಾವಸ್ಥೆಯಲಿ ಹುಲುಸಾಗಿ ಬೆಳೆದ ಗಿಡಗಳಂತೆ // ನಮ್ಮ ಹೆಣ್ಣುಮಕ್ಕಳಿರಲಿ / ಅರಮನೆಯಲ್ಲಿ ಕೆತ್ತಿದ ಸುಂದರ ಮೂಲೆಗಂಬಗಳಂತೆ
13 : ತುಂಬಿರಲಿ ಸಕಲ ವಿಧ ಧಾನ್ಯಗಳಿಂದ ನಮ್ಮ ಕಣಜಗಳು / ಈಯಲಿ ಸಾವಿರಾರು ಮರಿಗಳನು ನಮ್ಮ ಹೊಲದ ಕುರಿಗಳು
14 : ನಮ್ಮ ಹಸುಗಳು ನೂರಾರು ಕರುಗಳನ್ನೀಯಲಿ / ಮೈಯಿಳಿಯದೆ, ಲೋಪವಿಲ್ಲದೆಯೆ ಗರ್ಭಧರಿಸಲಿ / ನಮ್ಮ ಬೀದಿಗಳಲಿ ಗೋಳಾಟ ಕೇಳಿಬರದಿರಲಿ
15 : ಇಂತಹ ಸಮೃದ್ಧಿ ಪಡೆದಿರುವ ಜನರು ಭಾಗ್ಯವಂತರು / ಯಾರಿಗೆ ದೇವರು ಪ್ರಭುವಾಗಿಹನೋ ಅವರು ಧನ್ಯರು

Holydivine