Psalms - Chapter 18
Holy Bible

1 : ಪ್ರಭುವೇ, ನೀನೆ ನನ್ನ ಬಲವು / ನನಗಿದೆ ನಿನ್ನಲೇ ಒಲವು /
2 : ಪ್ರಭುವೇ ನನ್ನ ಕಲ್ಲುಕೋಟೆ, ನನಗೆ ವಿಮೋಚಕ / ಆತನೇ ನನ್ನ ದೇವ, ನನ್ನಾಶ್ರಯ ದುರ್ಗ / ಆತನೆನಗೆ ಗುರಾಣಿ, ಗಿರಿ, ರಕ್ಷಣಾಶೃಂಗ //
3 : ಪ್ರಭು ಸ್ತುತ್ಯಾರ್ಹನು / ಶತ್ರುಗಳಿಂದ ಕಾಪಾಡುವನು, ನಾನವಗೆ ಮೊರೆಯಿಡಲು //
4 : ನನಗೆ ಸುತ್ತಿಕೊಂಡವು ಮೃತ್ಯುಪಾಶಗಳು / ನಡುಕ ಹುಟ್ಟಿಸಿದ್ದವು ವಿನಾಶಪ್ರವಾಹಗಳು //
5 : ಆವರಿಸಿಕೊಂಡವು ಪಾತಾಳ ಪಾಶಗಳು | ನನ್ನ ಕಣ್ಮುಂದಿದ್ದವು ಮರಣಕರ ಉರುಲುಗಳು ||
6 : ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ಪ್ರಭುವಿಗೆ / ಪ್ರಾರ್ಥನೆ ಮಾಡಿದೆ ಆ ನನ್ನ ದೇವನಲಿ / ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ //
7 : ಆಗ ಕಂಪಿಸಿತು ಭೂಮಿ ಗಡಗಡನೆ / ಕದಲಿದವು ಬೆಟ್ಟದ ಬುಡಗಳು ಮಿಲಮಿಲನೆ / ಏಕೆನೆ, ಸಿಟ್ಟೇರಿತ್ತು ಆತನಿಗೆ //
8 : ಹೊರಬಂದಿತು ಹೊಗೆ ಆತನ ಮೂಗಿಂದ / ಹೊರಟಿತು ಅಗ್ನಿಜ್ವಾಲೆ ಆತನ ಬಾಯಿಂದ / ಕಾದುಕೆಂಡವಾಗಿಸಿತದು ಎದುರಿಗೆ ಸಿಕ್ಕಿದ್ದನೆಲ್ಲ //
9 : ಆಕಾಶವನೆ ಬಾಗಿಸಿ ಆತನಿಳಿದು ಬರಲು / ಸೇರಿತು ಆತನ ಕಾಲಡಿ ಕಾರ್ಮುಗಿಲು //
10 : ಬಂದಿಳಿದನು ‘ಕೆರೂಬಿ’ ವಾಹನಾರೂಢನಾಗಿ | ಇಳಿದು ಬಂದನು ವಾಯುರೆಕ್ಕೆಗಳ ವೇಗದಲಿ ||
11 : ಕತ್ತಲನು ಕವಿಸಿಕೊಂಡನು ಸುತ್ತಲು ಛತ್ರಾಂಬರದೊಳು | ಮರೆಯಾದನು ಜಲಮಯ ನೀಲಮೇಘಗಳ ಮಧ್ಯದೊಳು ||
12 : ಹೊಳೆಯಿತು ಮಿಂಚು ಆತನ ತೇಜದ ಸನ್ನಿಧಿಯಿಂದ / ಸುರಿಯಿತು ಕಲ್ಮಳೆ, ಉರಿಗೆಂಡ ಕಾರ್ಮೋಡಗಳಿಂದ //
13 : ಗುಡುಗಿದನು ಸರ್ವೇಶ್ವರ ಗಗನ ಮಂಡಲದಿಂದ / ಮೊಳಗಿತು ವಾಣಿ ಆ ಪರಾತ್ಪರನ ವದನದಿಂದ / ಸುರಿಯಿತಿದೋ ಕಲ್ಮಳೆ, ಉರಿಗೆಂಡ ಮೇಲಿಂದ //
14 : ಚದರಿಸಿದನು ಶತ್ರುಗಳನು ಬಾಣಗಳನ್ನೆಸೆದು / ತಳಮಳಗೊಳಿಸಿದನವರನು ಸಿಡಿಲನು ಹೊಡೆದು //
15 : ಪ್ರಭು, ನಿನ್ನ ಗದರಿಕೆಯಿಂದ, ನಿನ್ನಾ ಶ್ವಾಸಭರದಿಂದ / ಕಾಣಿಸಿಕೊಂಡಿತು ಇಂಗಿಹೋದ ಸಮುದ್ರದ ತಳ / ತೋರಿಬಂದಿತು ಭೂಲೋಕದ ಅಸ್ತಿಭಾರ //
16 : ಮೇಲಣಲೋಕದಿಂದ ಹಿಡಿದುಕೊಂಡನು ಕೈಚಾಚಿ / ಸೆಳೆದುಕೊಂಡ ಆ ಜಲರಾಶಿಗಳಿಂದೆನ್ನನು ಕೈನೀಡಿ //
17 : ಬಿಡಿಸಿ ರಕ್ಷಿಸಿದನೆನ್ನಾ ಶತ್ರುಗಳಿಂದ / ನನಗಿಂತ ಪುಷ್ಟ, ಬಲಿಷ್ಟ ಹಗೆಗಳಿಂದ //
18 : ನನ್ನ ಮೇಲೆರಗಿದ್ದರೂ ಹಗೆಗಳು ದುರಂತಕಾಲದಲಿ / ನನಗುದ್ಧಾರಕನಾದ ಪ್ರಭು, ಆ ವಿಪತ್ಕಾಲದಲಿ //
19 : ಬಿಕ್ಕಟ್ಟಿನಿಂದ ಬಿಡಿಸಿ ತಂದನು ಬಯಲಿಗೆ / ಅಕ್ಕರೆಯಿಂದ ಮೆಚ್ಚಿ ರಕ್ಷಕನಾದ ನನಗೆ //
20 : ನನಗೊಳಿತು ಮಾಡಿದನಾತ ಸನ್ನಡತೆಗೆ ತಕ್ಕಂತೆ / ಪ್ರತಿಫಲವನಿತ್ತನು ನನ್ನ ಹಸ್ತಶುದ್ಧತೆಗೆ ತಕ್ಕಹಾಗೆ //
21 : ದೇವರನು ತೊರೆದು ದುರುಳನಾಗದೆ / ನಾನನುಸರಿಸಿದೆ ಪ್ರಭುವಿನ ಮಾರ್ಗವನೆ //
22 : ಆತನ ವಿಧಿನಿಯಮಗಳನು ಅಲಕ್ಷ್ಯಮಾಡದೆ / ಆತನಾಜ್ಞೆಗಳನಿಟ್ಟೆ ಸದಾ ನನ್ನ ಕಣ್ಗಳ ಮುಂದೆ //
23 : ಪಾಪದಲಿ ಬೀಳದೆ ನಡೆದೆ ಎಚ್ಚರಿಕೆಯಾಗಿ / ಆತನ ದೃಷ್ಟಿಯಲಿದ್ದೆ ನಿರ್ದೋಷಿಯಾಗಿ //
24 : ನಾ ನೀತಿವಂತ, ನಿರಪರಾಧಿಯೆಂದರಿತು / ನನಗಿತ್ತನಾ ಪ್ರಭು ತಕ್ಕ ಪ್ರತಿಫಲವನು /
25 : ಕರುಣೆಯುಳ್ಳವನಿಗಾತ ಕರುಣಾಮಯಿ / ದೋಷರಹಿತನಿಗಾತ ನಿರ್ದೋಷಿ //
26 : ಶುದ್ಧನಿಗಾತ ಪರಿಶುದ್ಧನು / ಮೂರ್ಖನಿಗಾತ ಮಹಾವಕ್ರನು //
27 : ದೀನದಲಿತರನು ಉದ್ಧರಿಸುವವನು ನೀನು / ತಗ್ಗಿಸಿಬಿಡುವೆಯಲ್ಲವೆ ಪ್ರಭು, ಸೊಕ್ಕಿನ ಲೋಚಕರನು?//
28 : ಹೊತ್ತಿಸುವೆ ಪ್ರಭು, ನೀನೆನ್ನ ಬಾಳಿನ ದೀಪವನು / ಕತ್ತಲನು ನೀಗಿಸಿ ಜ್ಯೋತಿ ಬೆಳಗುವನಾ ದೇವನು //
29 : ನಿನ್ನ ಶಕ್ತಿಯಿದ್ದಲ್ಲಿ ನಾ ದಂಡಿನಮೇಲೆ ಬೀಳಬಲ್ಲೆ / ದೇವನೆರವಿದ್ದಲ್ಲಿ ನಾ ಕೋಟೆಕೊತ್ತಲನೆ ಹಾರಬಲ್ಲೆ //
30 : ದೇವರ ಮಾರ್ಗ ದೋಷರಹಿತ / ಸರ್ವೇಶ್ವರನ ವಚನ ಪರಮಪುನೀತ / ಆಶ್ರಿತರೆಲ್ಲರಿಗಾತ ರಕ್ಷಣಾಕವಚ //
31 : ಪ್ರಭುವಲ್ಲದೆ ಇನ್ನಾವ ದೇವರುಂಟು?/ ನಮ್ಮ ದೇವನಲ್ಲದೆ ಉದ್ದಾರಕನೆಲ್ಲುಂಟು?//
32 : ನಡುಕಟ್ಟಾಗಿ ನನಗೆ ಬಿಗಿದಿದ್ದಾನೆ ಶೌರ್ಯ / ಆತನಿಂದಲೇ ಸರಾಗ ನನ್ನ ಮಾರ್ಗ //
33 : ನನಗಿತ್ತನಾತ ಹುಲ್ಲೆಯಂತ ಮೊನೆಗಾಲು ಎನ್ನ ಬಿಗಿ ನಿಲ್ಲಿಸಿದ ಮಲೆಗಳ ಮೇಲೂ //
34 : ಯುದ್ಧವಿದ್ಯೆಯ ಕಲಿತೆ ಆತನಿಂದಲೆ / ಎಂದೇ ನಾ ಕಂಚಿನ ಬಿಲ್ಲನೆ ಬಗ್ಗಿಸಬಲ್ಲೆ //
35 : ನನ್ನ ಪರ ನೀನೇ ಗುರಾಣಿ ಹಿಡಿದು ರಕ್ಷಿಸಿದೆ / ನಿನ್ನ ಬಲಗೈ ನನಗೆ ಆಧಾರವಾಗಿದೆ / ನಿನ್ನ ಕೃಪಾವರ ತಂದಿತು ನನಗೆ ದೊಡ್ಡಸ್ತಿಕೆ //
36 : ನೀನಿತ್ತೆ ನನ್ನ ಪಾದಗಳಿಗೆ ವಿಶಾಲಸ್ಥಳ / ನನ್ನ ಹೆಜ್ಜೆಗಳು ಕದಲವು ಈ ನಿಮಿತ್ತ //
37 : ಹಿಡಿದುಕೊಳ್ವೆನು ಶತ್ರುಗಳನು ಬೆನ್ನಟ್ಟಿ / ಅವರನು ನಿರ್ಮೂಲ ಮಾಡದೆ ಬರೆನು ಹಿಂತಿರುಗಿ //
38 : ಅವರನು ಮತ್ತೆ ಏಳದಂತೆ ಹೊಡೆದೆ / ಅವರು ಕಾಲಿಗೆ ಬೀಳುವಂತೆ ಮಾಡಿದೆ //
39 : ನನಗಿತ್ತೆ ನೀ ಕದನಕ್ಕಾಗುವ ಶೌರ್ಯವೆಂಬ ನಡುಕಟ್ಟು / ತಗ್ಗಿಸಿದೆ ಎದುರಾಳಿಗಳನು ನನಗಧೀನ ಮಾಡಿಬಿಟ್ಟು //
40 : ಆ ಶತ್ರುಗಳೋಡಿದರು ನನಗೆ ಬೆಂಗೊಟ್ಟು / ಆ ಹಗೆಗಳನು ನಿರ್ಮೂಲ ಮಾಡಿದೆ ನಾ ಗುರಿಯಿಟ್ಟು //
41 : ಎಲ್ಲಿ ಯಾಚಿಸಿದರೂ ಅವರಿಗಿರಲಿಲ್ಲ ರಕ್ಷಕ / ಸರ್ವೇಶ್ವರನಿಗೆ ಮೊರೆಯಿಟ್ಟರು ದೊರಕಲಿಲ್ಲ ಉತ್ತರ //
42 : ಪುಡಿಪುಡಿ ಮಾಡಿದೆ ನಾನವರನು ಗಾಳಿಗೆ ತೂರುವ ಧೂಲಿನಂತೆ / ಎತ್ತೆಸೆದು ಬಿಟ್ಟೆ ನಾನವರನು ಮೋರಿಯ ಕೆಸರಿನಂತೆ //
43 : ಜನರ ಒಳಕಲಹದಿಂದೆನ್ನ ನೀ ತಪ್ಪಿಸಿದೆ / ನನ್ನನುಳಿಸಿ ಜನಾಂಗಗಳಿಗೆ ಜನಪನಾಗಿಸಿದೆ / ನಾನರಿಯದ ಜನರನೂ ನನಗಧೀನ ರನ್ನಾಗಿಸಿದೆ //
44 : ದೇಶಾಂತರದವರೂ ಮುದುರಿಕೊಂಡರು ನನ್ನ ಮುಂದೆ / ವಿಧೇಯರಾದರೆನಗೆ ನನ್ನ ಸುದ್ದಿ ಕೇಳಿದ ಮಾತ್ರಕೆ //
45 : ಎದೆಗುಂದಿದವರಾದರು ಆ ವಿದೇಶಿಯರು / ತಮ್ಮ ಕೋಟೆಯಿಂದ ನಡುಗುತ್ತಾ ಹೊರಬಂದರು //
46 : ಸರ್ವೇಶ್ವರನು ಚೈತನ್ಯ ಸ್ವರೂಪನು / ನನ್ನುದ್ಧಾರಕನಾದವಗೆ ಸ್ತುತಿಸ್ತೋತ್ರವು / ನನ್ನ ರಕ್ಷಿಸುವ ದೇವರಿಗೆ ಜಯಕಾರವು //
47 : ನನ್ನ ಶತ್ರುಗಳಿಗೆ ವಿಧಿಸುವನಾದೇವ ಪ್ರತಿದಂಡನೆ / ಜನಾಂಗಗಳನು ಅಧೀನಪಡಿಸುವನಾತ ನನಗೆ //
48 : ಶತ್ರುಗಳಿಂದ ನೀನೆನ್ನ ಮುಕ್ತಗೊಳಿಸಿದೆ / ಎದುರಾಳಿಗೆ ತಪ್ಪಿಸಿ ನನ್ನನ್ನುನ್ನತಿಗೇರಿಸಿದೆ / ಹಿಂಸಾತ್ಮಕರಿಂದ ನೀಯೆನ್ನ ಸಂರಕ್ಷಿಸಿದೆ //
49 : ಎಂತಲೆ, ಅನ್ಯ ಜನಗಳ ಮಧ್ಯೆ ನಿನ್ನ ಸ್ತುತಿಪೆನು / ನಿನ್ನ ನಾಮವನು ಸರ್ವೇಶ್ವರಾ, ಸಂಕೀರ್ತಿಪೆನು //
50 : ತಾನೇ ನೇಮಿಸಿದ ಅರಸನಿಗೆ / ಆತನೀವನು ವಿಶೇಷ ರಕ್ಷಣೆ //
51 : ಅನುಗ್ರಹಿಸುವನಾತ ಅನಂತಾನಂತ ಕೃಪೆ / ತಾನಭಿಷೇಕಿಸಿದ ದಾವೀದನಿಗೆ, ಆತನ ಸಂತತಿಗೆ //

Holydivine