Psalms - Chapter 118
Holy Bible

1 : ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ / ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ //
2 : ಸಾರಲಿ ಇಸ್ರಯೇಲಿನ ಜನತೆ / ‘ಆತನ ಪ್ರೀತಿ ಶಾಶ್ವತ’ ಎಂದೆ //
3 : ಸಾರಲಿ ಆರೋನನ ವಂಶಲತೆ: / ‘ಆತನ ಪ್ರೀತಿ ಶಾಶ್ವತ’ ಎಂದೆ //
4 : ಸಾರಲಿ ಆತನ ಭಕ್ತರ ಪಂಥ / ಆತನ ಪ್ರೀತಿ ಶಾಶ್ವತ ಅಂಥ //
5 : ಇಕ್ಕಟ್ಟಿನಲಿ ಮೊರೆಯಿಟ್ಟೆನು ಪ್ರಭುವಿಗೆ / ಕಿವಿಗೊಟ್ಟು ಬಿಡುಗಡೆಯಿತ್ತನು ಆತನೆನಗೆ //
6 : ಪ್ರಭು ನನ್ನ ಕಡೆ ಇರಲು ಭಯಪಡೆನು / ನನಗೇನು ಮಾಡಿಯಾನು ಮನುಜನು? //
7 : ನೆರವು ನೀಡಲು ಪ್ರಭು ಎನ್ನಕಡೆ ಇಹನು / ಶತ್ರುಗಳತ್ತ ಜೇತಾರನಾಗಿ ನೋಡುವೆನು //
8 : ಮನುಜರಲಿ ಭರವಸೆಯಿಡುವುದಕ್ಕಿಂತ / ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ //
9 : ರಾಜರಲಿ ಭರವಸೆಯಿಡುವುದಕ್ಕಿಂತ / ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ //
10 : ಶತ್ರುರಾಷ್ಟ್ರಗಳೆಲ್ಲಾ ಸುತ್ತುವರಿದಿದ್ದವು ಎನ್ನನು / ಪ್ರಭುವಿನ ನಾಮಬಲದಲಿ ಧ್ವಂಸಮಾಡಿದೆನವುಗಳನು //
11 : ಸುತ್ತಮುತ್ತಲು ಮುತ್ತಿಕೊಂಡಿದ್ದರು ಎನ್ನನು / ಪ್ರಭುವಿನ ನಾಮಬಲದಲಿ ಸಂಹರಿಸಿದೆನವರನು //
12 : ಕವಿದಿದ್ದರು ಎನ್ನನು ಜೇನುನೊಣಗಳಂತೆ / ಪ್ರಭುವಿನ ನಾಮ ಬಲದಲಿ ಅವರನು ಸಂಹರಿಸಿದೆ / ಮುಳ್ಳುಗಿಡವನು ಬೆಂಕಿ ಸುಟ್ಟುಹಾಕು ವಂತೆ //
13 : ನನ್ನನು ತಳ್ಳಿ ಬೀಳಿಸ ನೋಡಿದರು ನೆಲಕೆ / ಆದರೆ ಪ್ರಭು ನೆರವು ನೀಡಿದನು ಎನಗೆ //
14 : ಪ್ರಭುವೇ ನನಗೆ ಬಲವು, ಧೈರ್ಯವು / ಆತನಿಂದಲೇ ನನಗೆ ಉದ್ಧಾರವು //
15 : ಜಯಘೋಷ, ಹರ್ಷಸುನಾದ ಸಜ್ಜನರ ಬಿಡಾರದಿಂದ / “ಪರಾಕ್ರಮ, ಪ್ರದರ್ಶನ ಪ್ರಭುವಿನ ಬಲಗೈಯಿಂದ //
16 : ವಿಜಯಸಾಧನ ಪ್ರಭುವಿನಾ ಬಲಗೈಯಿಂದ / ಪರಾಕ್ರಮ, ಪ್ರದರ್ಶನವೂ ಅದರಿಂದ” //
17 : ಸಾಯೆನು, ಜೀವದಿಂದಿರುವೆನು ನಾನು / ಪ್ರಭುವಿನ ಕಾರ್ಯಗಳನು ಸಾರುವೆನು //
18 : ಗುರಿಪಡಿಸಿಹನು ಎನ್ನನು ಪ್ರಭು ಕಠಿಣ ಶಿಕ್ಷೆಗೆ / ಆದರೂ ಗುರಿಮಾಡಲಿಲ್ಲ ಎನ್ನನು ಮರಣಕೆ //
19 : ತೆರೆಯಿರಿ ಎನಗೆ ನೀತಿದ್ವಾರಗಳನು / ಒಳನುಗ್ಗಿ ಹೊಗಳುವೆನು ಪ್ರಭುವನು //
20 : ಇದುವೇ ದ್ವಾರ ಪ್ರಭುವಿನ ಮಂದಿರಕೆ / ಇದುವೇ ಪ್ರವೇಶಮಾರ್ಗ ಸಜ್ಜನರಿಗೆ //
21 : ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ / ಉದ್ಧಾರ ಮಾಡಿದೆ, ನಿನಗೆ ಕೃತಜ್ಞತಾವಂದನೆ //
22 : ಮನೆಕಟ್ಟುವವರು ಮೂಲೆಗೆಸೆದ ಕಲ್ಲು / ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು //
23 : ಪ್ರಭುವಿನಿಂದಲೆ ಆದ ಈ ಕಾರ್ಯ / ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ! //
24 : ಪ್ರಭುವೇ ನಿಯೋಜಿಸಿದ ದಿನವಿದು / ಹರ್ಷಿಸಿ ಆನಂದಿಸೋಣ ಇಂದು //
25 : ರಕ್ಷಿಸು ಪ್ರಭೂ, ರಕ್ಷಿಸು ದಯವಿಟ್ಟು / ಸುಕ್ಷೇಮ ನೀಡು ಪ್ರಭು ಕರುಣೆಯಿಟ್ಟು //
26 : ಪ್ರಭುವಿನ ನಾಮದಲಿ ಬರುವವನಿಗೆ ಜಯಮಂಗಳ / ಪ್ರಭುವಿನ ಮಂದಿರದಲ್ಲಿಹ ನಮ್ಮಿಂದ ಶುಭಮಂಗಳ //
27 : ಪ್ರಭುವೆ ದೇವನು, ನಮ್ಮ ಮೇಲೆ ಜ್ಯೋತಿಯನು ಬೆಳಗಿದವನು / ಪ್ರದಕ್ಷಿಣೆ ಮಾಡಿರಿ, ಬಲಿಪೀಠದ ಸುತ್ತ, ಹಿಡಿದು ರೆಂಬೆಗಳನು //
28 : ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ / ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ //

Holydivine