Psalms - Chapter 116
Holy Bible

1 : ನನಗಿದೆ ಪ್ರಭುವಿನಲ್ಲಿ ಪ್ರೀತಿ / ಆಲಿಸಿಹನಾತ ನನ್ನ ವಿನಂತಿ //
2 : ಆತನೆನ್ನ ಮೊರೆಗೆ ಕಿವಿಗೊಟ್ಟ ನಿಮಿತ್ತ / ವಿಜ್ಞಾಪಿಸುವೆ ಜೀವಮಾನ ಪರಿಯಂತ //
3 : ಸುತ್ತುಕೊಂಡಿದ್ದವೆನ್ನನು ಮೃತ್ಯುಪಾಶಗಳು / ಬಿಗಿಹಿಡಿದಿದ್ದವು ಪಾತಾಳ ವೇದನೆಗಳು / ಬಂದೊದಗಿದ್ದವೆನಗೆ ಕಷ್ಟಸಂಕಟಗಳು //
4 : ಕೂಗಿ ಕರೆದೆನಾಗ ಪ್ರಭುವಿನ ಸಿರಿ ನಾಮವನು / “ಪ್ರಭು, ಉಳೆಸೆನ್ನ ಪ್ರಾಣವನು” ಎಂದು ಬೇಡಿದೆನು //
5 : ಪ್ರಭು ಕೃಪಾಳು, ನ್ಯಾಯಪ್ರಿಯನು / ಕರುಣಾಮಯನು, ನಮ್ಮ ದೇವನು //
6 : ಕಾಪಾಡುವನು ಪ್ರಭು ಸರಳ ಜೀವಿಗಳನು / ರಕ್ಷಿಸಿದನು ಕುಗ್ಗಿದವನಾಗಿದ್ದ ಎನ್ನನು //
7 : ಹಿಂತಿರುಗು ನನ್ನ ಮನವೆ, ವಿಶ್ರಾಂತಿ ನೆಲೆಗೆ / ಮಹೋಪಕಾರಗಳನ್ನು ಎಸಗಿಹನು ಪ್ರಭು ನಿನಗೆ //
8 : ತಪ್ಪಿಸಿಹನು ಮರಣಕೆ ನಾನೀಡಾಗದಂತೆ / ಸಂತೈಸಿಹನು ಕಂಬನಿಯ ನಾ ಸುರಿಸದಂತೆ / ಕಾಪಾಡಿಹನು ಕಾಲೆಡವಿ ನಾ ಬೀಳದಂತೆ //
9 : ಎಂದೇ ನಡೆವೆನು ನಾನು ಪ್ರಭುವಿನ ಕಣ್ಮುಂದೆ / ಅಂತೆಯೇ ಬಾಳುವೆ ಜೀವಲೋಕದೊಳಿದ್ದೇ //
10 : ನಾ ನುಡಿದೆನಾದರೂ ‘ಬಹಳ ಸಂಕಟದಲ್ಲಿರುವೆ’ನೆಂದು / ನಾನುಸುರಿದೆನಾದರೂ ‘ಯಾರನು ನಂಬಲಾಗ’ದೆಂದು /
11 : ನನ್ನಲ್ಲಿ ಅಳಿಯದೆ ಉಳಿಯಿತಾ ವಿಶ್ವಾಸವು ಎಂದೆಂದು //
12 : ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ / ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ? //
13 : ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು / ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು //
14 : ಆತನಿಗೆ ನಾ ಹೊತ್ತ ಹರಕೆಗಳನು / ಆತನ ಸಭೆಮುಂದೆಯೆ ತೀರಿಸುವೆನು //
15 : ಪ್ರಭು ಅಲ್ಪವೆಂದೆಣಿಸನು / ತನ್ನ ಭಕ್ತರ ಮರಣವನು //
16 : ಹೇ ಪ್ರಭು, ಕರುಣಿಸು, ನಾ ನಿನ್ನ ಕಿಂಕರನು / ನಿನ್ನ ದಾಸಿಯ ಮಗನು, ನಿನ್ನ ಸೇವಕನು / ಬಿಡಿಸಿರುವೆ ನೀನು ನನ್ನ ಬಂಧನಗಳನು //
17 : ಅರ್ಪಿಸುವೆ ನಾ ನಿನಗೆ ಕೃತಜ್ಞತಾ ಬಲಿಗಳನು / ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು //
18 : ಹೇ ಜೆರುಸಲೇಮೇ, ನಿನ್ನ ಮಧ್ಯದೊಳು / ಆತನಿರುವ ಮಂದಿರದ ಅಂಗಳದೊಳು /
19 : ತೀರಿಸುವೆನು ಆತನ ಸಭೆಯ ಸಮ್ಮುಖದೊಳು / ಅರ್ಪಿಸುವೆನು ನಾ ಹೊತ್ತ ಆ ಹರಕೆಗಳನು //

Holydivine