Psalms - Chapter 61
Holy Bible

1 : ದೇವಾ ಆಲಿಸೆನ್ನ ಮೊರೆಯನು / ಕಿವಿಗೊಟ್ಟು ಕೇಳೆನ್ನ ಜಪವನು //
2 : ಎದೆಗುಂದಿ ಮೊರೆಯಿಡುತ್ತಿರುವೆ ಜಗದೆಲ್ಲೆಯಿಂದ / ಹತ್ತಲಾಗದ ಆಶ್ರಯಗಿರಿಗೆ ಹತ್ತಿಸೆನ್ನ //
3 : ದೇವಾ, ನೀನೆನಗೆ ಶರಣು ಮಹತ್ತರ / ಶತ್ರುಗೆಟುಕದ ಸುಭದ್ರ ಗೋಪುರ //
4 : ನಿನ್ನ ಗುಡಾರವಾಗಲಿ ನನಗೆ ನಿರಂತರ ಬಿಡಾರ | ನಿನ್ನ ರೆಕ್ಕೆಗಳ ಮರೆಯೆ ನನಗೆ ಆಶ್ರಯದಾಗರ ||
5 : ನಾ ಹೊತ್ತ ಹರಕೆಗಳಿಗೆ ದೇವಾ ನೀ ಲಕ್ಷ್ಯವಿತ್ತೆ | ನಿನ್ನ ಭಕ್ತರಿಗೆ ಸಿಗುವ ಭಾದ್ಯತೆಯ ನನಗೂ ಇತ್ತೆ ||
6 : ದೀರ್ಘಾಯುಸ್ಸನು ದಯಪಾಲಿಸು ರಾಜನಿಗೆ / ತಲತಲಾಂತರಕು ಉಳಿಯಲಿ ಆತನಾಳ್ವಿಕೆ //
7 : ದೇವರ ಸಾನ್ನಿಧ್ಯದಲಿ ಆತನು ಸದಾ ಸಾಮ್ರಾಜ್ಯವಾಳಲಿ / ನಿನ್ನಯ ಪ್ರೀತಿ ಸತ್ಯತೆಗಳು ಆತನಿಗೆ ಬೆಂಗಾವಲಾಗಿರಲಿ //
8 : ಸಲ್ಲಿಸುವೆನಾಗ ದಿನಬಿಡದೆ ನಿನಗೆ ಹರಕೆಗಳನು / ಸಂಕೀರ್ತಿಸುವೆನು ಸದಾ ನಿನ್ನ ಶ್ರೀನಾಮವನು //

Holydivine