Psalms - Chapter 63
Holy Bible

1 : ದೇವಾ, ನೀಯೆನ್ನ ದೇವ, ನಿನಗಾಗಿ ನಾ ಕಾದಿರುವೆ / ನಿರ್ಜಲ ಮರುಭೂಮಿಯಲಿ ನೀರಿಗಾಗಿ ಹಾತೊರೆವಂತೆ / ನಿನಗೋಸ್ಕರ ಎನ್ನ ತನು ಸೊರಗಿದೆ, ಮನ ಬಾಯಾರಿದೆ//
2 : ನಿನ್ನ ಮಂದಿರದಲಿ ನನಗಾದ ದರ್ಶನದಲಿ | ನಿನ್ನ ಶಕ್ತಿ ಪ್ರತಿಭೆಯನು ಕಂಡಿರುವೆನಲ್ಲಿ ||
3 : ಪ್ರಾಣಕ್ಕಿಂತ ಮಿಗಿಲಾದುದು ನಿನ್ನಚಲ ಪ್ರೀತಿ / ಎಡೆಬಿಡದೆ ಮಾಳ್ಪುದು ನನ್ನೀ ತುಟಿ ನಿನ್ನ ಸ್ತುತಿ //
4 : ನಿನ್ನ ಸ್ತುತಿಸುವೆ ಜೀವಮಾನ ಪರಿಯಂತ / ಕೈ ಮುಗಿವೆ ನಿನ್ನ ನಾಮದ ಸ್ಮರಣಾರ್ಥ //
5 : ಮೃಷ್ಟಾನ್ನ ತಿಂದಂತೆ ಎನ್ನ ಮನ ಸಂತೃಪ್ತ / ಸಂಭ್ರಮದಿಂದ ನಿನ್ನ ಹೊಗಳುವುದು ಬಾಯ್ತುಂಬ//
6 : ನಿದ್ರಿಸುವಾಗಲು ಮಾಡುವೆ ನಿನ್ನ ಸ್ಮರಣೆ / ರಾತ್ರಿಯೆಲ್ಲ ನಿನ್ನ ಧ್ಯಾನವೆ ನನಗೆ ಜಾಗರಣೆ //
7 : ನನಗೆ ನೀನು ನಿರಂತರದ ಸಹಾಯಕ | ನಿನ್ನ ರೆಕ್ಕೆಗಳಡಿ ನಾ ಸುಖಿ ಗಾಯಕ ||
8 : ನನ್ನಾತ್ಮ ನಿನಗಾತುಕೊಂಡಿದೆ / ನಿನ್ನ ಬಲಗೈ ನನಗಿಂಬಾಗಿದೆ //
9 : ಕೇಡು ಬಗೆವವರು ನನ್ನ ಪ್ರಾಣಕೆ / ಇಳಿದು ಹೋಗುವರು ಅಧೋಲೋಕಕೆ
10 : ಕತ್ತಿಗವರು ತುತ್ತಾಗುವರು / ನರಿತೋಳಗಳ ಪಾಲಾಗುವರು //
11 : ಹರ್ಷಿಸುವನು ರಾಜಾಧಿರಾಜನು ದೇವನಲಿ / ಸಂತೋಷಿಸುವರು ಆಣೆಯಿಟ್ಟವರು ಆತನಲಿ / ಸದ್ದಿಲ್ಲದಂತಾಗ್ವುದು ಸುಳ್ಳಾಡಿದ ಬಾಯಿ ಅಲ್ಲಿ //

Holydivine