Psalms - Chapter 20
Holy Bible

1 : ಸಂಕಟ ಬಂದಾಗ, ಪ್ರಭು ನಿನಗೆ ಕಿವಿಗೊಡಲಿ / ಯಕೋಬ ದೇವರ ನಾಮ, ನಿನ್ನ ಕಾಪಾಡಲಿ //
2 : ನೆರವು ನೀಡಲಾತ ಪವಿತ್ರಾಲಯದಿಂದ / ನಿನಗೊತ್ತಾಸೆ ಬರಲಿ, ಸಿಯೋನ್ ಶಿಖರದಿಂದ //
3 : ನೆನಸಿಕೊಳ್ಳಲಾತ ನೀನರ್ಪಿಸಿದ ಕಾಣಿಕೆಗಳನು / ಒಲಿದು ಸ್ವೀಕರಿಸಲಿ, ನೀನಿತ್ತಾ ಯಜ್ಞಬಲಿಗಳನು //
4 : ನೆರವೇರಿಸಲಿ ಆತ ನಿನ್ನಿಷ್ಟಾರ್ಥಗಳನು / ಪೂರೈಸಲಿ ಪ್ರಭು ನಿನ್ನಭೀಪ್ಸೆಗಳೆಲ್ಲವನು //
5 : ಜಯಘೋಷ ಮಾಡುವೆವು, ನಿನ್ನ ಗೆಲುವಿನ ನಿಮಿತ್ತ / ಧ್ವಜ ಹಾರಿಪೆವು, ಎಮ್ಮ ದೇವನ ನಾಮದ ನಿಮಿತ್ತ / ನಿನ್ನ ಕೋರಿಕೆಗಳೆಲ್ಲವನು, ಕೈಗೂಡಿಸಲಿ ಆತ //
6 : ಒದಗುವನು ಪ್ರಭುವು ಅಭಿಷಿಕ್ತನಿಗೆ / ಓಗೊಡುವನು ಸ್ವರ್ಗದಿಂದಾತನಿಗೆ / ಗೆಲುವನೀವನು ಭುಜಬಲದಿಂದವನಿಗೆ //
7 : ಹೆಚ್ಚಳಪಡುತಿಹರು ಕೆಲವರು ರಥಗಳಲಿ, ಹಲವರು ಅಶ್ವಗಳಲಿ / ಹೆಮ್ಮೆಪಡುತಿಹೆವು ನಾವಾದರೋ, ನಮ್ಮ ದೇವರ ನಾಮದಲಿ //
8 : ಕೆಳಗಿಳಿವರವರು, ಕುಸಿದು ಬೀಳುವರವರು / ಏಳುವೆವು, ಸ್ಥಿರನಿಲ್ಲುವೆವು ನಾವೆಲ್ಲರು //
9 : ಜಯವ ನೀಡು ಪ್ರಭು, ಅರಸನಿಗೆ / ಕಿವಿಗೊಡು ನೀ, ನಮ್ಮ ಪ್ರಾರ್ಥನೆಗೆ //

Holydivine