Psalms - Chapter 49
Holy Bible

1 : ಸರ್ವಜನಾಂಗಗಳೆ, ಗಮನಿಸಿರಿ / ಭೂನಿವಾಸಿಗಳೆ, ನನಗೆ ಕಿವಿಗೊಡಿ
2 : ಜನಸಾಮಾನ್ಯರೆ, ಜನಾಧಿಪತಿಗಳೆ, ದರಿದ್ರರೆ, ಧನವಂತರೆ / ನೀವೆಲ್ಲರು ನನ್ನ ಮಾತುಗಳಿಗೆ ಕಿವಿಗೊಟ್ಟು ಆಲಿಸಿರೈ //
3 : ನನ್ನ ಬಾಯಿ ಬೋಧಿಸುವುದು ಸುಜ್ಞಾನವನು / ನನ್ನ ಮನ ಧ್ಯಾನಿಸುವುದು ವಿವೇಚನೆಯನು //
4 : ನಾ ಕಿವಿಗೊಟ್ಟು ಆಲಿಸುವೆನು ಧರ್ಮದ ಗಾದೆಯನು / ವೀಣೆ ನುಡಿಸುತ ವಿವರಿಸುವೆನು ಅದರ ಗೂಡಾರ್ಥವನು //
5 : ಆಪತ್ಕಾಲದಲಿ ನಾನೇಕೆ ಭಯಪಡಬೇಕು?/ ದ್ವೇಷಿಗಳ ದಾಳಿಗೆ ನಾನೇಕೆ ಹೆದರಬೇಕು?//
6 : ಅವರ ಭರವಸೆ ಸಿರಿಸಂಪತ್ತಿನಲಿ / ಅವರ ಹಿರಿಮೆ ಅಧಿಕಾಸ್ತಿಪಾಸ್ತಿಯಲಿ //
7 : ತನ್ನನು ತಾನೇ ಮುಕ್ತಗೊಳಿಸಿಕೊಳ್ಳುವ ಜೀವಾತ್ಮನಿಲ್ಲ / ದೇವರಿಗೆ ಈಡುಕೊಟ್ಟು ಪ್ರಾಣ ಉಳಿಸಿಕೊಳ್ಳ ಬಲ್ಲ ನರನಿಲ್ಲ //
8 : ಪ್ರಾಣಕೆ ತೆರಬೇಕಾದ ಈಡು ಅಮೂಲ್ಯ / ಅದಕೆ ಸಾಕಷ್ಟು ತೆರಲು ಯಾರಿಗೂ ಅಸಾಧ್ಯ //
9 : ಸಮಾಧಿಗಿಳಿಯದೆ ಸದಾ ಬಾಳುವ ಬಯಕೆ / ಮಾನವ ಶಕ್ತಿಗೆ ವಿೂರಿದುದು ಆ ಗಳಿಕೆ /
10 : ಬುದ್ಧಿಜೀವಿಗಳೂ ಸಾಯುವುದು ಖಂಡಿತ / ಮೂರ್ಖ, ಮಂದಗತಿಗಳ ಅಳಿವೂ ನಿಶ್ಚಿತ / ಅವರ ಸೊತ್ತು ಪರರ ಪಾಲು, ಇದೂ ಖಚಿತ //
11 : ತಮ್ಮ ಹೆಸರಲೆಷ್ಟೋ ಸೊತ್ತಿದ್ದರೂ / ಸಮಾಧಿಯೇ ಅವರಿಗೆ ಶಾಶ್ವತ ಮಂದಿರವು / ಅದುವದುವೇ ಅವರಿಗೆ ನಿತ್ಯ ನಿವಾಸವು //
12 : ನೆಲೆಯಾಗಿರನು ನರನು ಪಟ್ಟಪದವಿಯಲಿ / ನಾಶವಾಗುವನು ಪಶುಪ್ರಾಣಿಗಳ ಪರಿ //
13 : ಮೂಢನಂಬಿಕೆಯುಳ್ಳವರ ಗತಿ ಇದುವೇ / ಆ ಮೂಢರ ನಂಬಿ ನಡೆದವರಿಗು ಹಾಗೆಯೇ //
14 : ದೂಡುವನು ಅವರನು ಕುರಿಹಿಂಡಿನಂತೆ ಪಾತಾಳಕೆ / ಮರಣವೇ ಕುರಿಗಾಹಿ ಆ ನಿಧನ ನಿವಾಸಿ ಗಳಿಗೆ / ವಿನಾಶಗೊಳ್ವುದು ಆ ತಳದಲ್ಲಿ ಅವರ ರೂಪ ರೇಖೆ / ಆಳುವರು ಸಜ್ಜನರು ಅವರೆಲ್ಲರನು ಉದಯಕಾಲಕೆ //
15 : ನನ್ನನ್ನಾದರೊ ಸ್ವಾಗತಿಸುವನು ದೇವನು / ಪಾತಾಳದ ಹಿಡಿತದಿಂದ ಬಿಡಿಸುವನು //
16 : ಒಬ್ಬನು ಧನಿಕನಾದಾಗ ನೀ ಕಳವಳಗೊಳ್ಳಬೇಡ / ಅವನ ಮನೆಯ ಸೊಬಗನು ಕಂಡು ನಿರಾಶೆಗೊಳ್ಳಬೇಡ //
17 : ಸಾಯುವಾಗ ಏನನೂ ಕೊಂಡು ಹೋಗುವುದಿಲ್ಲ / ಘನತೆ ಅವನ ಬೆನ್ನು ಹತ್ತಿ ಹೋಗುವಂತಿಲ್ಲ //
18 : ಸಿರಿಬಂದಾಗ ಕೊರತೆಯಿರದು ಹೊಗಳಿಕೆಗೆ / ಆತ್ಮಸ್ತುತಿ, ಮುಖಸ್ತುತಿ, ಇವುಗಳ ಮೆರೆತಕೆ //
19 : ಸೇರದಿರನಾತ ಪಿತೃಗಳಧೋಗತಿಯನು / ಅವಿವೇಕಿ ಕಾಣನು ಎಂದಿಗೂ ಪರಂಜ್ಯೋತಿಯನು //
20 : ನೆಲೆಯಾಗಿರನು ಪಟ್ಟಪದವಿಯಲಿ / ನಾಶವಾಗುವನು ಪಶುಪ್ರಾಣಿಗಳ ಪರಿ //

Holydivine