Psalms - Chapter 74
Holy Bible

1 : ಹೇ ದೇವಾ, ನಮ್ಮನೀಪರಿ ವರ್ಜಿಸಿಬಿಟ್ಟೆ ಏಕೆ? / ನೀ ಪಾಲಿಪ ಮಂದೆಯ ಮೇಲೀಗ ಉರಿಗೋಪವೇಕೆ? //
2 : ನೆನಸಿಕೊ ಆದಿಯಲೆ ನೀ ಸಂಪಾದಿಸಿಕೊಂಡ ಸಭೆಯನು / ಸ್ಮರಿಸಿಕೊ ಸೊತ್ತಾಗ ನೀ ರಕ್ಷಿಸಿಕೊಂಡ ಗೋತ್ರವನು / ಜ್ಞಾಪಿಸಿಕೊ ನಿನ್ನ ಸದನವಾಗಿದ್ದ ಸಿಯೋನ್ ಶಿಖರವನು //
3 : ಬಿಜಯಮಾಡು ಪಾಳುಬಿದ್ದಿರುವ ಹಳೆಯ ಆಲಯಕೆ / ಶತ್ರು ಕೆಡವಿಹನು ನೋಡು ಗರ್ಭಗುಡಿಯನೇ ಕೆಳಕೆ //
4 : ವೈರಿಗಳಾರ್ಭಟ ನಿನ್ನ ದರ್ಶನಾಲಯದ ಮಧ್ಯೆಯಲಿ / ಅವರ ಜಯ ಬಾವುಟ ಪವಿತ್ರ ಚಿಹ್ನೆಗಳಿಗೆ ಪ್ರತಿಯಾಗಿ //
5 : ಕಾಡಿನಲೋ ಎಂಬಂತೆ ಕೊಡಲಿಯನೆತ್ತಿ ಹಿಡಿದು / ದೇಗುಲದಲಿ ಕೈಗೊಡಲಿ, ಚಮಟಿಗಳ ಪಿಡಿದು /
6 : ನಾಶಮಾಡುತಿಹರು ನೋಡು ಕೆತ್ತನೆಗಳ ಕಡಿದು //
7 : ಅಗ್ನಿಗಾಹುತಿ ಮಾಡಿಹರು ನಿನ್ನ ನಾಮದ ಮಂದಿರವನು / ಹೊಲಸುಮಾಡಿ, ನೆಲಸಮಮಾಡಿಹರಿದೊ ನಿನ್ನ ದೇಗುಲವನು //
8 : ‘ನಾಶ ಮಾಡೋಣ ಈ ಜನರನು’ ಎಂದಾಡಿಕೊಂಡಿಹರು / ದೇಶದ ಸಭಾಮಂದಿರಗಳನ್ನೆಲ್ಲ ಭಸ್ಮಮಾಡಿಹರು //
9 : ಆರಾಧನಾ ಚಿಹ್ನೆಗಳಿಲ್ಲ, ಪ್ರವಾದಿಗಳು ನಮಗಿಲ್ಲ / ಈ ಪರಿಸ್ಥಿತಿ ಎಲ್ಲಿಯತನಕ? ಬಲ್ಲವರಾರೂ ಇಲ್ಲ //
10 : ಎಲ್ಲಿಯತನಕ ದೇವಾ, ಶತ್ರುನಿಂದೆಗೆ ನೀ ಗುರಿಯಾಗುವೇ?/ ಅನವರತ ನಿನ್ನ ನಾಮವನು ಧಿಕ್ಕರಿಸುವುದು ಸರಿಯೇ?/
11 : ಚಾಚಿದಾ ಬಲಗೈಯನೇಕೆ ಹಿಂದೆಗೆದುಕೊಂಡೆ / ಬಚ್ಚಿಟ್ಟಾ ಕೈಯಿಂದ ನೀನವರನು ಚಚ್ಚಿಬಿಡೈ //
12 : ಆದಿಯಿಂದ ದೇವಾ, ನೀನೇ ನನಗೆ ಅರಸನು / ಸಾಧಿಸುತ್ತಿರುವೆ ಜಗದೊಳುದ್ಧಾರವನು //
13 : ಸ್ವಶಕ್ತಿಯಿಂದ ಸಮುದ್ರವನೆ ಭೇದಿಸಿದೆ ನೀನು / ಜಲರಾಶಿಯ ಭುಜಂಗಗಳ ತಲೆಜಜ್ಜಿದಾತ ನೀನು //
14 : ಲೆವಿಯಾತಾನನ ಶಿರಗಳ ಖಂಡನ ಮಾಡಿದವ ನೀನು / ಕಾಡು ಮೃಗಕ್ಕವನನು ಕೂಳಾಗಿಸಿದವ ನೀನು //
15 : ಒರತೆ ಊಟೆಗಳ ಉಕ್ಕಿಸಿದಾತ ನೀನು / ಹರಿವ ನದಿಗಳ ಬತ್ತಿಸಿಬಿಟ್ಟವ ನೀನು //
16 : ಹಗಲಿರುಳುಗಳಿಗೆ ನಿಯಾಮಕ ನೀನು / ರವಿತಾರೆಗಳ ನಿರ್ಮಾಪಕ ನೀನು //
17 : ಜಗದೆಲ್ಲೆ ಮೇರೆಗಳನು ನಿಗದಿ ಮಾಡಿದೆ ನೀನು / ಶೀತೋಷ್ಣಕಾಲಗಳನು ನೇಮಿಸಿದವನು ನೀನು //
18 : ನೆನಪಿರಲಿ ಪ್ರಭು, ಶತ್ರು ನಿನಗೆ ಮಾಡಿದಪಮಾನ / ನಿನ್ನ ಪೂಜ್ಯ ನಾಮಕೆ ದುರುಳರು ಕಕ್ಕಿದ ದೂಷಣ //
19 : ಕೊಡಬೇಡ ನಿನ್ನ ಬೆಳವಕ್ಕಿಯ ಪ್ರಾಣವ ಕಾಡುಮೃಗಕೆ / ನೀ ಮರೆತುಬಿಡಬೇಡ ನಿನ್ನ ದೀನದಲಿತರನು ಒಮ್ಮೆಗೆ //
20 : ನಿನ್ನೊಡಂಬಡಿಕೆಯನು ಗಮನವಿಟ್ಟು ಮಾನ್ಯಮಾಡು / ಕಗ್ಗತ್ತಲಿಗು, ಬಾಧಕರಿಗು ಬೀಡಾಗಿದೆ ನಾಡು //
21 : ಕುಗ್ಗಿದವರು ಹಿಂದಿರುಗದಿರಲಿ ಅವಮಾನದಿಂದ / ಬಡವರು ಕೀರ್ತಿಸಲಿ ನಿನ್ನ ನಾಮವನು ಭಕ್ತಿಯಿಂದ //
22 : ಎಚ್ಚೆತ್ತು, ದೇವಾ, ನಡೆಸು ನಿನ್ನ ನ್ಯಾಯವನು / ಗಮನಿಸು, ಅನುದಿನ ದುರ್ಮತಿ ನಿನ್ನ ನಿಂದಿಪುದನು //
23 : ಮರೆಯದಿರು ನಿನ್ನಾ ವಿರೋಧಿಗಳ ಗದ್ದಲವನು / ವೈರಿಯೆಬ್ಬಿಸುತ್ತಿರುವ ನಿರಂತರ ದೊಂಬಿಯನು //

Holydivine