Psalms - Chapter 78
Holy Bible

1 : ನನ್ನ ಜನರೇ, ಕಿವಿಗೊಡಿ ನನ್ನ ಬೋಧನೆಗೆ / ಗಮನಕೊಡಿ ನಾ ಹೇಳುವ ಮಾತುಗಳಿಗೆ /
2 : ಸಾಮತಿಯೊಂದಿಗೆ ಬೋಧನೆಯನಾರಂಭಿಸುವೆನು / ಹೊರಪಡಿಸುವೆನು ಪೂರ್ವಕಾಲದ ಗೂಡಾರ್ಥಗಳನು //
3 : ಪೇಳ್ವೆವು ನಾವು ಕೇಳಿ ತಿಳಿದುಕೊಂಡವುಗಳನೆ / ಪೂರ್ವಜರೆಮಗೆ ತಿಳಿಸಿದ ಸಂಗತಿಗಳನೆ / ಪ್ರಭುವಿನ ಮಹಿಮೆ ಪರಾಕ್ರಮದ ಪವಾಡಗಳನೆ //
4 : ಮರೆಮಾಡೆವು ಅವರ ಸಂತತಿಯಾದ ನಿಮಗೆ / ವಿವರಿಸುವೆವು ಮುಂಬರಲಿರುವ ಪೀಳಿಗೆಗೆ //
5 : ನೇಮವಿತ್ತನು ಯಕೋಬವಂಶಕೆ / ಶಾಸನಕೊಟ್ಟನು ಇಸ್ರಯೇಲರಿಗೆ // ವಿಧಿಸಿದ ನಿಂತು ನಮ್ಮ ಪೂರ್ವಜರಿಗೆ / “ಕಲಿಸಿರಿ ಇವನ್ನು ನಿಮ್ಮ ಮಕ್ಕಳಿಗೆ” //
6 : “ಗೊತ್ತಾಗಲಿ ಇವೆಲ್ಲ ಮುಂದಿನ ತಲೆಮಾರಿಗೆ / ತಿಳಿಸುತ್ತ ಹೋಗಲಿ ಮಕ್ಕಳು ಮೊಮ್ಮಕ್ಕಳಿಗೆ” //
7 : ಆಗ ತಮ್ಮ ಪ್ರಾಚೀನ ಪೂರ್ವಿಕರಂತೆ ಅವರಾಗರು / ಮೊಂಡರು, ಅವಿಧೇಯರು, ದೈವದ್ರೋಹಿಗಳು, ಚಪಲಚಿತ್ತರು //
8 : ಮರೆಯರು ನನ್ನ ಮಹಾತ್ಕಾರ್ಯಗಳನು / ಇಡುವರು ನನ್ನಲ್ಲೇ ಭರವಸೆಯನು / ಕೈಗೊಳ್ಳುವರು ನನ್ನ ಆಜ್ಞೆಗಳನು //
9 : ಎಫ್ರಯಿಮರು ಹೋದರು ಧನುರ್ಧಾರಿಗಳಾಗಿ / ಯುದ್ಧವೇಳೆಯಲಿ ಓಡೋಡಿದರು ಹಿಂದಿರುಗಿ //
10 : ಪಾಲಿಸಲಿಲ್ಲ ಅವರು ದೇವರ ನಿಬಂಧನೆಯನು / ಅನುಸರಿಸಲಿಲ್ಲ ಆತನ ಧರ್ಮಶಾಸ್ತ್ರವನು //
11 : ಮರೆತುಬಿಟ್ಟರವರು ಆತನ ಮಹತ್ಕಾರ್ಯಗಳನು / ತಮ್ಮೆದುರಿನಲ್ಲೇ ಸಾಧಿಸಿದ ಅದ್ಭುತಗಳನು: //
12 : ಆ ಈಜಿಪ್ಟ್ ದೇಶದೊಳು, ಸೋನ್ ಬಯಲು ಸೀಮೆಯೊಳು / ಆತನೆಸಗಿದ ಪವಾಡಗಳು ಪೂರ್ವಜರ ಇದಿರೊಳು //
13 : ದಾಟಿಸಿದನವರನು ಸಮುದ್ರವನೆ ಭೇದಿಸಿ / ಅದರತುಳ ನೀರನು ರಾಶಿಯಾಗಿ ನಿಲ್ಲಿಸಿ //
14 : ಹಗಲಲಿ ಕರೆದೊಯ್ದನು ಮೇಘದ ನೆರಳಲಿ / ಇರುಳೊಳು ನಡೆಸಿದನು ಜ್ವಾಲೆಯ ಬೆಳಕಲಿ //
15 : ಕಾಡಿನಾ ಕಗ್ಗಲ್ಲನು ಸೀಳಿ ಹೊರಡಿಸಿದನು ನೀರನು / ಆಳದ ಸರಸಿಯಿಂದೊ ಎಂಬಂತೆ ಅದನು ಕುಡಿಯಲಿತ್ತನು //
16 : ಬಂಡೆಗಳಿಂದಲೆ ಹೊರಡಿಸಿದನು ನೀರನು / ನದಿಗಳಂತೆಯೇ ಹರಿಯಮಾಡಿದನು ಅದನು //
17 : ಆದರೂ ಪಾಪಮಾಡುತ್ತಲೆ ಬಂದರು ದೇವರಿಗೆದುರಾಗಿ / ಪ್ರತಿಭಟಿಸಿದರು ಅಡವಿಯಲಿ ಪರಾತ್ಪರನಿಗೆ ವಿರುದ್ಧವಾಗಿ //
18 : ಕೋರಿದರು ತನುಗಿಷ್ಟವಾದ ಆಹಾರವನೇ / ಪರೀಕ್ಷಿಸಿದರು ಮನದಲಿ ಆ ದೇವರನೇ //
19 : ಜರೆವ ಮಾತಿನಲಿ ಆಡಿಕೊಂಡರಿಂತು:/ “ಅಡವಿಯಲ್ಲಿ ದೇವನೂಟ ಬಡಿಸುವನೆಂತು?” //
20 : “ಹೊಡೆದನು ಆಸರೆಯನು, ಚಿಮ್ಮಿತು ನೀರು, ಹರಿಯಿತು ನೆರೆಯು / ಆದರೆ ಕೊಡಬಲ್ಲನೆ ರೊಟ್ಟಿ, ಒದಗಿಸುವನೆ ಮಾಂಸವನು?” //
21 : ಇದನ್ನು ಕೇಳಿ ಸಿಡಿದೆದ್ದನು ಪ್ರಭು ರೋಷದಿಂದಲೆ / ಉಕ್ಕೇರಿತಾತನ ಕೋಪ ಇಸ್ರಯೇಲರ ಮೇಲೆ / ಕಾರಿದನು ಕೋಪಾಗ್ನಿಯನು ಯಕೋಬಕುಲದ ಮೇಲೆ //
22 : ಏಕೆನೆ, ಅವರಿಗಿರಲಿಲ್ಲ ವಿಶ್ವಾಸ ದೇವರಲಿ / ಇರಲಿಲ್ಲ ನಂಬಿಕೆ ಆತನಾ ಸಲಹುವ ಶಕ್ತಿಯಲಿ //
23 : ಆದರು ಮೇಘಮಂಡಲಕೆ ಆಜ್ಞೆಯಿತ್ತನಾತ / ಅಂತರಿಕ್ಷದಾ ದ್ವಾರಗಳನು ತೆರೆದನಾತ //
24 : ಸುರಿಸಿದನು ಅವರ ಮೇಲೆ ಉಣಲು ಅನ್ನವನು / ಅನುಗ್ರಹಿಸಿದನು ಸ್ವರ್ಗದ ದವಸಧಾನ್ಯವನು //
25 : ನರರಿಗುಣಲುಕೊಟ್ಟನು ದೇವದೂತರ ಆಹಾರವನು / ಇತ್ತನವರಿಗೆ ತೃಪ್ತಿಕರವಾದ ಭೂರಿ ಔತಣವನು //
26 : ಆಕಾಶದಲೆಬ್ಬಿಸಿದನು ಮೂಡಣ ಗಾಳಿಯನು / ಒಲುಮೆಯಿಂದ ಹೊರಡಿಸಿದನು ತೆಂಕಣ ಗಾಳಿಯನು //
27 : ಧೂಳಿನಷ್ಟು ಸುರಿಸಿದನು ಮಾಂಸವೃಷ್ಟಿಯನು / ಸಮುದ್ರದ ಮರಳಿನಷ್ಟು ರೆಕ್ಕೆ ಹಕ್ಕಿಗಳನು //
28 : ಬೀಳ್ವಂತೆ ಮಾಡಿದನು ಪಾಳೆಯದ ಮಧ್ಯದಲೂ / ಉದುರಿದವು ಅವರಿದ್ದ ಗುಡಾರಗಳ ಸುತ್ತಲೂ //
29 : ಸಿಕ್ಕಿತು ಅವರಿಗೆ ತಾವು ಬಯಸಿದ್ದು / ತೃಪ್ತರಾದರು ಹೊಟ್ಟೆತುಂಬ ತಿಂದು //
30 : ಆದರೆ ಆ ಜನಕೆ ಆಶೆ ಕೈಗೂಡುವುದಕೆ ಮುನ್ನ / ಬಾಯಿಗೆ ಬಂದ ತುತ್ತು ಹೊಟ್ಟೆಗಿಳಿಯುವುದಕ್ಕೆ ಮುನ್ನ //
31 : ದೈವಕೋಪವೆದ್ದಿತು ಅವರಿಗೆ ವಿರುದ್ಧ / ಮಾಡಿತವರಲಿ ಕೊಬ್ಬಿದವರ ವಧ / ನೆಲಕುರುಳಿತು ಇಸ್ರಯೇಲ ಸಿರಿಜನ //
32 : ಇಷ್ಟಾದರೂ ಪಾಪಮಾಡುತ ಬಂದವರು ಪದೇ ಪದೇ / ದೇವರ ಅದ್ಭುತ ಕಾರ್ಯಗಳನು ತೊರೆದರು ನಂಬದೆ //
33 : ಆರಿಸಿದನು ಊದಿ ಅವರ ಬಾಳ ಹಣತೆಯನು / ಬರಮಾಡಿದನು ಅವರಿಗೆ ಭೀಕರ ಮರಣವನು //
34 : ಆತನನು ನೆನಸಿಕೊಂಡರವರು ವಧೆಯಾಗುವಾಗ / ಪರಿತಾಪಗೊಂಡು ದೇವರಿಗೆ ಅಭಿಮುಖರಾದಾಗ //
35 : ನೆನೆದರಾಗ ದೇವರೇ ತಮಗಾಶ್ರಯ ದುರ್ಗವೆಂದು / ಆ ಪರಾತ್ಪರ ದೇವರೇ ತಮಗೆ ಉದ್ಧಾರಕನೆಂದು //
36 : ಆದರೆ ಅವರ ನಾಲಿಗೆಯಾಡಿತು ಅಸತ್ಯ / ಅವರ ಬಾಯಿ ಮಾಡಿತು ಕೇವಲ ಮುಖಸ್ತುತಿಯ //
37 : ನೆಲೆಯಾಗಿರಲಿಲ್ಲ ಅವರ ಹೃದಯ ಆತನಲಿ / ಬದ್ಧರಾಗಿರಲಿಲ್ಲ ಆತನ ನಿಬಂಧನೆಗಳಲಿ //
38 : ಆದರೂ ಕ್ಷಮಿಸಿದನವರನು ಆ ದಯಾಳು, ನಾಶಮಾಡದೆ / ಕೋಪವ ತಾಳಿಕೊಂಡನು ಹಲವು ವೇಳೆ, ಉದ್ರೇಕಗೊಳ್ಳದೆ //
39 : ನೆನೆದುಕೊಂಡನಾತ ಅವರು ಕೇವಲ ನರರೆಂದು / ತಿಳಿದುಕೊಂಡನು ಮರಳಿಬಾರದ ಉಸಿರವರೆಂದು //
40 : ಎಷ್ಟೋ ಸಾರಿ ಅವಿಧೇಯರಾಗಿ ನಡೆದುಕೊಂಡರು ಅರಣ್ಯದಲಿ / ಎಷ್ಟೋ ಸಾರಿ ಆತನ ಮನನೋಯಿಸಿದರು ಮರುಭೂಮಿಯಲಿ //
41 : ಪದೇಪದೇ ಪರೀಕ್ಷಿಸಿದರು ದೇವರನು / ಕೆಣಕಿದರು ಇಸ್ರಯೇಲರ ಸದಮಲನನು //
42 : ಮರೆತೇಬಿಟ್ಟರು ಆತನ ಭುಜಬಲವನು / ವೈರಿಗಳಿಂದ ಬಿಡುಗಡೆಯಾದಾ ಸಮಯವನು //
43 : ಕಡೆಗಣಿಸಿದರು ಈಜಿಪ್ಟಿನಲಿ ಮಾಡಿದ ಪವಾಡಗಳನು / ಸೋನ್ ಬಯಲು ಸೀಮೆಯಲಾತ ಮಾಡಿದ ಮಹತ್ಕಾರ್ಯಗಳನು //
44 : ಅಲ್ಲಿ ಆತ ರಕ್ತವಾಗಿಸಿದನು ನದಿನೀರನು / ಕುಡಿಯಲಾಗದಂತೆ ಮಾಡಿದನಾ ತೊರೆನೀರನು //
45 : ಕಳುಹಿಸಿದನು ವಿನಾಶಕರ ಹುಳುಗಳನು / ಹಾಳುಮಾಡುವ ವಿಷಮಂಡೂಕಗಳನು //
46 : ಬಿಟ್ಟನು ಬೆಳೆಗಳನು ಚಿಟ್ಟೆಗಳಿಗೆ / ಕಷ್ಟದ ಫಲಗಳನು ಮಿಡತೆಗಳಿಗೆ //
47 : ದ್ರಾಕ್ಷಾಲತೆಗಳನು ಹಾಳುಮಾಡಿದನು ಆಲಿಕಲ್ಲಿನಿಂದ / ಅವರ ಅತ್ತಿಮರಗಳನು ನಾಶಮಾಡಿದನು ಕಲ್ಮಳೆಯಿಂದ //
48 : ಅವರ ದನಕರುಗಳನೊಪ್ಪಿಸಿದ ಕಲ್ಮಳೆಗೆ / ಅವರ ಕುರಿಮಂದೆಗಳನೊಪ್ಪಿಸಿದ ಸಿಡಿಲಿಗೆ //
49 : ಸುರಿಸಿದನು ಕೋಪರೌದ್ರಗಳನು, ಉಗ್ರಹಿಂಸೆಗಳನು / ಕಳಿಸಿದನವರಮೇಲೆ ಸಂಹಾರಕ ದೂತಗಣಗಳನು //
50 : ತೂಬೆತ್ತಿಬಿಟ್ಟನು ತನ್ನ ಕ್ರೋಧಕೆ / ತುತ್ತಾಗಿಸಿದನು ದೇಹಗಳನು ಜಾಡ್ಯಕೆ / ಅಡ್ಡಿತರಲಿಲ್ಲ ಆತನು ಅವರ ಮರಣಕೆ //
51 : ಸಂಹರಿಸಿದನು ಈಜಿಪ್ಟಿನ ಚೊಚ್ಚಲ ಮಕ್ಕಳನು / ಹಾಮನ ಮನೆತನದ ಮೊತ್ತಮೊದಲ ಸಂತಾನವನು //
52 : ತನ್ನ ಜನರನೋ ಹೊರತಂದನು ಕುರಿಮಂದೆಯಂತೆ / ಅಡವಿಯೊಳು ಪರಿಪಾಲಿಸಿದನು ಕುರಿಗಾಹಿಯಂತೆ //
53 : ಅವರು ಅಂಜದಂತೆ ನಡೆಸಿದನು ಸುರಕ್ಷಿತವಾಗಿ / ಶತ್ರುಗಳನೋ ಆವರಿಸಿತು ಸಮುದ್ರವು ನುಂಗಿ //
54 : ಕರೆತಂದನವರನು ತನ್ನ ಪವಿತ್ರನಾಡಿಗೆ / ಭುಜಬಲದಿಂದ ಗಳಿಸಿದಾಪರ್ವತ ಸೀಮೆಗೆ //
55 : ಓಡಿಸಿದನು ಅವರಿಗೆದುರಾಗಿದ್ದ ಜನಾಂಗಗಳನು / ಸೊತ್ತಾಗಿ ಹಂಚಿದನು ಇಸ್ರಯೇಲರಿಗಾ ನಾಡನು / ನೆಲೆಗೊಳಿಸಿದನಾ ಜನಾಂಗದ ಬಿಡಾರದಲಿ ಇವರನು //
56 : ಆದರೂ ಬಂಡೆದ್ದು ಪರೀಕ್ಷಿಸಿದರು ಪರಾತ್ಪರ ದೇವರನು / ಕೈಗೊಂಡು ನಡೆಯದೆ ಹೋದರು ಆತನ ವಿಧಿನಿಯಮಗಳನು //
57 : ನಂಬಿಕೆಗೆಟ್ಟ ದ್ರೋಹಿಗಳಾದರು ತಮ್ಮ ಹಿರಿಯರಂತೆ / ಆತನಿಗೆ ಎದುರುಬಿದ್ದರು ಹಿಮ್ಮುಖವಾದ ಬಿಲ್ಲಿನಂತೆ //
58 : ಬೇಸರಗೊಳಿಸಿದರು ತಮ್ಮ ಪೂಜಾಸ್ಥಾನಗಳಿಂದ / ರೇಗಿಸಿದರಾತನನು ಕೆತ್ತನೆಯ ವಿಗ್ರಹಗಳಿಂದ //
59 : ರಣರೌದ್ರನಾದನು ಇದನರಿತ ದೇವನು / ತೊರೆದನು ಅಸಹ್ಯದಿಂದ ಇಸ್ರಯೇಲರನು //
60 : ತ್ಯಜಿಸಿದನು ಸಿಲೋವಿನಲಿ ತನಗಿದ್ದ ಆಲಯವನು / ಜನರ ಮಧ್ಯೆ ವಾಸಿಸಲು ತನಗಿದ್ದಾ ಗುಡಾರವನು //
61 : ಒಪ್ಪಿಸಿದನು ತನ್ನ ಬಲುಮೆಯನು ಕೈಸೆರೆಗೆ / ತನ್ನ ಮಹಿಮೆಯನು ವಿರೋಧಿಗಳ ಕೈವಶಕೆ //
62 ಗುರಿಮಾಡಿದನು ತನ್ನ ಪ್ರಜೆಯನು ಖಡ್ಗಕೆ I ಉಗ್ರವಾದನು ತನ್ನ ವಾರಸುದಾರರಿಗೆ II
63 : ಆಹುತಿಯಾದರವರ ಯುವಜನ ಅಗ್ನಿಗೆ / ವಿವಾಹವಾಗಲಿಲ್ಲ ಅವರ ಕನ್ಯೆಯರಿಗೆ //
64 : ಬಲಿಯಾದರವರ ಯಾಜಕರು ಶತ್ರುಕತ್ತಿಗೆ / ವಿಧವೆಯರು ರೋದಿಸಲಿಲ್ಲ ಅವರ ಸಾವಿಗೆ //
65 : ಪ್ರಭುವೆದ್ದನು ನಿದ್ರೆಯಿಂದಲೋ ಎಂಬಂತೆ / ಮಧುವಿನ ಅಮಲಿನಿಂದೆಚ್ಚೆತ್ತ ಬಲಿಷ್ಠ ನಂತೆ //
66 : ಸದೆಬಡಿದನಾತ ತನ್ನ ಶತ್ರುಗಳನು / ನಿತ್ಯನಿಂದೆಗೆ ಈಡುಮಾಡಿದನವರನು //
67 : ವರ್ಜಿಸಿದನು ಜೋಸೆಫ್ ಕುಲದ ಗುಡಾರವನು / ತ್ಯಜಿಸಿದನು ಎಫ್ರಯಿಮ್ ಕುಲದಾ ಗುಡಾರವನು //
68 : ಆರಿಸಿಕೊಂಡನು ಯೆಹೂದರ ಗೋತ್ರವನು / ತನಗತಿಪ್ರಿಯವಾದ ಸಿಯೋನ್ ಗಿರಿಯನು //
69 : ನಿರ್ಮಿಸಿದನು ತನ್ನ ಮಂದಿರವನು ಪರ್ವತದಂತೆ / ಶಾಶ್ವತವಾಗಿ ತಾನು ಸ್ಥಾಪಿಸಿದ ಭೂಮಿಯಂತೆ //
70 : ಆರಿಸಿಕೊಂಡನು ದಾಸ ದಾವೀದನನು / ತೆಗೆದುಕೊಂಡನು ಕುರಿಹಟ್ಟಿಯಿಂದವನನು //
71 : ಕುರಿಮೇಯಿಸುವಾ ಕಸಬಿನಿಂದವನನು ಬಿಡಿಸಿದನು / ಸ್ವಪ್ರಜೆ ಯಕೋಬ್ಯರನು, ಸ್ವಜನ ಇಸ್ರಯೇಲರನು / ಪರಿಪಾಲಿಸುವಂತೆ ನೇಮಕ ಮಾಡಿದನು ಆತನನು //
72 : ದಾವೀದನು ಪೋಷಿಸಿದನವರನು ನೇರ ಮನದಿಂದ / ಪರಿಪಾಲಿಸಿದನವರನು ರಾಜ್ಯಾಧಿಕಾರ ಕುಶಲತೆಯಿಂದ //

Holydivine